ಕಾಶ್ಮೀರದ ಪಿರ್ ಪಂಜಾಲ್ ಕಣಿವೆಯ ಪೂಂಚ್ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಆಯೋಜಿಸಿದ್ದ ತಿರಂಗಾ ರ್ಯಾಲಿಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕಳುಹಿಸುವಂತೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಆದೇಶಿಸಿದೆ. ಸರ್ಕಾರದ ಆದೇಶದ ವಿರುದ್ಧ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ನ್ಯಾಷನಲ್ ಕಾನ್ಫರೆನ್ಸ್ ಸರ್ಕಾರ ರಚಿಸಿದೆ. ಉಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿದ್ದಾರೆ. ಹೀಗಿರುವಾಗ, ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕಳುಹಿಸುವಂತೆ ಆದೇಶಿಸಿರುವುದು ಹಲವರನ್ನು ಆಶ್ಚರ್ಯಗೊಳಿಸಿದೆ.
ಪೂಂಚ್ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ನೀಡಿದ್ದ ಆದೇಶದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 23ರಂದು ಎಬಿವಿಪಿ ಆಯೋಜಿಸಿದ್ದ ರ್ಯಾಲಿಗೆ ಅನುಮತಿ ನೀಡಲಾಗಿತ್ತು. ಅಲ್ಲದೆ, ಕೆಲ ಸರ್ಕಾರಿ ಪ್ರೌಢ ಶಾಲೆಗಳು, ಪೂಂಚ್ನ ಕ್ರೈಸ್ಟ್ ಶಾಲೆ ಮತ್ತು ರಝಾವುಲ್ ಉಲೂಮ್ ಹೈಯರ್ ಸೆಕೆಂಡರಿ ಶಾಲೆಗಳಿಗೆ ’40-50′ ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರನ್ನು ಕಳುಹಿಸಲು ನಿರ್ದೇಶಿಸಲಾಗಿತ್ತು ಎಂದು ವರದಿಗಳು ಹೇಳಿವೆ.
ಸರ್ಕಾರದ ಆದೇಶವು ರಾಜಕೀಯ ಪಕ್ಷಗಳ ಟೀಕೆಗೆ ಗುರಿಯಾಗಿದೆ. “ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಸರ್ಕಾರದ ಅಡಿಯಲ್ಲಿ ಜಮ್ಮು ಕಾಶ್ಮೀರದ ಶಿಕ್ಷಣ ಇಲಾಖೆಯು ಪೂಂಚ್ನಾದ್ಯಂತ ಖಾಸಗಿ ಮತ್ತು ಸರ್ಕಾರಿ ಶಾಲಾ ಮಕ್ಕಳು ಎಬಿವಿಪಿ ಆಯೋಜಿಸಿರುವ ರ್ಯಾಲಿಯಲ್ಲಿ ಭಾಗವಹಿಸುವುದನ್ನು ಕಡ್ಡಾಯಗೊಳಿಸಿತ್ತು. ಇದು ಮುಸ್ಲಿಂ ವಿರೋಧಿ ಧರ್ಮಾಂಧತೆಯನ್ನು ಸಾಮಾನ್ಯಗೊಳಿಸುತ್ತದೆ. ವಿದ್ಯಾರ್ಥಿಗಳನ್ನು ಸೈದ್ಧಾಂತಿಕ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಒತ್ತಾಯಿಸುವ ಮೂಲಕ ಶಿಕ್ಷಣವನ್ನು ಪ್ರಚಾರ ಸಾಧನವಾಗಿ ಬಳಸುವುದು ಸ್ವೀಕಾರಾರ್ಹವಲ್ಲ” ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕಿ ಇಲ್ತಿಜಾ ಮುಫ್ತಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
“ವಿದ್ಯಾರ್ಥಿಗಳು ಎಬಿವಿಪಿ ರ್ಯಾಲಿಯಲ್ಲಿ ಭಾಗವಹಿಸಬೇಕೆಂಬ ಆದೇಶ ಅತ್ಯಂತ ಕಳವಳಕಾರಿ ಮತ್ತು ಸ್ವೀಕಾರಾರ್ಹವಲ್ಲ” ಎಂದು ಜೆ & ಕೆ ವಿದ್ಯಾರ್ಥಿ ಸಂಘದ ವಕ್ತಾರರು ಹೇಳಿದ್ದಾರೆ. ಎಬಿವಿಪಿಯದ್ದು ಗಣರಾಜ್ಯೋತ್ಸವ ಆಚರಣೆಗಿಂತ ಹೆಚ್ಚಾಗಿ ಸೈದ್ಧಾಂತಿಕ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಯಾವ ರಾಜಕೀಯ ಅಥವಾ ಸೈದ್ಧಾಂತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ನಿರ್ದೇಶಿಸುವ ಹಕ್ಕು ಸರ್ಕಾರಕ್ಕೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಣವು ತಟಸ್ಥವಾಗಿರಬೇಕು, ಬಲವಂತ ಅಥವಾ ಬಾಹ್ಯ ಪ್ರಭಾವದಿಂದ ಮುಕ್ತವಾಗಿರಬೇಕು. ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದನ್ನು ನಿರ್ಧರಿಸುವ ಸ್ವಾತಂತ್ರ್ಯವನ್ನು ನೀಡಬೇಕು. ಇಂತಹ ಆದೇಶಗಳನ್ನು ಹೊರಡಿಸುವ ಮೂಲಕ ಸರ್ಕಾರವು ವಿದ್ಯಾರ್ಥಿಗಳ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಮಾತ್ರವಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ ರಾಜಕೀಯ ಧ್ರುವೀಕರಣವನ್ನು ಪ್ರೋತ್ಸಾಹಿಸುತ್ತಿದೆ” ಎಂದು ವಿದ್ಯಾರ್ಥಿ ಸಂಘ ಹೇಳಿದೆ.