- ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸುವಂತೆ ಸೂಚನೆ
- ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಶಾಲಾ ಪಠ್ಯ ಪರಿಷ್ಕರಣೆ
ಬಿಜೆಪಿ ಸರ್ಕಾರದ ಅವಧಿಯಲ್ಲಾಗಿದ್ದ ದೋಷಪೂರಿತ ಶಾಲಾ ಪಠ್ಯಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು ತಾತ್ಕಾಲಿಕ ಸಮಿತಿ ರಚಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿನ ಈ ಸಮಿತಿ ಶಾಲಾ ಪಠ್ಯದಲ್ಲಿ ಲೋಪದೋಷಗಳನ್ನು ಸರಿಪಡಿಸಲಿದೆ.
ಮಂಗಳವಾರ ಬೆಂಗಳೂರಿನ ಶಕ್ತಿ ಭವನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2017ನೇ ಸಾಲಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮುಖ್ಯಸ್ಥರಾಗಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ, ಶಿಕ್ಷಣ ತಜ್ಞ ನಿರಂಜನಾರಾಧ್ಯ ಸೇರಿದಂತೆ ಹಲವು ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳು, ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಿದರು.
ಸಭೆಯಲ್ಲಿ ಈ ಸಾಲಿನ ಮಟ್ಟಿಗೆ ವಿವಾದಿತ ಹಾಗೂ ಆಕ್ಷೇಪಣೆಗಳಿರುವ ಪಠ್ಯಗಳನ್ನು ಬೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ತೀರ್ಮಾನಿಸಲಾಗಿದೆ. ಇನ್ನೊಂದು ವಾರದಲ್ಲಿ ಪಠ್ಯ ಪರಿಷ್ಕರಣೆ ಲೋಪದೋಷ ಸಂಬಂಧ ವರದಿ ನೀಡುವಂತೆ ಸಿಎಂ ಸಮಿತಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ವಾರ್ತಾ ಇಲಾಖೆ ನೂತನ ಆಯುಕ್ತರಾಗಿ ನಿಂಬಾಳ್ಕರ್; 11 ಐಎಎಸ್…
ಹಾಲಿ ಶೈಕ್ಷಣಿಕ ವರ್ಷದಲ್ಲಿ ಹೊಸ ಪಾಠಗಳ ಸೇರ್ಪಡೆ ಮಾಡದೆ ದೋಷಪೂರಿತ ಪಠ್ಯಗಳ ಬೋಧನೆಯನ್ನು ಮಾಡದಿರಲು ನಿರ್ಧರಿಸಿದೆ. ಕಳೆದ ವರ್ಷ ಸೇರಿಸಲಾಗಿದ್ದ ಆರ್.ಎಸ್ ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡಗೇವಾರ್, ಮತ್ತು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಪಾಠಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.
2023-24ನೇ ಶೈಕ್ಷಣಿಕ ಸಾಲಿನ ಪಠ್ಯ ಪುಸ್ತಕಗಳು ಈಗಾಗಲೇ ಮುದ್ರಣವಾಗಿ ಶಾಲೆಗಳನ್ನು ತಲುಪಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಮುದ್ರಿಸುವ ಪ್ರಕ್ರಿಯೆಗೆ ಕೈಹಾಕದಿರಲು ಸರ್ಕಾರ ನಿರ್ಧರಿಸಿದೆ. ಮುಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ಅಧಿಕೃತ ಆದೇಶ ಹೊರಡಲಿಸಲು ಸರ್ಕಾರ ಸಿದ್ದತೆ ನಡೆಸಿದೆ ಎನ್ನಲಾಗಿದೆ.
ಬರಗೂರು ರಾಮಚಂದ್ರಪ್ಪ ಸ್ಪಷ್ಟನೆ
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಗೆ ನಾನು ಅಧ್ಯಕ್ಷನಾಗಲು ಒಪ್ಪಿಲ್ಲ. ಹೊಸ ಸಮಿತಿ ಆಗಿಲ್ಲ. ಸದ್ಯಕ್ಕೆ ಸಣ್ಣ ಪುಟ್ಟ ಪರಿಷ್ಕರಣೆ ಮಾತ್ರ ಮಾಡುತ್ತಾರೆ. ಆನಂತರ ಹೊಸ ಸಮಿತಿ ಮಾಡಿ ಮುಂದಿನ ವರ್ಷ ಹೊಸ ಪುಸ್ತಕ ತರುತ್ತಾರೆ.