ಮೈಕ್ರೋ ಫೈನಾನ್ಸ್ ಕಂಪೆನಿಗಳು ಭದ್ರತೆ ಇಲ್ಲದೇ ಅಮಾಯಕ ಮಹಿಳೆಯರಿಗೆ ನಕಲಿ ದಾಖಲಾತಿ ಸೃಷ್ಠಿ ಮಾಡಿ ಸಾಲ ನೀಡಿ, ಸಾಲ ಮರುಪಾವತಿಗಾಗಿ ಕಿರುಕುಳ ನೀಡುವ ಖಾಸಗಿ ಬ್ಯಾಂಕ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಿಪಿಐಎಂಎಲ್ ಲಿಬರೇಶನ್ ವತಿಯಿಂದ ರಾಯಚೂರು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಪ್ರತಿಭಟಿಸಿದರು.
“ಫೈನಾನ್ಸ್ ಗುಂಪಿನಲ್ಲಿ ಹತ್ತು ಮಂದಿಯಿರುವ ಗುಂಪಿನಲ್ಲಿ, ಸಾಲ ಪಡೆದ ಒಬ್ಬರು ಮರುಪಾವತಿ ಮಾಡದಿದ್ದರೆ, ಉಳಿದ ಒಂಬತ್ತು ಮಂದಿಯವರ ಮನೆ ಮುಂದೆ ನಿಂತು ಸಾಲ ವಸೂಲಿ ಮಾಡಬೇಕಾಗುತ್ತದೆ. ಹೀಗೆ ಸಾಲ ಮರುಪಾವತಿ ಕಿರುಕುಳ ಶುರುವಾಗುತ್ತದೆ. ಇದರಿಂದ ಬೇಸತ್ತ ಸಾಲಗಾರರು ಆತ್ಮಹತ್ಯೆಗೆ ಗುರಿಯಾಗುತ್ತಿದ್ದಾರೆ” ಎಂದು ಸಿಪಿಐಎಂಎಲ್ ಲಿಬರೇಶನ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
“ಸಂಸ್ಥೆಗಳಿಂದ ನೇಮಕಗೊಂಡಿರುವ ವಸೂಲಿಗಾರರ ಕಿರುಕುಳ ಹಾಗೂ ದಾಳಿಯ ಕಾರಣಕ್ಕೆ ರಾಜ್ಯದಲ್ಲಿ ಹಲವು ನೆಲೆಯ ಹೋರಾಟಗಳು ಶುರುವಾಗಿವೆ. ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಕೆಲವು ಬೃಹತ್ ಸಂಸ್ಥೆಗಳು ತಮ್ಮ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿವೆ. ಅಂತಹ ಹಲವು ಸಂಸ್ಥೆಗಳು ಮೈಕ್ರೋ ಫೈನಾನ್ಸ್ ಘಟಕಗಳನ್ನು ತೆರೆದು ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆಂದು ಹೇಳಲಾಗಿದೆ” ಎಂದರು.
“ಅವಿಭಜಿತ ಆಂಧ್ರಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಹಾವಳಿ ಮಿತಿಮೀರಿದ್ದರಿಂದ, 2010ರಲ್ಲಿ ಸುಗ್ರೀವಾಜ್ಞೆ ಮೂಲಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆಂಧ್ರದಿಂದ ಕಾಲ್ಕಿತ್ತವು. ಅಂತಹ ಅನೇಕ ಸಂಸ್ಥೆಗಳು ಕರ್ನಾಟಕದಲ್ಲಿ ತಮ್ಮ ಅಂಗಡಿಗಳನ್ನು ತೆರೆದಿವೆ. ಮುಂಬರುವ ದಿನಗಳಲ್ಲಿ ನಮ್ಮ ರಾಜ್ಯದಲ್ಲಿಯೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಪಡೆದ ಸಾಲ ತೀರಿಸಲಾಗದೆ, ಸಾಲ ವಸೂಲಾತಿಯ ಕಟ್ಟುಪಾಡುಗಳಿಂದ ತೀವ್ರ ತೊಂದರೆ ಅನುಭವಿಸುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಆಂಧ್ರ ಸರ್ಕಾರ ಜಾರಿಗೊಳಿಸಿದ ಮೈಕ್ರೋ ಫೈನಾನ್ಸ್ ನಿಯಂತ್ರಣ ಕಾಯ್ದೆಯ ಮಾದರಿಯಲ್ಲಿ ನಮ್ಮ ರಾಜ್ಯ ಸರ್ಕಾರವೂ ಈ ಫೈನಾನ್ಸ್ ಸಂಸ್ಥೆಗಳ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕಿದೆ” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ನಡೆಗೆ ಎಐಡಿಎಸ್‌ಒ ವಿರೋಧ
ಮೈಕ್ರೋ ಫೈನಾನ್ಸ್ ಕಂಪನಿಗಳು ಭದ್ರತೆಯಿಲ್ಲದೆ ಅಮಾಯಕ ಮಹಿಳೆಯರಿಗೆ ನಕಲಿ ದಾಖಲಾತಿ ಸೃಷ್ಟಿಮಾಡಿ ಸಾಲ ನೀಡಿ, ಸಾಲ ಮರುಪಾವತಿಗಾಗಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಮೈಕ್ರೋ ಫೈನಾನ್ಸ್ ಖಾಸಗಿ ಬ್ಯಾಂಕ್‌ಗಳ ಎಷ್ಟು ಪರವಾನಗಿ ತೆಗೆದುಕೊಂಡಿದ್ದಾರೆ. ಎಷ್ಟು ಅನಧಿಕೃತವಾಗಿ ನಡೆಯುತ್ತಿವೆ ಎಂಬುದರ ಕುರಿತು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸಬೇಕು” ಎಂದು ಆಗ್ರಹಿಸಿದರು.
ಈ ವೇಳೆ ಅಜೀಜ್ ಜಾಗಿರದಾರ, ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್, ಚಾಂದಾಸಾಬ್ ಬೆಳ್ಳಿಗಿನೂರು ದೇವರಾಜ ಮಡಿವಾಳ, ಶ್ರೀನಿವಾಸ ಬುಕ್ಕನ್ನಟ್ಟಿ, ನರಸಮ್ಮ ಮಸ್ಕಿ, ಬಸವರಾಜ್ ಹಿರೇದಿನ್ನಿ, ರವಿ ಸೇರಿದಂತೆ ಇತರರು ಇದ್ದರು.
