ನಮ್ಮ ಸಚಿವರು | ದಿನೇಶ್ ಗುಂಡೂರಾವ್: ವರ್ಚಸ್ಸಷ್ಟೇ ಸಾಲದು; ಅಭಿವೃದ್ಧಿಗೂ ಬೇಕಿದೆ ಒತ್ತು

Date:

ಮುಖ್ಯಮಂತ್ರಿಗಳಾಗಿದ್ದ ತಂದೆ ಆರ್. ಗುಂಡೂರಾವ್ ನೆರಳಿನಲ್ಲಿ ರಾಜಕಾರಣದ ಪಟ್ಟುಗಳನ್ನು ಕರಗತ ಮಾಡಿಕೊಂಡ ದಿನೇಶ್ ಗುಂಡೂರಾವ್, 1999ರಿಂದ ಈವರೆಗೂ ಸತತವಾಗಿ ಗೆಲುವು ಸಾಧಿಸುತ್ತ ಬಂದಿದ್ದಾರೆ. ದಿನದಿಂದ ದಿನಕ್ಕೆ ಹೈಕಮಾಂಡ್‌ ಮಟ್ಟದಲ್ಲಿಯೂ ಅವರ ಜನಪ್ರಿಯತೆ ಹೆಚ್ಚುತ್ತಿದೆ

ರಾಜ್ಯ ಕಾಂಗ್ರೆಸ್ಸಿನಲ್ಲಿ ದಿನೇಶ್ ಗುಂಡೂರಾವ್ ಯಾವುದೇ ವಿವಾದವಿಲ್ಲದ, ಸ್ಥಳೀಯವಾಗಿಯಷ್ಟೇ ಅಲ್ಲದೆ ಹೈಕಮಾಂಡ್‌ನಲ್ಲೂ ಹೆಚ್ಚು ಪ್ರಭಾವ ಹೊಂದಿರುವ ನಾಯಕ. ಬೆಂಗಳೂರಿನ ಜನಪ್ರಿಯ ಹಾಗೂ ವಿಭಿನ್ನ ಹಿನ್ನೆಲೆಯ ಮತದಾರರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ಗಾಂಧಿನಗರ ಕ್ಷೇತ್ರದಿಂದ ಸೋಲಿಲ್ಲದ ಸರದಾರನಂತೆ ಸತತ ಆರು ಬಾರಿಯಿಂದ ಜಯಗಳಿಸುತ್ತ ಬರುತ್ತಿದ್ದಾರೆ.

2015ರಲ್ಲಿ ಸಚಿವರಾಗಿದ್ದ ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಎರಡನೇ ಬಾರಿಗೆ ಆರೋಗ್ಯ ಖಾತೆಯ ಮಂತ್ರಿಯಾಗಿದ್ದಾರೆ. ರಾಹುಲ್‌ ಗಾಂಧಿಯವರೊಂದಿಗೆ ಹೆಚ್ಚು ಆಪ್ತವಾಗಿರುವ ರಾಜ್ಯ ಕಾಂಗ್ರೆಸ್‌ನ ಕೆಲವೇ ನಾಯಕರಲ್ಲಿ ದಿನೇಶ್ ಗುಂಡೂರಾವ್ ಒಬ್ಬರು. ಈ ಕಾರಣದಿಂದಲೇ ಎರಡು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು ಎನ್ನಲಾಗುತ್ತದೆ. ತಮಿಳುನಾಡು, ಪಾಂಡಿಚೆರಿ ಹಾಗೂ ಗೋವಾ ರಾಜ್ಯಗಳ ಉಸ್ತುವಾರಿ ಸಹ ನೀಡಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಪ್ರಭಾವಿ ನಾಯಕನ ಪುತ್ರ   

ದಿನೇಶ್ ಅವರ ತಂದೆ ಮಾಜಿ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಅವರು 70 ಮತ್ತು 80ರ ದಶಕದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದವರು. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂಧಿಯವರ ನೀಲಿ ಕಣ್ಣಿನ ಹುಡುಗನಾಗಿದ್ದರು. 1980ರಲ್ಲಿ ಕಾಂಗ್ರೆಸ್‌ನ ಎರಡನೇ ಸಾಲಿನ ನಾಯಕರಾಗಿದ್ದರೂ ಸಿಎಂ ರೇಸಿನಲ್ಲಿದ್ದ ಹೆಚ್‌ ಸಿ ಶ್ರೀಕಂಠಯ್ಯ ಮುಂತಾದವರನ್ನು ತಮ್ಮ ರಾಜಕೀಯ ತಂತ್ರಗಳಿಂದ ಬದಿಗೆ ಸರಿಸಿ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿದ್ದರು. ರಾಜ್ಯದ ಹಿಂದುಳಿದ ವರ್ಗದ ಮುಂಚೂಣಿ ನಾಯಕರಾಗಿ ಅತೀ ಹೆಚ್ಚು ಅವಧಿ- 8 ವರ್ಷಗಳ ಕಾಲ- ಮುಖ್ಯಮಂತ್ರಿಗಳಾಗಿದ್ದ ಡಿ ದೇವರಾಜ್‌ ಅರಸು ಅವರನ್ನೇ ಮೂಲೆಗುಂಪು ಮಾಡಿದ್ದ ನಾಯಕ. ಅಲ್ಲದೆ ಗುಂಡೂರಾವ್‌ ಮುಖ್ಯಮಂತ್ರಿಯಾದಾಗ ಅವರ ವಯಸ್ಸು ಕೇವಲ 43.

ಗುಂಡೂರಾವ್‌ ಅವರ ನಂತರ ಅವರ ಪತ್ನಿ ವರಲಕ್ಷ್ಮಿ ಗುಂಡೂರಾವ್‌ 1996ರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದರೂ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ. ನಂತರ ರಾಜಕೀಯ ಪ್ರವೇಶ ಮಾಡಿದವರು ದಿನೇಶ್ ಗುಂಡೂರಾವ್.

ಈ ಸುದ್ದಿ ಓದಿದ್ದೀರಾ ನಮ್ಮ ಸಚಿವರು | ಕೆ ಎಚ್ ಮುನಿಯಪ್ಪ: ದಲಿತ ರಾಜಕಾರಣದ ಅನಪೇಕ್ಷಿತ ಮಾದರಿಯೇ?

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಾಜಕೀಯ ಪ್ರವೇಶ

ತಂದೆಯ ಹೆಸರಿನ ಬಲದಿಂದ 1998ರಲ್ಲಿ ದಿನೇಶ್ ಗುಂಡೂರಾವ್ ಯುವ ಕಾಂಗ್ರೆಸ್ ಅಧ್ಯಕ್ಷರಾದರು. ಈ ಮೂಲಕ ಪಕ್ಷ ಸಂಘಟನೆ ಆರಂಭಿಸಿದ ಅವರು 1999ರಲ್ಲಿ ಮೊದಲ ಮೊದಲ ಬಾರಿಗೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಗೆದ್ದು ನೇರ ರಾಜಕಾರಣಕ್ಕೆ ಪ್ರವೇಶ ಮಾಡಿದರು.

ಅಪ್ಪನ ಮೂಲ ಕೊಡಗಿನ ಸೋಮವಾರಪೇಟೆಯಾದರೂ ದಿನೇಶ್ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಗಾಂಧಿನಗರವನ್ನು ಆಯ್ಕೆ ಮಾಡಿಕೊಂಡರು. ಗಾಂಧಿನಗರ ಅತಿಹೆಚ್ಚು ಸಿನಿಮಾ ನಿರ್ಮಾಣ ಕಚೇರಿಗಳು ಸೇರಿ ಅತೀ ಹೆಚ್ಚು ವಾಣಿಜ್ಯ ಚಟುವಟಿಕೆಗಳಿಂದ ಕೂಡಿರುವ ಕ್ಷೇತ್ರ. ಉತ್ತರ ಭಾರತ ಮೂಲದ ವ್ಯಾಪಾರಿಗಳೂ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕನ್ನಡಿಗರೇ ಇಲ್ಲಿ ಅಲ್ಪಸಂಖ್ಯಾತರಾಗಿದ್ದು, ಅನ್ಯ ಭಾಷಿಕರೇ ಬಹುಸಂಖ್ಯಾತರಾಗಿದ್ದಾರೆ.

ಗಾಂಧಿನಗರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನ್ನುವ ಕಾರಣದಿಂದಲೇ ದಿನೇಶ್ ಗುಂಡೂರಾವ್ ಈ ಕ್ಷೇತ್ರವನ್ನು ಆರಿಸಿಕೊಂಡರು. ದಿನೇಶ್ 1999ರ ಮೊದಲ ಚುನಾವಣೆಯಲ್ಲಿ ತ್ರಾಸದಿಂದಲೇ ಜಯಗಳಿಸಿದ್ದರು. ಆಗ ಇವರಿಗೆ ಬೆಂಬಲವಾಗಿ ಎಸ್‌ ಎಂ ಕೃಷ್ಣ, ಡಿ ಕೆ ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ನಿಂತಿದ್ದರು. ದಿನೇಶ್ ಗಾಂಧಿನಗರದಿಂದ ಇದುವರೆಗೆ ಸತತ ಆರು ಬಾರಿ ಆಯ್ಕೆಯಾಗಿದ್ದಾರೆ. ಇವರು ತಮ್ಮ ಕ್ಷೇತ್ರದಲ್ಲಿ ಒಂದಷ್ಟು ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಅಂಬೇಡ್ಕರ್ ಭವನ, ಫ್ರೀಡಂ ಪಾರ್ಕ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು ಇವರ ಸಾಧನೆ.

ಅನ್ನಭಾಗ್ಯ ಯೋಜನೆ ಜಾರಿ, ಕೆಪಿಸಿಸಿ ಅಧ್ಯಕ್ಷ

ದಿನೇಶ್ 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾದರು. ಇವರು ಸಚಿವರಾಗಿದ್ದ ಸಮಯದಲ್ಲಿ ಕರ್ನಾಟಕದಲ್ಲಿ ಅನ್ನಭಾಗ್ಯದಂತಹ ಮಹತ್ವದ ಯೋಜನೆ ಜಾರಿಗೆ ಬಂದಿತು. ಅನ್ನಭಾಗ್ಯ ಯೋಜನೆಯ ಯಶಸ್ಸಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದಿನೇಶ್ ಗುಂಡೂರಾವ್‌ ಅವರ ಪಾಲೂ ಇದೆ.

2018ರ ಜೂನ್‌ನಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿತು. ಎರಡು ವರ್ಷ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ಸಕ್ಕರೆ ನಾಡಿನ ಸಮಸ್ಯೆಗಳಿಗೆ ಕುರುಡಾದ ಚಲುವರಾಯಸ್ವಾಮಿ

ಬಿಜೆಪಿಯತ್ತ ವಾಲುತ್ತಿದೆಯಾ ಗಾಂಧಿನಗರ?

ದಿನೇಶ್ ಒಂದಷ್ಟು ಕೆಲಸ ಮಾಡಿದ್ದರೂ ಕ್ಷೇತ್ರ ಸಮಸ್ಯೆಗಳ ಆಗರವಾಗಿದೆ ಎನ್ನುವ ಅಭಿಪ್ರಾಯವಿದೆ. ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧಿನಗರದಲ್ಲಿ ಮೂಲಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶಾಲೆ, ಆಸ್ಪತ್ರೆ, ರಸ್ತೆಗಳಂತಹ ಮೂಲ ಸೌಕರ್ಯಗಳನ್ನು ಸೂಕ್ತ ರೀತಿಯಲ್ಲಿ ಒದಗಿಸಲಾಗಿಲ್ಲ. ಅಭಿವೃದ್ಧಿ ಕಾರ್ಯಗಳಿಲ್ಲದ ಹಿಂದುಳಿದ ಕ್ಷೇತ್ರವಾಗಿದೆ ಎಂಬುದು ಸ್ಥಳೀಯರ ದೂರು. ಇಕ್ಕಟ್ಟಾದ ರಸ್ತೆಗಳು, ಬೆಂಗಳೂರಿನ ಕೇಂದ್ರ ಭಾಗದಲ್ಲಿದ್ದರೂ ಆಧುನಿಕತೆ ಸ್ಪರ್ಶ ಪಡೆಯದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಅನುದಾನ ಬಿಡುಗಡೆಯಲ್ಲಿ ಲೋಪ, ಅಸಹಕಾರದ ಆರೋಪ ಮಾಡಿ, ಎದುರಾಳಿ ನಾಯಕರ ಮೇಲೆ ಹೊಣೆ ಹೊರಿಸುವ ಮೂಲಕ ಅಭಿವೃದ್ಧಿ ಕೆಲಸಗಳ ಹಿನ್ನಡೆಗೆ ಸಮಜಾಯಿಷಿ ಕೊಡುತ್ತಾರೆ ಎನ್ನುವ ದೂರು ದಿನೇಶ್ ಗುಂಡೂರಾವ್‌ ವಿರುದ್ಧ ಇದೆ.

ದಿನೇಶ್ ಅವರಿಂದಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗಾಂಧಿನಗರ ನಿಧಾನಕ್ಕೆ ಬಿಜೆಪಿಯತ್ತ ಸಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಲವು ಬಾರಿ ದಿನೇಶ್ ಕಡಿಮೆ ಅಂತರದಲ್ಲಿ ಗೆದ್ದು ಬಚಾವಾಗಿದ್ದಾರೆ. ಈ ಬಾರಿಯೂ ಇವರು ಕೇವಲ 105 ಮತಗಳ ಅಂತರದಲ್ಲಿ ಗೆಲುವು ಪಡೆದಿದ್ದಾರೆ. ಇಷ್ಟಾದರೂ ಬ್ರಾಹ್ಮಣರ ಕೋಟಾದಲ್ಲಿ ದಿನೇಶ್, ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರಾಗಿರುವ ದಿನೇಶ್ ಗುಂಡೂರಾವ್‌ ಅವರು ತಮ್ಮ ಇಲಾಖೆ ಹಾಗೂ ಕ್ಷೇತ್ರದ ಅಭಿವೃದ್ಧಿಯ ಕಡೆಗೂ ಹೆಚ್ಚು ಗಮನ ಹರಿಸಿದರೆ ಮಾತ್ರ ತಮ್ಮ ಅಸ್ತಿತ್ವವನ್ನು ಭದ್ರಪಡಿಸಿಕೊಳ್ಳಬಹುದು ಎನ್ನುತ್ತಿದ್ದಾರೆ ಕಾರ್ಯಕರ್ತರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನದ ‘ಪೆನ್‌ಡ್ರೈವ್’ ನಮಗೂ ತಲುಪಿದೆ; ಎಸ್ಐಟಿ ರಚಿಸಲು ಸಿಎಂಗೆ ಮನವಿ: ಮಹಿಳಾ ಆಯೋಗ

ರಾಜ್ಯದ ರಾಜಕೀಯ ವಲಯದಲ್ಲಿ ಭಾರೀ ಸುದ್ದಿ ಮಾಡುತ್ತಿರುವ ಹಾಸನದ ಪೆನ್‌ಡ್ರೈವ್‌ ಬಗ್ಗೆ...

ಲೋಕಸಭಾ ಚುನಾವಣೆ | ಮತದಾನ ಮಾಡಲು ವಿಕಲಚೇತನರು, ಹಿರಿಯ ನಾಗರಿಕರಿಗೆ ಸೌಲಭ್ಯ

ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ...

ʼಈ ದಿನʼ ಸಮೀಕ್ಷೆ | ನಂಬಿಕೆ ಉಳಿಸಿಕೊಂಡ ಕಾಂಗ್ರೆಸ್‌; ʼಗ್ಯಾರಂಟಿʼ ಎದುರು ಮಂಕಾದ ಮೋದಿ ಯೋಜನೆಗಳು

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿದ್ದ ಪಂಚ ಗ್ಯಾರಂಟಿಯನ್ನು ವರ್ಷದೊಳಗೆ...

ಹಾಸನ ಪೆನ್‌ಡ್ರೈವ್‌ ಪ್ರಕರಣ: ನಾಲ್ವರು ಸಂತ್ರಸ್ತೆಯರು ಆತ್ಮಹತ್ಯೆಗೆ ಯತ್ನ

ಹಾಸನದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೆ ಜಿಲ್ಲಾದ್ಯಂತ ಆತಂಕ ಹೆಚ್ಚಿಸ್ತಾ ಇದೆ....