ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಾಲ್ ಗ್ರಾಮದಲ್ಲಿ ಕಾಣಿಸಿಕೊಂಡಿರುವ ನಿಗೂಢ ಕಾಯಿಲೆ ಈಗಾಗಲೇ 17 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಕಂಟೈನ್ಮೆಂಟ್ ಝೋನ್ ಮತ್ತು ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಜೊತೆಗೆ ಎಲ್ಲಾ ವೈದ್ಯರುಗಳ ರಜೆಗಳನ್ನು ರದ್ದು ಮಾಡಲಾಗಿದೆ.
ಜಿಲ್ಲಾಡಳಿತ ಅಧಿಕಾರಿಗಳು ಗ್ರಾಮಕ್ಕೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ. ಪಡಿತರದಿಂದ ಕುಡಿಯುವ ನೀರಿನವರೆಗೆ ಸೌಲಭ್ಯಗಳನ್ನು ಅಲ್ಲೇ ಒದಗಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇನ್ನು ನಿಗೂಢ ಕಾಯಿಲೆ ಹರಡುವುದನ್ನು ತಡೆಗಟ್ಟಲು ಸಾರ್ವಜನಿಕ ಮತ್ತು ಖಾಸಗಿ ಸಭೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಅನಾರೋಗ್ಯದ ಕಾರಣವನ್ನು ಗುರುತಿಸಲು ಚಿಕಿತ್ಸೆ ನೀಡಲು ಮತ್ತು ಪರೀಕ್ಷೆಗಳನ್ನು ನಡೆಸಲು ವೈದ್ಯಕೀಯ ತಂಡಗಳನ್ನು ಗ್ರಾಮಗಳಿಗೆ ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ನಿಗೂಢ ಕಾಯಿಲೆಗೆ ಐದು ಮಕ್ಕಳು ಸೇರಿ ಇಡೀ ಕುಟುಂಬವೇ ಬಲಿ; ನನ್ನ ಜಗತ್ತೇ ನಾಶವಾಯಿತು ಎಂದ ಅಸ್ಲಾಂ
ಕೇಂದ್ರ ತಜ್ಞರ ತಂಡವು ಸಾವಿನ ಕಾರಣವನ್ನು ಪತ್ತೆಹಚ್ಚುವ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಸುಮಾರು 200ಕ್ಕೂ ಅಧಿಕ ಮಂದಿಯ ಮಾದರಿಗಳನ್ನು ಪಡೆಯಲಾಗಿದೆ. ವಿವಿಧ ಸಂಸ್ಥೆಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಯಾವುದೇ ವ್ಯಕ್ತಿ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಬೇಕಾದರೆ ಮೊದಲು ಭದ್ರತಾ ತಪಾಸಣೆಗೆ ಒಳಪಡಬೇಕಾಗುತ್ತದೆ.
ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳಲು ಅರೆವೈದ್ಯರು ಮತ್ತು ದಾದಿಯರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿ ಹದಗೆಟ್ಟರೆ ನಾವು ಅವರನ್ನು ರಾಜೌರಿಗೆ ಕರೆದೊಯ್ಯುತ್ತಿದ್ದೇವೆ. ವೈದ್ಯರು ಸಹ ಪರಿಸ್ಥಿತಿಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಕಾಯಿಲೆಯ ಬಗ್ಗೆ ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ” ಎಂದು ವೈದ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
“ಸುಮಾರು ಒಂದೂವರೆ ತಿಂಗಳ ಹಿಂದೆ ಈ ನಿಗೂಢ ಕಾಯಿಲೆ ಹರಡಲು ಪ್ರಾರಂಭಿಸಿದೆ. ಪೀಡಿತರ ಸಂಪರ್ಕಕ್ಕೆ ಬಂದ ಎಲ್ಲ ಜನರನ್ನು ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗಿದೆ. ಆಡಳಿತ ತಂಡವು ಸರಿಯಾದ ಆರೈಕೆ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದೆಯೇ ಎಂದು ನೋಡಿಕೊಳ್ಳುತ್ತಿದೆ” ಎಂದು ಸ್ಥಳೀಯರಾದ ಶಾಫಿಲ್ ಚೌಧರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು-ಕಾಶ್ಮೀರ | ನಿಗೂಢ ಕಾಯಿಲೆ; ಒಂದೇ ಗ್ರಾಮದಲ್ಲಿ 10 ಮಕ್ಕಳು ಸೇರಿ 13 ಮಂದಿ ಸಾವು
ಪ್ರಸ್ತುತ, ಬುಧಾಲ್ ಗ್ರಾಮದ ಆರು ರೋಗಿಗಳು ರಾಜೌರಿಯಲ್ಲಿರುವ ಜಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಶಾಸಕ ಬುಧಾಲ್ ಜಾವೈದ್ ಇಕ್ಬಾಲ್ ಅವರು ಯಾವುದೇ ತುರ್ತು ಪರಿಸ್ಥಿತಿಗಳಿಗೆ ಏರ್ ಆಂಬ್ಯುಲೆನ್ಸ್‌ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಈ ನಿಗೂಢ ಕಾಯಿಲೆಯಲ್ಲಿ ಜನರು ಜ್ವರ, ಬೆವರುವುದು, ವಾಂತಿ, ನಿರ್ಜಲೀಕರಣ ಮತ್ತು ಪ್ರಜ್ಞೆ ಕಳೆದುಕೊಳ್ಳುವುದು ಸೇರಿದಂತೆ ಹಲವು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. ಆರಂಭಿಕ ಪರೀಕ್ಷೆಗಳ ಹೊರತಾಗಿಯೂ, ಯಾವುದೇ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಪತ್ತೆಯಾಗಿಲ್ಲ.
