ರಾಯಚೂರು ಜಿಲ್ಲೆಯ ಬಳಿ ರಾಜ್ಯ ಹೆದ್ದಾರಿಯ ರಸ್ತೆಮಧ್ಯೆ ಗುಂಡಿ ಬಿದ್ದಿದ್ದು, ರಾತ್ರಿ ವೇಳೆ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆಯೆಂದು ಯುವಕರ ತಂಡವೊಂದು ಸ್ವಂತ ಹಣದಿಂದ ರಸ್ತೆಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದನ್ನು ಕಂಡು ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ತಾಲೂಕಿನ ರಾಜ್ಯ ಹೆದ್ದಾರಿಯಲ್ಲಿ ಹಾದುಹೋಗುವ ಹೊನ್ನಳ್ಳಿ ಗ್ರಾಮದ ಹತ್ತಿರ ರಸ್ತೆ ಗುಂಡಿ ಬಿದ್ದಿದ್ದ ಕಾರಣ ದ್ವಿಚಕ್ರ ವಾಹನಸವಾರರು ಬಿದ್ದು ಗಾಯಗೊಂಡು ಶಾಪ ಹಾಕುತ್ತಿದ್ದರು. ಹಾಗಾಗಿ ವಾಹನ ಸವಾರರ ಪರದಾಟ ನೋಡಲಾರದೆ ರೆಹಮತ್ ಫೌಂಡೇಶನ್ ಯುವಕರು ಸೇರಿ ರಸತೆ ಗುಂಡಿ ಮುಚ್ಚಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಬಗ್ಗೆ ಫೌಂಡೇಶನ್ ಮುಖಂಡ ಲಾಲ್ ಪೀರ್ ಮಾತನಾಡಿ, “ಈ ರಸ್ತೆಯು ರಾಜ್ಯ ಹೆದ್ದಾರಿಯಾಗಿರುವುದರಿಂದ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತವೆ. ಹಲವಾರು ಮಂದಿ ವಾಹನ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡು ಸಾವು ನೋವು ಅನುಭವಿಸಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಸಂವಿಧಾನ ರಕ್ಷಣೆ ಮಾಡಬೇಕು: ಹಸನ ತಟಗಾರ
“ಅಧಿಕಾರಿಗಳು, ರಾಜಕಾರಣಿಗಳೂ ಕೂಡ ಇದೇ ಹೆದ್ದಾರಿಯಲ್ಲಿ ಓಡಾಡುತ್ತಾರೆ. ರಸ್ತೆ ಗುಂಡಿಬಿದ್ದಿತುವ ಬಗ್ಗೆ ಯಾರಿಗೂ ಅರಿವೇ ಇಲ್ಲದಂತೆ ಓಡಾಡುತ್ತಾರೆ. ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಕೂಡಾ ಕಾರ್ಯ ನಿರ್ವಹಿಸಲಿಲ್ಲ. ಹಾಗಾಗಿ ನಮ್ಮ ತಂಡದೊಂದಿಗೆ ನಾವೇ ಅನಿವಾರ್ಯವಾಗಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಿರ್ವಹಿಸಬೇಕಾಯಿತು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ರಾಜ್ ಮಹ್ಮದ್, ಅಜ್ಮೀರ್ ಪಾಶ, ಜಾಫರ್, ಶಾಹಿದ್ ಸೇರಿದಂತೆ ಇತರರು ಇದ್ದರು.
