ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರ ಬದುಕಿಗೆ ಮಾರಕವಾಗುವ ರೀತಿ ವರ್ತಿಸುತ್ತಿರುವ ಮೈಕ್ರೋ ಫೈನಾನ್ಸ್ ಹಾವಳಿಗೆ ಈಗಾಗಲೇ ಹಲವು ಮಂದಿ ಜೀವ ಕಳೆದುಕೊಳ್ಳುತ್ತಿರುವ ಕಾರಣ ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಬಾಬು ಜಗಜೀವನರಾಂ ನಗರ ಬಡಾವಣೆಯ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಫೈನಾನ್ಸ್ ಸಾಲ ನೀಡಿ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದಿತ್ತು. ಇತ್ತೀಚಿಗೆ ಸಾಲ ವಸೂಲಿಗೆ ಸಿಬ್ಬಂದಿಗಳು ರೌಡಿ ವರ್ತನೆ ತೋರಿಸುತ್ತಿದ್ದು ಮನೆಯಲ್ಲಿನ ವಸ್ತುಗಳು, ಬೈಕ್ ಗಳು ಕಿತ್ತುಕೊಳ್ಳುವ ಬಗ್ಗೆ ಪೊಲೀಸರು ಶಿಸ್ತು ಕ್ರಮ ವಹಿಸಲಿದ್ದಾರೆ ಎಂದರು.
ಗುಬ್ಬಿ ತಾಲ್ಲೂಕಿನಲ್ಲಿ ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ತಿಳಿಸಿದ್ದೇವೆ. ಮೈಕ್ರೋ ಫೈನಾನ್ಸ್ ಕಷ್ಟದಲ್ಲಿರುವ ಬಡವನ ಮುಗ್ಧತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆತ್ಮಹತ್ಯೆ ಪ್ರಕರಣ ಹೆಚ್ಚುವ ಮುನ್ನ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲು ಎರಡು ದಿನದಿಂದ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ ಎಂದರು.
ಸ್ಥಳೀಯ ಚುನಾವಣೆ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಇನ್ನೆರಡು ತಿಂಗಳ ನಂತರ ನಡೆಸಲು ಚಿಂತನೆ ನಡೆದಿದೆ. ಕ್ಷೇತ್ರದಲ್ಲಿ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜು ಗೊಳಿಸುವ ಕೆಲಸ ಮಾಡಬೇಕಿದೆ ಎಂದ ಅವರು ತಾಲ್ಲೂಕಿನಲ್ಲಿ 90 ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಅನುದಾನ ಸಹ ಬಂದಿದ್ದು ಪಟ್ಟಣ ವ್ಯಾಪ್ತಿಯ ಮೂರು ಅಂಗನವಾಡಿ ಕೇಂದ್ರ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಸಿ.ಮೋಹನ್, ಕುಮಾರ್, ರೇಣುಕಾ ಪ್ರಸಾದ್, ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ಮುಖಂಡರಾದ ಜಿ.ವಿ.ಮಂಜುನಾಥ್, ಮನೋಹರ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಇತರರು ಇದ್ದರು.