ಬೀದರ್‌ನಲ್ಲಿ ಇತ್ತೀಚೆಗೆ ನಡೆದ ಎಸ್‌ಬಿಐ ಬ್ಯಾಂಕ್ ಎಟಿಎಂ ದರೋಡೆಕೋರರ ಗುಂಡೇಟಿನಿಂದ ಗಂಭೀರ ಗಾಯಗೊಂಡು ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿರುವ ಶಿವಕುಮಾರ್ ಅವರ ಲಾಡಗೇರಿ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಶಿವಕುಮಾರ್ ಅವರ ಯೋಗಕ್ಷೇಮ ವಿಚಾರಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಲಾಡಗೇರಿಯ ಶಿವಕುಮಾರ್ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿದರು.
ಶಿವಕುಮಾರ್‌ಗೆ ನೌಕರಿ ಭರವಸೆ :
ದರೋಡೆಕೋರರ ಗುಂಡೇಟಿನಿಂದ ಗಂಭೀರ ಗಾಯಗೊಂಡು ಹೈದ್ರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಬಂದಿರುವ ಶಿವಕುಮಾರ್ ಅವರ 10 ಲಕ್ಷ ಚಿಕಿತ್ಸಾ ವೆಚ್ಚ ಸಿಎಂಎಸ್ ಕಂಪನಿ ಭರಿಸಿದೆ. ಶಿವಕುಮಾರ್ ಅವರ ಪ್ರಕರಣವನ್ನು ವಿಶೇಷವೆಂದು ಪರಿಗಣಿಸಿ ಅವರಿಗೆ ನೌಕರಿ ಕೊಡುವ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆʼ ಎಂದು ಸಚಿವ ಈಶ್ವರ ಬಿ.ಖಂಡ್ರೆ ಅವರು ಆಶ್ವಾಸನೆ ನೀಡಿದರು.
ಬೀದರ್ ನಗರದ ನೆಹರೂ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ʼಜನವರಿ 16ರಂದು ನಗರದ ಎಸ್‌ಬಿಐ ಕಚೇರಿ ನಡೆದ ಎಟಿಎಂ ದರೋಡೆ ಪ್ರಕರಣದ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ಈ ಪ್ರಕರಣದ ದರೋಡೆಕೋರರ ವಿರುದ್ಧ ದೇಶದ ಹಲವೆಡೆ ಕೊಲೆ ಪ್ರಕರಣಗಳಿದ್ದು, ಇಡೀ ದೇಶದ ಪೊಲೀಸರಿಗೆ ಅವರು ಬೇಕಾಗಿದ್ದಾರೆʼ ಎಂದರು.
ʼಅನ್ಯ ರಾಜ್ಯಗಳ ಪೊಲೀಸರ ಸಹಕಾರದೊಂದಿಗೆ ಜಿಲ್ಲೆಯ ಪೊಲೀಸರು ದರೋಡೆಕೋರರ ಪತ್ತೆ ಕಾರ್ಯ ನಡೆಸಿದ್ದಾರೆ. ಅವರು ಎಲ್ಲಿಯೇ ಅಡಗಿ ಕುಳಿತರು ಪೊಲೀಸರು ಅವರನ್ನು ಬಂಧಿಸುತ್ತಾರೆ. ಅವರು ಯಾವ ಜಿಲ್ಲೆಯವರು, ಕುಟುಂಬದ ಹಿನ್ನಲೆ ಬಗ್ಗೆ ಈಗಾಗಲೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ದರೋಡೆಕೋರರನ್ನು ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆʼ ಎಂದು ಸಚಿವರು ವಿವರಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ನಗರ ಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಮತ್ತಿತರರು ಹಾಜರಿದ್ದರು.