ರೈತರಿಗೆ ನೀಡುವ ಸಾಲ ಕಡಿತ ಮಾಡಿರುವ ನಬಾರ್ಡ್ ನೀತಿ ವಿರೋಧಿಸಿ, ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಜ.29ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಎದುರು ಬೃಹತ್ ಪ್ರತಿಭಟನೆ ನಡೆಸಲಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, “ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡಲು ಸ್ಥಾಪನೆಯಾಗಿರುವ ನಬಾರ್ಡ್ ಮೂಲಕ ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ದೂರದೃಷ್ಟಿಯಿಂದ ಸಹಕಾರ ಚಳವಳಿ ಕಟ್ಟಿದ ಸಹಕಾರಿ ಸಂಸ್ಥೆಗಳು ದೇಶದ ಬೆನ್ನೆಲುಬಾಗಿ ದುಡಿಯುತ್ತಿದ್ದು ಗ್ರಾಮೀಣ ಪ್ರದೇಶದ ಆರ್ಥಿಕತೆ ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಲಿನ ಡೈರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಡಿ ಸಿ ಸಿ ಬ್ಯಾಂಕ್‌ಗಳು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಮೂರು ವರ್ಷಗಳಿಂದ ಪ್ರತಿ ವರ್ಷ ಕೃಷಿ ಕ್ಷೇತ್ರಕ್ಕೆ ನೀಡುವ ಸಾಲದ ಮೊತ್ತವನ್ನು ಕಡಿಮೆ ಮಾಡುತ್ತಲೇ ಬರುತ್ತಿದೆ. ಕೇಂದ್ರದ ಈ ನೀತಿಯಿಂದಾಗಿ ನಬಾರ್ಡ್ ರೈತರಿಗೆ ನೀಡುತ್ತಿದ್ದ ಸಾಲದ ಮೊತ್ತ ಕಡಿಮೆ ಮಾಡಿ ಈ ಸಾಲಿನಲ್ಲಿ ನಮ್ಮ ರಾಜ್ಯಕ್ಕೆ ನೀಡುತ್ತಿದ್ದ ಸಾಲವನ್ನು 58% ತಗ್ಗಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಇಡೀ ಕೃಷಿ ವ್ಯವಸ್ಥೆಯನ್ನೇ ನಾಶ ಮಾಡಿ ಕೃಷಿ ಕ್ಷೇತ್ರವನ್ನು ಸಂಪೂರ್ಣ ಕಾರ್ಪೊರೇಟ್ ಕಂಪನಿಗಳ ವಶಕ್ಕೆ ನೀಡಲು ಹುನ್ನಾರ ನಡೆಸಿದೆ” ಎಂದು ಆರೋಪಿಸಿದರು.
“ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಮತ್ತು ಕಿರುಕುಳದಿಂದ ನಮ್ಮ ಗ್ರಾಮೀಣ ಪ್ರದೇಶದ ಮಹಿಳೆಯರು ಸಂಕಷ್ಟಕ್ಕೀಡಾಗಿದ್ದಾರೆ. ಮೈಕ್ರೋ ಫೈನಾನ್ಸ್ ಮೇಲೆ ಯಾರಿಗೂ ಹಿಡಿತ ಇಲ್ಲ. ಮರ್ಯಾದೆಗೆ ಅಂಜಿ ಬಡಜನರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಕೆಲವರು ಊರನ್ನೇ ತೊರೆಯುತ್ತಿದ್ದಾರೆ. ಸರ್ಕಾರ ಕೂಡಲೇ ಮೈಕ್ರೋ ಫೈನಾನ್ಸ್‌ಗಳ ಕಿರುಕುಳ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಬುಧವಾರ (ಜ.29) ಬೆಳಿಗ್ಗೆ 11ಗಂಟೆಗೆ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಡಿ ಸಿ ಸಿ ಬ್ಯಾಂಕಿನ ಆಡಳಿತ ಮಂಡಳಿಯವರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಷೇರುದಾರರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ರೈತ ಸಂಘದ ಪದಾಧಿಕಾರಿಗಳಾದ ಜೆ ಎಂ ವೀರಸಂಗಯ್ಯ, ಎನ್ ಡಿ ವಸಂತಕುಮಾರ್, ಗೋಪಾಲ ಪಾಪೇಗೌಡ, ಅರುಣಕುಮಾರ್ ಕುರುಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.