ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕು ಹೊದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪಾಲೆಮಾಡು ಗ್ರಾಮದ ಕಾನ್ಶೀರಾಂ ನಗರ ನಿವೇಶನ ರಹಿತರ ಹೋರಾಟದ ಫಲವಾಗಿ ನೂರಾರು ಕುಟುಂಬಗಳಿಗೆ ಸೂರು ಸಿಕ್ಕಿ ಬದುಕು ಕಟ್ಟಿಕೊಂಡ ಗ್ರಾಮ. ಈ ನಗರ ನೆಲೆಗೊಂಡು ಹದಿನೆಂಟು ವರ್ಷಗಳನ್ನ ಪೂರೈಸಿದ್ದು, ನಿವಾಸಿಗಳಲ್ಲಿ ಸಂತಸ ಮನೆ ಮಾಡಿದೆ.
ಭೂಮಿ ಹಾಗೂ ವಸತಿ ವಂಚಿತ ಹೋರಾಟ ಸಮಿತಿಯ ಕೆ ಮೊಣ್ಣಪ್ಪ ಅವರ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ನಿವೇಶನಕ್ಕಾಗಿ ಹೋರಾಟ ನಡೆದಿತ್ತು. ದಲಿತರು, ಆದಿವಾಸಿಗಳು, ಶೋಷಿತರು ಸೇರಿದಂತೆ ಸೂರಿಗಾಗಿ, ನಿವೇಶನಕ್ಕಾಗಿ ಭೂ ಮಾಲೀಕರ ವಿರುದ್ಧ ಹೋರಾಟ ನಡೆಸಿ ಕಡೆಗೂ ಕಾನ್ಸಿರಾಂ ನಗರ ನೆಲೆಗೊಂಡಿದ್ದು ಈಗ ಇತಿಹಾಸ.
ಗಟ್ಟಿತನದ ಹೋರಾಟದ ಮೂಲಕ ಕಾನ್ಶೀರಾಂ ನಗರ ಇಂದು ನೂರಾರು ಕುಟುಂಬಗಳಿಗೆ ಆಸರೆ ಆಗಿ ಸಾವಿರಾರು ಜನ ವಾಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ 76ನೆಯ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಕಾನ್ಸಿರಾಂ ನಗರದ 18ನೇ ವರ್ಷದ ಆಚರಣೆ ನಿನ್ನೆ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, “ಹೋರಾಟ ಗಟ್ಟಿಯಾಗಬೇಕು ಎಂದರೆ ಹೋರಾಟಗಾರ ಬದ್ಧತೆಯಿಂದ ಇರಬೇಕು. ಆ ಹೋರಾಟಗಾರ ತನಗಾಗಿ ಅಲ್ಲದೆ ತನ್ನವರಿಗಾಗಿ ನಿಲ್ಲುವ ಎದೆಗಾರಿಕೆ ಬೆಳೆಸಿಕೊಂಡಿರಬೇಕು. ಪಾಲೆಮಾಡು ಹೋರಾಟ ಅಷ್ಟು ಸುಲಭವಾಗಿರಲಿಲ್ಲ. ಅದರಲ್ಲಿ ನಾನೂ ಸಹ ಭಾಗಿಯಾಗಿರುವೆ.
ಯಾವುದಕ್ಕೂ ಜಗ್ಗದೆ, ತಲೆ ಬಾಗದೆ ಎಂತಹ ಪರಿಸ್ಥಿತಿ ಎದುರಾದರು ಹೋರಾಟ ಬಿಡದೆ ಕಟ್ಟಿದ ಗ್ರಾಮ ಪಾಲೆಮಾಡುವಿನ ಕಾನ್ಶೀರಾಂ ನಗರ.
ಎಷ್ಟೇ ಸರ್ಕಾರಗಳು ಬದಲಾದರೂ ಶೋಷಿತರ ಬಗ್ಗೆ ಕಾಳಜಿ ಇಲ್ಲ. ಕೊಡಗಿನ ಮಟ್ಟಿಗೆ ಇದುವರೆಗೆ ಬಡ ಕುಟುಂಬಗಳಿಗೆ ಯಾವುದೇ ಸವಲತ್ತು ಸಿಗದೆ, ಭೂ ಗುತ್ತಿಗೆ ಆದೇಶ ತಂದು ಗಧಾಪ್ರಹಾರ ನಡೆಸಿರುವುದು ಶೋಚನೀಯ. ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಸಹ ದಲಿತರ ಕಲ್ಯಾಣಕ್ಕೆ ಬದ್ಧರಾಗದೆ ಕೇವಲ ಕಾಂಗ್ರೆಸ್ ಪಕ್ಷದವರಂತೆ ವರ್ತನೆ ಮಾಡುತ್ತಿರುವುದು ರಾಜಕೀಯದ ಅಧಃಪತನ ಎಂದರು.
ಸಿಪಿಎಂಎಲ್ ಪಕ್ಷದ ರಾಜ್ಯ ಸದಸ್ಯ ಹಾಗೂ ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿಯ ಮುಖಂಡ ನಿರ್ವಾಣಪ್ಪ ಮಾತನಾಡಿ, “ಕೊಡಗಿನಲ್ಲಿ ಭೂ ಗುತ್ತಿಗೆ ಆದೇಶದಿಂದ ಜನರ ಬದುಕು ಸ್ಥಿರವಿಲ್ಲದಂತಾಗಿದೆ. ಶೋಷಿತ ಸಮುದಾಯಗಳಿಗೆ ನಿವೇಶನ, ಸೂರು ಇಲ್ಲದಾಗಿ ಬಡವರ ಬದುಕು ಬೀದಿ ಪಾಲಾಗಿದೆ. ಇಂತಹ ಸಂದರ್ಭದಲ್ಲಿ ಮಡಿಕೇರಿಯಲ್ಲಿ ಭೂ ಗುತ್ತಿಗೆ ಆದೇಶ ರದ್ದು ಮಾಡುವಂತೆ ಬೃಹತ್ ಜಾಥಾ ನಡೆಸಿ ಜಿಲ್ಲಾಡಳಿತ, ಸರ್ಕಾರದ ಗಮನಕ್ಕೆ ತರಲಾಗಿದೆ. ಇನ್ನಾದರೂ ಬಡ ಜನರಿಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ?: ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕಡೆ ಶಾಸಕರು ಗಮನ ಹರಿಸಬೇಕು: ಎಸ್‌ಡಿಪಿಐ ಆಗ್ರಹ
ಕಾರ್ಯಕ್ರಮದಲ್ಲಿ ಸಹಾಯಕ ಸಾಂಖಿಕ ಅಧಿಕಾರಿ ರೂಪ, ಪಿಡಿಓ ಎ ಎ ಅಬ್ದುಲ್ಲಾ, ಗ್ರಾಪಂ ಸದಸ್ಯೆ ಕುಸುಮಾವತಿ ಪಿ ಎ, ಲಕ್ಷ್ಮಿ, ಎಂ ಬಿ ಹಮೀದ್, ರೈತ ಮುಖಂಡ ಕಂದಗಾಲ ಶ್ರೀನಿವಾಸ್, ಸಣ್ಣಪ್ಪ, ಹೆಬ್ಬಾಲೆ, ಮಂಜು, ದಿನೇಶ್, ಟಿ ಎಂ ಕಾವೇರಿ, ಪತ್ರಕರ್ತ ಮೋಹನ್ ಮೈಸೂರು, ಹೇಮಂತ್ ಕುಮಾರ್ ಸೇರಿದಂತೆ ಹಲವರು ಇದ್ದರು.

