ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೊನ್ನಾಳಿ ಮೂಲದ ಪುಷ್ಪಲತಾ (46) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಶಿವಮೊಗ್ಗದ ಖಾಸಗಿ ಫೈನಾನ್ಸ್‌ನ ಸಾಲದ ಸುಳಿಗೆ ಸಿಲುಕಿ ನಲುಗಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.
ಭಾನುವಾರದಂದು ಪುಷ್ಪಲತಾ ಶಾಲೆಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ, ಶಾಲೆಯಿಂದ ವಾಪಸ್ ಆದ ಬಳಿಕ ಹೊನ್ನಾಳಿಯ ರಾಘವೇಂದ್ರ ಮಂಟಪದ ಬಳಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮನೆ ಕಟ್ಟಿಸಬೇಕೆಂಬ ಆಸೆ ಹೊಂದಿದ್ದ ಪತಿ ಹಾಲೇಶ್ ಹಾಗೂ ಪುಷ್ಪಲತಾ ಫೈನಾನ್ಸ್ ಕಂಪನಿ ಮೂಲಕ ಸುಮಾರು ₹38 ಲಕ್ಷ ಸಾಲ ಪಡೆದಿದ್ದರು. ಮರುಪಾವತಿ ಸಂಬಂಧ ಫೈನಾನ್ಸ್ ಸಿಬ್ಬಂದಿ ಹಣದ ಕಂತು ಹಾಗೂ ಬಡ್ಡಿ ಕಟ್ಟಲು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ದಂಪತಿ ಆತಂಕಕ್ಕೆ ಒಳಗಾಗಿರಬಹುದು ಎಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ಸಂವಿಧಾನವೇ ರಾಷ್ಟ್ರದ ಸರ್ವೋಚ್ಚ ಕಾನೂನು: ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
ಈ ಬಗ್ಗೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಸ್ಪಷ್ಟನೆ ನೀಡಿ, “ಶಿಕ್ಷಕಿ ತುಂಗಾಭದ್ರಾ ನದಿಗೆ ಹಾರಿರುವುದು ನಿಜ. ಆದ್ರೆ, ಫೈನಾನ್ಸ್ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಇಲ್ಲವೋ ಎಂಬುದು ತನಿಖೆಯಿಂದ ಇನ್ನಷ್ಟೇ ಗೊತ್ತಾಗಬೇಕಿದೆ. ಶಿವಮೊಗ್ಗದ ಫೈನಾನ್ಸ್ ನಲ್ಲಿ ₹35ರಿಂದ ₹40 ಲಕ್ಷ ಸಾಲ ಪಡೆದಿದ್ದರು ಎಂದು ತಿಳಿದು ಬಂದಿದೆ. ಯಾವ ವಿಚಾರಕ್ಕೆ ನದಿಗೆ ಹಾರಿದ್ದಾರೆ ಎಂಬ ಕುರಿತಂತೆ ಸ್ಪಷ್ಟತೆ ಇಲ್ಲ. ಶೀಘ್ರವೇ ತನಿಖೆ ಕೈಗೊಂಡು ಆತ್ಮಹತ್ಯೆಗೆ ನಿಖರ ಕಾರಣ ತಿಳಿಯಲಾಗುವುದು. ಅಲ್ಲಿವರೆಗೆ ಯಾವುದೇ ಊಹಾಪೋಹ ಬೇಡ” ಎಂದು ತಿಳಿಸಿದರು.
