ಪ್ರಜಾಪ್ರಭುತ್ವದ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಅವಹೇಳನ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಭೀಮವಾದ) ಬೃಹತ್ ಪ್ರತಿಭಟನೆ ಮಾಡುವುದರ ಮೂಲಕ ಕಲಬುರಗಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು.
ಪ್ರತಿಭಟನೆ ಉದ್ದೇಶಿಸಿ ಕಾಶಿನಾಥ ಶೆಳಗಿ ಮಾತನಾಡಿ, “ಜ್ಞಾನವೇ ಅತ್ಯುತ್ತಮ ಸಂಪತ್ತು. ಮೌಢ್ಯವೇ ಕೆಟ್ಟ ಶತ್ರು. ನಿಮ್ಮ ಮಕ್ಕಳಲ್ಲಿ ಧಾರ್ಮಿಕತೆಯನ್ನು ಭೋದಿಸಬೇಡಿ. ಅವರು ಮೂಢನಂಬಿಕೆಯ ಗುಲಾಮರಾಗುತ್ತಾರೆ. ಅವರಿಗೆ ಶಿಕ್ಷಣ ಕೊಡಿ. ಗುಲಾಮಗಿರಿಯನ್ನು ಮೆಟ್ಟಿ ನಿಲ್ಲುತ್ತಾರೆ. ಎಂದು ಬಾಬಾಸಾಹೇಬರು ತಮ್ಮ ಜೀವಿತಾವಧಿಯ ಕಾಲದಲ್ಲಿ ಪದೇ ಪದೇ ಎಚ್ಚರಿಸುತ್ತಿದ್ದ ಮಾತುಗಳಿವು.
ಆದರೆ ಅದ್ಯಾವುದನ್ನು ಲೆಕ್ಕಿಸದೆ ನಾವುಗಳು ಅವರ ಮಾತುಗಳಿಗೆ ಬೆಲೆ ಕೊಡದೆ ಇಂದು ಮೌಢ್ಯದ ಗುಲಾಮರಾಗಿದ್ದೇವೆ” ಎಂದು ಕಳವಳ ವ್ಯಕ್ತಪಡಿಸಿದರು.
“ತಳಸಮುದಾಯದವರು ಸಮಾಜದಲ್ಲಿ ನೆಮ್ಮದಿಯಿಂದ ಬದುಕುವಂತಾಗಬೇಕು ಎಂಬ ಕಾರಣಕ್ಕಾಗಿ ಹಗಲಿರುಳು ಶ್ರಮವಹಿಸಿ ಈ ದೇಶಕ್ಕೆ ಸಂವಿಧಾನವನ್ನು ಬರೆದು ಅರ್ಪಿಸಿದರು. ಆದರೆ ಅಂದು ಆರ್ ಎಸ್ ಎಸ್ ಸಂಘ ಪರಿವಾರ ತಮ್ಮ ಮುಖವಾಣಿ ಪತ್ರಿಕೆಯಲ್ಲಿ, ಅಂಬೇಡ್ಕರ್‌ರವರು ರಚಿಸಿರುವ ಸಂವಿಧಾನದಲ್ಲಿ ಭಾರತೀಯತೆ ಇಲ್ಲವಾಗಿದೆ. ಈ ದೇಶದ ನೆಲದ ಕಾನೂನಾದ ಮನುಸ್ಮೃತಿಯಿಂದ ಏನೂ ಪಡೆದಿಲ್ಲ. ಹಾಗಾಗಿ ಈ ಸಂವಿಧಾನ ನಮಗೆ ಒಪ್ಪಿತವಲ್ಲ ಎಂದು ಬರೆದಿತ್ತು. ಹಿಂದೂಗಳಿಗೆ ಪ್ರಜಾಪ್ರಭುತ್ವದ ತತ್ವಗಳು ಹೊರಗಿನವು. ಇಡೀ ಮನುಕುಲದ ಅತಿಶ್ರೇಷ್ಠ ಮತ್ತು ಮಹಾನ್ ಕಾನೂನು ರಚನೆಕಾರ ಮನು ಎಂದಿದ್ದರು, ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದ ಸಾವರ್ಕರ್, ವೇದಗಳ ನಂತರ ಅತ್ಯಂತ ಪೂಜನೀಯ ಗ್ರಂಥ ಮನುಸ್ಮೃತಿ, ಈ ದೇಶವನ್ನು ಅದರ ಆಧಾರದಲ್ಲಿ ನಡೆಸಬೇಕು ಎಂದು ಹೇಳುತ್ತಾರೆ. ಆದರೆ ಅದೇ ವಂಶದ ಜಾತಿವಾದಿ ಮನಸ್ಥಿತಿಗಳು ಇಂದು ಇಡೀ ದೇಶದ ತುಂಬಾ ವ್ಯಾಪಿಸಿ ಡಾ. ಬಾಬಾಸಾಹೇಬರ ಬಗ್ಗೆ ಅಪಪ್ರಚಾರ ಮಾಡುತ್ತಾ ಈ ದೇಶದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಅಥವಾ ಬಾಬಾಸಾಹೇಬರ ಬಗ್ಗೆ ಹಗುರವಾಗಿ ಹೇಳಿಕೆ ನೀಡುವವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದನ್ನು ನೋಡಿದರೆ ಆರ್ ಎಸ್ ಎಸ್ ಅಜೆಂಡಾ ಹೇರಲು ಹೊರಟಿದ್ದಾರೆ ಎನ್ನಿಸದೇ ಇರಲಾರದು. ಬಡವರ ದಲಿತರ ಸ್ಥಿತಿಗತಿ ಬಗ್ಗೆ ಚಿಂತನೆ ಮಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದಿರುವುದೇ ಈ ದೇಶದ ಸಂವಿಧಾನ ಬದಲಾವಣೆ ಮಾಡಲು ಎಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಹಾಡುಹಗಲೇ ಸಂವಿಧಾನದ ಪ್ರತಿ ಸುಟ್ಟು ವಿಕೃತಿ ಮೆರೆದಿದ್ದಾರೆ. ದೇಶದ ಗೌರವಾನ್ವಿತ ಹುದ್ದೆಯನ್ನು ಅಲಂಕರಿಸಿರುವ ಮಾನ್ಯ ಗೃಹ ಸಚಿವ ಅಮಿತ್ ಶಾ ದೆಹಲಿಯ ಸಂಸತ್‌ನಲ್ಲಿ ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದ್ದಾರೆ. ಅವರ ದೇಶದ್ರೋಹಿ ಮಾತುಗಳನ್ನು ಖಂಡಿಸಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಹದ್ಯೋಗಿಗಳು ಆತನ ಬೆನ್ನಿಗೆ ನಿಂತಿದ್ದಾರೆ. ಇಂತಹವರಿಂದ ನಾವು ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ” ಎಂದರು.
ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿಯ ಆದೇಶದ ಮೇರೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರವರನ್ನು ಹಾಗೂ ಇಡೀ ದೇಶದ ಶೋಷಿತ ಸಮುದಾಯವನ್ನು ಅವಮಾನಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಿ ದೇಶದ ಜನರ ಕ್ಷಮೆಯಾಚಿಸಬೇಕು. ಅವರ ವಿರುದ್ಧ ದೇಶ ದ್ರೋಹ ಪ್ರಕರಣ ದಾಖಲಿಸಿ ಅವರನ್ನು ಗೂಂಡಾ ಕಾಯಿದೆಯಡಿ ಗಡಿಪಾರು ಮಾಡಬೇಕು. ದಲಿತರ ಮೇಲೆ ದೌರ್ಜನ್ಯ ನಡೆದರೆ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಭಾರತೀಯ ಸಂಸ್ಕೃತಿ ಉತ್ಸವ ವಿರೋಧಿಸಿ ದಲಿತ ಸಂಘಟನೆಗಳ ಬೃಹತ್ ಪ್ರತಿಭಟನೆ
ಈ ವೇಳೆ ಕಾಶಿನಾಥ ಶೆಳಗಿ, ಗಣೇಶ ಕಾಂಬಳೆ, ದಿಲೀಪ ಕುಮಾರ, ಕಿರಸವಾಳಗಿ, ಮಲ್ಲಿಕಾರ್ಜುನ ಹಿಪ್ಪರಗಿ, ಅಶ್ವಿನಿ ಬಾರಿಗಿಡ, ಬಸವರಾಜ ಮೇಗಲಕೇರಿ, ಸಂಗೀತಾ ಕೊಂಬಿನ್, ಮಾರುತಿ ತೇಗಲತಿಪ್ಪಿ, ಶರಣು ರಾವೂರಕರ, ಮಲ್ಲಿಕಾರ್ಜುನ ಕಾಂಬಳೆ, ಬಸವರಾಜ,
ಅಂಬರೇಶ ಶ್ಯಾಮಸುಂದರ, ಶಿವರಾಜ ವಾಲಿ, ನಾಗೇಂದ್ರ ಇನ್ನಿತರರು ಉಪಸ್ಥಿತರಿದ್ದರು.