ನಮ್ಮ ಸಚಿವರು | ಗೆದ್ದಾಗಲೆಲ್ಲ ಮಂತ್ರಿಯಾಗುವ ಅದೃಷ್ಟವಂತ; ಅಧಿಕಾರಕ್ಕೇರಿದ ಬಳಿಕ ಕ್ಷೇತ್ರ ಮರೆಯುವ ನಾಯಕ

Date:

Advertisements

ಹಾಲಿ ಕಾಂಗ್ರೆಸ್ ಸರ್ಕಾರದ ಹಿಂದುಳಿದ ವರ್ಗ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾಗಿರುವ ಶಿವರಾಜ್ ಸಂಗಪ್ಪ ತಂಗಡಗಿ ಅದೃಷ್ಟದ ರಾಜಕಾರಣಿ.

ಇವರು ಯಾವಾಗೆಲ್ಲ ವಿಜಯ ಮಾಲೆಗೆ ಕೊರಳೊಡ್ಡಿದ್ದಾರೋ ಆಗೆಲ್ಲ ಮಂತ್ರಿಯಾಗಿದ್ದಾರೆ ಎನ್ನುವುದೇ ಗಮನಾರ್ಹ.

ಕನಕಗಿರಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಪ್ರತಿನಿಧಿಯಾಗಿರುವ ಶಿವರಾಜ್ ಸಂಗಪ್ಪ ತಂಗಡಗಿ, ಈ ಹಿಂದೆ ಗೆದ್ದ ಎರಡು ಬಾರಿಯೂ ಮಂತ್ರಿಗಿರಿ ಭಾಗ್ಯ ಪಡೆದವರು.

Advertisements

2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲವು ಪಡೆದಿದ್ದ ಅವರಿಗೆ ಆಪರೇಷನ್ ಕಮಲದ ಕಾರಣ ಸಚಿವ ಸ್ಥಾನ ದೊರೆತಿತ್ತು. ಹಾಗೆಯೇ ಮುಂದೆ ಕಾಂಗ್ರೆಸ್ ಸದಸ್ಯರಾದ ಬಳಿಕ, ಸಿದ್ದರಾಮಯ್ಯ ಸರ್ಕಾರದ ಮೊದಲ ಅವಧಿಯಲ್ಲೂ ತಂಗಡಗಿ ಸಚಿವರಾಗಿದ್ದರು. ಈಗ ಸಿದ್ದರಾಮಯ್ಯನವರ ಎರಡನೇ ಅವಧಿ ಸರ್ಕಾರದಲ್ಲೂ ಶಿವರಾಜ್ ಸಚಿವರಾಗಿದ್ದಾರೆ.

ದಲಿತ ಸಮುದಾಯದ ಭೋವಿ ಸಮಾಜಕ್ಕೆ ಸೇರಿರುವ ಶಿವರಾಜ ತಂಗಡಗಿ, ಹುಟ್ಟಿದ್ದು 1971ರ ಜೂನ್ 10ರಂದು. ಇವರ ತಂದೆ ಸಂಗಪ್ಪ ತಂಗಡಗಿ, ತಾಯಿ ಹುಲಿಗೆಮ್ಮ. ಬಾಗಲಕೋಟೆ ಜಿಲ್ಲೆಯ ಇಲಕಲ್‌ನ ಎಸ್ವಿಎಂ ಕಾಲೇಜಿನಲ್ಲಿ 1992ರಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದ ತಂಗಡಗಿ ಆ ಬಳಿಕ ಆಗಿದ್ದು ಗ್ರಾನೈಟ್ ಉದ್ಯಮಿ. ಈ ಹಾದಿಯಲ್ಲಿ ಸಾಗುತ್ತಿದ್ದ ಅವರು ರಾಜಕಾರಣದ ಕಡೆ ಮುಖ ಮಾಡಿ ಸಚಿವನಾಗುವವರೆಗೆ ಬೆಳೆದು ನಿಂತಿದ್ದೀಗ ಇತಿಹಾಸ.ಶಿವರಾಜ್ ತಂಗಡಗಿ 2

ರಾಜಕೀಯ ಜೀವನ

ರಾಜ್ಯ ರಾಜಕೀಯದಲ್ಲಿ ಬಿಜೆಪಿ ಹೊಸ ಅಲೆ ಸೃಷ್ಟಿಸಿದ್ದ ಅವಧಿಯಲ್ಲಿ ಚುನಾವಣಾ ರಾಜಕಾರಣಕ್ಕೆ ಅಡಿ ಇಟ್ಟವರು ಶಿವರಾಜ್ ತಂಗಡಗಿ. ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಅವರು, 2008ರಲ್ಲಿ ಆ ಪಕ್ಷದ ಉಮೇದುವಾರನಾಗಿ ಕನಕಗಿರಿಯಿಂದ ಕಣಕ್ಕಿಳಿಯಲು ಬಯಸಿದ್ದರು.

ಆದರೆ ಬಿಜೆಪಿ ಅದಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಆ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿದ ಅವರು ಚೊಚ್ಚಲ ಗೆಲುವು ದಾಖಲಿಸಿ ಶಾಸಕರಾಗಿ ಆಯ್ಕೆಯಾದರು.

ಬದಲಾದ ರಾಜಕಾರಣದ ಲೆಕ್ಕಾಚಾರದ ಕಾರಣದಿಂದ ಟಿಕೆಟ್ ನಿರಾಕರಿಸಿದ್ದ ಬಿಜೆಪಿ ಪಕ್ಷವೇ ಇವರ ಬೆಂಬಲ ಪಡೆಯುವ ಅನಿವಾರ್ಯತೆ ಎದುರಾಯಿತು. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ತಂಗಡಗಿಯವರಿಗೆ ಮಂತ್ರಿ ಪದವಿ ದಯಪಾಲಿಸಿದ್ದರು.

ಬಿ ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಕೃಷಿ ಮಾರುಕಟ್ಟೆ, ಸಕ್ಕರೆ ಖಾತೆಯ ಸಚಿವರಾಗಿದ್ದ ತಂಗಡಗಿ ಮುಂದಿನ 2 ವರ್ಷದ ಬಳಿಕ ಸಕ್ಕರೆ ಖಾತೆಯ ಬದಲಾಗಿ ಸಣ್ಣ ಕೈಗಾರಿಕಾ ಖಾತೆ ಸಚಿವರಾಗಿ ಬದಲಾದರು.

ಅನರ್ಹತೆ ಶಿಕ್ಷೆ

ಹೀಗಿದ್ದ ತಂಗಡಗಿಯವರ ಮೇಲೆ 2010ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂತು. ಬಿಜೆಪಿ ಸರ್ಕಾರದ ಪತನದ ಸಂಚು ನಡೆಸಿದ್ದಾರೆನ್ನುವ ಆರೋಪದ ಮೇಲೆ ಅಂದಿನ ಸ್ಪೀಕರ್ ಕೆ ಜೆ ಬೋಪಯ್ಯ, ಶಿವರಾಜ್ ತಂಗಡಗಿ ಸೇರಿ ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದರು. ಇವರ ಜೊತೆಜೊತೆಗೆ 11 ಬಿಜೆಪಿ ಶಾಸಕರು ಅನರ್ಹರಾಗಿದ್ದರು.

ಬಿಜೆಪಿ ನಿರ್ಧಾರದ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಅನರ್ಹರ ಬಳಗ ಸುಪ್ರೀಂ ಕೋರ್ಟ್‌ನಿಂದ 2011 ಮೇ 13ರಂದು ಶಾಸಕತ್ವದ ಅನರ್ಹತೆಯನ್ನು ರದ್ದುಮಾಡಿಸಿಕೊಂಡರು. ಇದಾದ ಬಳಿಕ ಪಕ್ಷೇತರ ಶಾಸಕರಾಗಿ ಉಳಿದುಕೊಂಡ ಶಿವರಾಜ್ ತಂಗಡಗಿ 2013ರ ವಿಧಾನಸಭಾ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸೇರಿದ್ದರು.

2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕನಕಗಿರಿಯಿಂದ ಸ್ಪರ್ಧಿಸಿ ಗೆದ್ದ ಶಿವರಾಜ್ ತಂಗಡಗಿ ಎರಡನೇ ಬಾರಿ ಶಾಸಕರಾಗಿ ಸಚಿವರೂ ಆದರು. ಈ ಸಾಲಿನಲ್ಲಿ ಅವರು ಸಣ್ಣ ನೀರಾವರಿ ಸಚಿವರಾಗಿದ್ದರು. ಆದರೆ ಮುಂದೆ ನಡೆದ ರಾಜಕೀಯ ಬೆಳವಣಿಗೆ ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ(2016ರ ಜೂನ್‌ನಲ್ಲಿ) ತಂಗಡಗಿ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಕೈಬಿಡಲಾಗಿತ್ತು.

ಹೀಗೆ ಅಧಿಕಾರದಿಂದ ಕೆಳಗಿಳಿದಿದ್ದ ತಂಗಡಗಿ 2018ರ ಚುನಾವಣೆಯಲ್ಲಿ ಮರಳಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲನುಭವಿಸಿದರು. ಶಾಸಕ ಸ್ಥಾನ ಕಳೆದುಕೊಂಡ ಅವರನ್ನು ಪಕ್ಷ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳಿಸಿ ಪಕ್ಷ ಸಂಘಟನೆಗೆ ಇಳಿಸಿತು.

ಸೋಲಿನ ಪಾಠ ಕಲಿತಿದ್ದ ಶಿವರಾಜ್ ತಂಗಡಗಿ, ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ, ತಮ್ಮ ನೆಲೆಯನ್ನೂ ಭದ್ರಪಡಿಸಿಕೊಂಡಿದ್ದರು. ಈ ಪರಿಣಾಮ 2023ರ ಚುನಾವಣೆಯಲ್ಲಿ “ಕೈʼʼ ಉಮೇದುವಾರನಾಗಿ ಕಣಕ್ಕಿಳಿದು ಗೆಲುವು ಸಾಧಿಸಿ ಮರಳಿ ಮಂತ್ರಿಯಾಗಿದ್ದಾರೆ.ಶಿವರಾಜ್ ತಂಗಡಗಿ 1 1

ಈ ಸುದ್ದಿ ಓದಿದ್ದೀರಾ? : ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು

ಕಾಂಗ್ರೆಸ್‌ನೊಳಗಿನ ಪ್ರಭಾವಿ ಭೋವಿ ಸಮುದಾಯದ ಮುಖಂಡರಾಗಿ ಶಿವರಾಜ್ ತಂಗಡಗಿ ಗುರುತಿಸಿಕೊಂಡಿದ್ದರೂ ರಾಜ್ಯ ನಾಯಕನಾಗಿ ಗುರುತಿಸಿಕೊಳ್ಳಲಾಗದಿರುವುದು ಅವರ ಋಣಾತ್ಮಕ ಬೆಳವಣಿಗೆ. ಜೊತೆಗೆ ಅಧಿಕಾರಕ್ಕೆ ಬಂದಾಗಲೆಲ್ಲವೂ ಕೈ ಹಿಡಿದ ಕ್ಷೇತ್ರದ ಜನರನ್ನು ಮರೆತು ನಿಲ್ಲುತ್ತಾರೆನ್ನುವುದು ಅವರ ಮೇಲಿರುವ ಗುರುತರ ಆರೋಪ, ಉಳಿದಂತೆ ವ್ಯಾಪಾರಿ ಮನೋಭಾವದ ಸಚಿವರು, ಎಲ್ಲವನ್ನೂ ಅದೇ ದೃಷ್ಟಿಕೋನದಿಂದ ನೋಡುತ್ತಾರೆನ್ನುವ ಮಾತುಗಳೂ ಇವರ ಬಗ್ಗೆ ಕೇಳಿಬಂದಿವೆ.

ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿಯೂ ಮಂತ್ರಿಯಾಗುವ ಅವಕಾಶ ಇವರಿಗೆ ಲಭ್ಯವಾಗಿದೆ. ಸಿಕ್ಕಿರುವ ಮಂತ್ರಿ ಪದವಿಯನ್ನು ಸಮರ್ಥವಾಗಿ ಬಳಸಿಕೊಂಡು ತಮ್ಮ ಬಗೆಗಿರುವ ನಕಾರಾತ್ಮಕ ಅಂಶಗಳತ್ತ ಗಮನ ಹರಿಸಿ ಅವನ್ನು ಸರಿಪಡಿಸಿಕೊಂಡು ಹೋಗಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಇವರೊಬ್ಬ ಉತ್ತಮ ನಾಯಕನಾಗಬಹುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X