ನಾಲ್ಕು ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ನಾಲ್ವರು ಶಂಕಿತ ಜಾನುವಾರು ಕಳ್ಳಸಾಗಣೆದಾರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ನಾಲ್ವರು ಆರೋಪಿಗಳು ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಅಂಬ್ಲಮೊಗರು ಗ್ರಾಮದ ಮಹಿಳೆಯಿಂದ ಹಸುಗಳನ್ನು ಖರೀದಿಸಿ ಮಿನಿ ಗೂಡ್ಸ್ ವಾಹನದಲ್ಲಿ ಜಿಲ್ಲೆಯ ಉಳ್ಳಾಲ ತಾಲೂಕಿನ ಅಲೇಕಳಕ್ಕೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ಸ್ಥಳದಲ್ಲಿ, ವಾಹನವು ಕೆಟ್ಟು ನಿಂತಿತ್ತು. ವಾಹನವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರಲ್ಲಿ ಮೂವರು ವಾಹನವನ್ನು ತಳ್ಳಲು ಪ್ರಾರಂಭಿಸಿದರು. ಅವರಿಗೆ ಸಹಾಯ ಮಾಡಲು, ಗ್ರಾಮಸ್ಥರು ಸಹ ಅಲ್ಲಿಗೆ ಬಂದು ವಾಹನವನ್ನು ತಳ್ಳಲು ಪ್ರಾರಂಭಿಸಿದರು.
ವಾಹನದೊಳಗೆ ಟಾರ್ಪಾಲಿನ್‌ನಿಂದ ಮುಚ್ಚಿದ ಹಸುಗಳನ್ನು ಗ್ರಾಮಸ್ಥರು ಗಮನಿಸಿದರು. ಅನುಮಾನಗೊಂಡ ಅವರು ನಾಲ್ವರನ್ನು ಪ್ರಶ್ನಿಸಿದಾಗ, ಅವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | 20 ವರ್ಷಗಳಿಂದ ವಿದ್ಯುತ್ ಶುಲ್ಕ ಪಾವತಿಸದ ಶಿರೋಳ ಗ್ರಾಮಸ್ಥರು!
ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ಕರ್ನಾಟಕ ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣೆ ಕಾಯ್ದೆ-2020ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಂತರ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು.
ಪೊಲೀಸರು ಅವರ ಹೆಸರುಗಳನ್ನು ಅಹ್ಮದ್ ಇರ್ಸಾದ್, ಖಾಲಿದ್ ಬಿ ಎಂ, ಜಾಫರ್ ಸಾದಿಕ್ ಮತ್ತು ಫಯಾಜ್ ಎಂದು ಗುರುತಿಸಿದ್ದಾರೆ. ಖಾಲಿದ್ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯ ಬಂಗ್ರ ಮಂಜೇಶ್ವರದವರಾಗಿದ್ದರೆ, ಉಳಿದವರು ಉಳ್ಳಾಲದವರು ಎಂದು ತಿಳಿದುಬಂದಿದೆ.