ಧಾರವಾಡ ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 76 ನೇ ಗಣರಾಜ್ಯೋತ್ಸವ ಅಂಗವಾಗಿ ಜ. 26ರಂದು ಸಾಯಂಕಾಲ ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯತಿ ಆವರಣದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಸಾಂಸ್ಕೃತಿಕ ನೃತ್ಯ ಭರತನಾಟ್ಯಗಳ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಗ್ರಾಮದ ವಿದ್ಯಾರ್ಥಿಗಳು ಮಲ್ಲಕಂಬ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಪುಟ್ಟಣ್ಣನವರ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವುದು ಮತ್ತು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರತರುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಬಿಜೆಪಿ ಮುಖಂಡ ಪ್ರಕಾಶಗೌಡ ಪಾಟೀಲ್ ಮಾತನಾಡಿ, ಸಂಶಿ ಗ್ರಾಮಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಭವನ ನೀಡಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಗೌಡಪ್ಪ ಪಾಟೀಲ್, ಯಲ್ಲಪ್ಪ ಮುಳಗುಂದ, ಲಕ್ಷ್ಮಣ ದೊಡಮನಿ, ಕಾಂಗ್ರೆಸ್ ಮುಖಂಡ ಮಲ್ಲೇಶ ಚಲವಾದಿ, ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ, ಬಿಜೆಪಿ ಮುಖಂಡ ಪ್ರವೀಣಗೌಡ ಪಾಟೀಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದಸ್ಯ ಸಿಬ್ಬಂದಿಗಳು, ತಾಲೂಕಿನ ಪತ್ರಕರ್ತರು, ರೈತ ಸಂಘದ ಪದಾಧಿಕಾರಿಗಳು ವೇದಿಕೆ ಮೇಲಿದ್ದರು. ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.