ರಾಜ್ಯಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಗಣರಾಜ್ಯೋತ್ಸವ ಅಂಗವಾಗಿ ಮಾತನಾಡಿದ ಅವರು, ಪ್ರಮುಖವಾಗಿ ಗ್ಯಾರಂಟಿ ಯೋಜನೆ ಸರ್ಕಾರದ ಸಾಧನೆ. ಗ್ಯಾರಂಟಿ ಯೋಜನೆಯ ಹೊರತಾಗಿಯೂ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಅಲ್ಲದೇ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಯಾವೆಲ್ಲ ಅಭಿವೃದ್ಧಿ ಕೆಲಸ, ಅಭಿವೃದ್ಧಿ ಯೋಜನೆಗಳು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ 18.51 ಲಕ್ಷ ರೈತರಿಗೆ 15,612.24 ಕೋಟಿ ಮೌಲ್ಯದ ಅಲ್ಪಾವಧಿ ಬೆಳೆ ಸಾಲ ನೀಡಲಾಗಿದೆ. 39,439 ರೈತರಿಗೆ 1,165.12 ಕೋಟಿ ಮೌಲ್ಯದ ಮಧ್ಯಮ ಮತ್ತು ದೀರ್ಘಾವಧಿಯ ಕೃಷಿ ಸಾಲ ನೀಡಲಾಗಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕರ್ನಾಟಕ ಆಸ್ತಿ ಸಮೀಕ್ಷೆಗೆ ಡ್ರೋನ್ ಸರ್ವೆ ನಡೆಸಿ ಸ್ವಾಮಿತ್ವ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಹಾಲು ಉತ್ಪಾದಕರ ಪ್ರೊತ್ಸಾಹ ಯೋಜನೆ ಅಡಿ 8.90 ಲಕ್ಷ ಹಾಲು ಉತ್ಪಾದಕರಿಗೆ 1,124.15 ಕೋಟಿ ಪ್ರೊತ್ಸಾಹ ಧನ ನೀಡಲಾಗಿದೆ. ಮತ್ಸ್ಯ ಯೋಜನೆ ಪರಿಹಾರ ಮೊತ್ತ 1,500 ರಿಂದ 3 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಪೌಷ್ಟಿಕ ಆಹಾರ ಯೋಜನೆಯಡಿ 12 ಪರಿಶಿಷ್ಟ ಸಮುದಾಯಗಳ 47,859 ಕುಟುಂಬಗಳಿಗೆ 120 ಕೋಟಿ ಪೌಷ್ಟಿಕ ಆಹಾರ ವಿತರಣೆ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಕೆಎಸ್‌ಆರ್‌ಟಿಸಿ ನೌಕರರು ಅಪಘಾತದಲ್ಲಿ ಮೃತರಾದರೆ ಒಂದು ಕೋಟಿ ರೂ. ವಿಮಾ ಯೋಜನೆ ಜಾರಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮತ್ತು ಅಪರಾಧ ಪತ್ತೆ ಮತ್ತು ನಿಯಂತ್ರಣದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಎಲ್ಲ ರೀತಿಯ ಅಪರಾಧ ಸಂಖ್ಯೆಗಳು ಕಡಿಮೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಚೋದನಕಾರಿ ಭಾಷಣ – ಆಯುಧ ಹಂಚಿಕೆ ಕಾನೂನು ಉಲ್ಲಂಘನೆಯಲ್ಲವೇ?
ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಎಂದು ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಶಾಲಾ ಮಕ್ಕಳಿಗೆ 6 ದಿನ ಮೊಟ್ಟೆ ನೀಡಲಾಗುತ್ತಿದೆ. ಬೆಳಗಾವಿಯಲ್ಲಿ ಗಾಂಧಿ ಭಾರತ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬಿಡಿಎ 34 ಸ್ಥಳಗಳಲ್ಲಿ ವಸತಿ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ 30 ಸಾವಿರ ವಸತಿ ಘಟಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
2024-25ರ ಅವಧಿಯಲ್ಲಿ 2,491 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳು, 3,103 ಕಿ.ಮೀ ಪ್ರಮುಖ ಜಿಲ್ಲಾ ರಸ್ತೆಗಳ ಸುಧಾರಣೆ ಮತ್ತು ನವೀಕರಣ ಪೂರ್ಣಗೊಂಡಿದೆ. 190 ಸೇತುವೆ ನಿರ್ಮಾಣ ಮಾಡಲಾಗಿದೆ. ರಾಜ್ಯ ಸ್ವಸಂಗ್ರಹದಲ್ಲಿ ರಾಜ್ಯ ಸರ್ಕಾರ ಪ್ರಗತಿ ಸಾಧಿಸಿದೆ. ಡಿಸೆಂಬರ್ ವೇಳೆಗೆ 1,81,908 ಕೋಟಿ ಅದಾಯ ಸಂಗ್ರಹ ಮಾಡಲಾಗಿದೆ. ಶೇ. 13 ಬೆಳವಣಿಗೆ ಸಾಧಿಸಿದೆ ಎಂದು ಹೇಳಿದರು.
