35 ವರ್ಷ ವಯಸ್ಸಿನ ಶರ್ಜೀಲ್ ಇಮಾಮ್ ಬಿಹಾರ ಮೂಲದ ಐಐಟಿ ಪದವೀಧರ, ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಜೆ.ಎನ್.ಯು.ವಿನಲ್ಲಿ ಪಿಎಚ್.ಡಿ. ಅಭ್ಯರ್ಥಿ. ಜಾಮೀನು ಕೋರಿಕೆ ಕುರಿತು 70 ಹಿಯರಿಂಗ್ಗಳಾಗಿವೆ, ಇಲ್ಲಿಯ ತನಕ ಏಳು ನ್ಯಾಯಪೀಠಗಳು ಬದಲಾಗಿವೆ, ಮೂವರು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ, ಎರಡು ಸಲ ನ್ಯಾಯಾಧೀಶರು ಬದಲಾದ ಕಾರಣ ಕೇಸಿನ ವಿಚಾರಣೆಯನ್ನು ಮೂರು ಸಲ ಮೊದಲಿನಿಂದ ಆರಂಭಿಸಿ ವಾದಿಸಲಾಗಿದೆ!
ಜಾಮೀನು ನೀಡಿಕೆಯ ವಿವೇಚನಾಧಿಕಾರ ಬಳಸುವಲ್ಲಿ ಹೈಕೋರ್ಟುಗಳು ಮತ್ತು ಕೆಳಹಂತದ ನ್ಯಾಯಾಲಯಗಳು ಹಿಂಜರಿಕೆ ತೋರುತ್ತಿವೆಯೆಂದು ಸುಪ್ರೀಮ್ ಕೋರ್ಟು ಸೋಮವಾರ ಕಟುವಾಗಿ ಟೀಕಿಸಿದೆ.
ಮಾನಸಿಕ ಅಸ್ವಸ್ಥನಾದ ಅಪ್ರಾಪ್ತ ವಯಸ್ಕನನ್ನು ಮತಾಂತರ ಮಾಡಿದ ಮುಸ್ಲಿಮ್ ಧರ್ಮಗುರುವಿಗೆ ಜಾಮೀನು ನೀಡಿದ ಸಂದರ್ಭ. ಹೈಕೋರ್ಟು ಮತ್ತು ಅಧೀನ ನ್ಯಾಯಾಲಯಗಳು ಜಾಮೀನು ನೀಡಿಕೆ ವಿವೇಚನಾಧಿಕಾರ ಬಳಕೆಯಲ್ಲಿ ದಿಟ್ಟತನ ತೋರಬೇಕು ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲಾ ಮತ್ತು ಆರ್.ಮಹಾದೇವನ್ ಪೀಠ ಹೇಳಿದೆ. ಹನ್ನೊಂದು ತಿಂಗಳುಗಳಿಂದ ಬಂಧನದಲ್ಲಿರುವ ಮುಸ್ಲಿಮ್ ಧರ್ಮಗುರುವಿಗೆ ಕೆಳಹಂತದ ನ್ಯಾಯಾಲಯಗಳು ಮತ್ತು ಅಲಹಾಬಾದ್ ಉಚ್ಚ ನ್ಯಾಯಾಲಯ ಜಾಮೀನು ನಿರಾಕರಿಸಿದ್ದವು.
ತಂದೆ ತಾಯಿಗಳು ತ್ಯಜಿಸಿದ್ದ ಬಾಲಕನಿಗೆ ತಾವು ಮಾನವೀಯ ನೆಲೆಯಿಂದ ಆಶ್ರಯ ನೀಡಿದ್ದಾಗಿ ಮುಸ್ಲಿಮ್ ಧರ್ಮಗುರು ಹೇಳಿದ್ದರು. ಮತಾಂತರವು ಕೊಲೆ, ಡಕಾಯಿತಿ, ಅತ್ಯಾಚಾರದಂತಹ ಗಂಭೀರ ಅಪರಾಧವೇನೂ ಅಲ್ಲ. ಈ ಕೇಸಿನಲ್ಲಿ ಜಾಮೀನು ನೀಡಿದ್ದರೆ ಆಕಾಶವೇನೂ ಬಿದ್ದು ಹೋಗುತ್ತಿರಲಿಲ್ಲ. ಈ ಪ್ರಕರಣ ಸುಪ್ರೀಮ್ ಕೋರ್ಟ್ ಮೆಟ್ಟಿಲೇರುವ ಅಗತ್ಯವೇ ಇರಲಿಲ್ಲ ಎಂದು ಈ ಪೀಠ ಹೇಳಿದೆ.
ಜಾಮೀನು ನೀಡಿಕೆಯ ವಿವೇಚನಾಧಿಕಾರ ಬಳಕೆ ಕುರಿತು ಕೆಳಹಂತದ ನ್ಯಾಯಾಲಯಗಳ ನ್ಯಾಯಾಧೀಶರಿಗೆ ತಿಳಿವಳಿಕೆ ನೀಡಲು ವರ್ಷ ವರ್ಷವೂ ಹಲವಾರು ಸಮ್ಮೇಳನಗಳು, ವಿಚಾರ ಸಂಕಿರಣಗಳು, ವಿಚಾರ ಕಮ್ಮಟಗಳನ್ನು ಏರ್ಪಡಿಸಲಾಗುತ್ತಿದೆ. ಪ್ರಯೋಜನವೇನು ಎಂದು ಪ್ರಶ್ನಿಸಿದೆ.
ಯುಎಪಿಎ ಮತ್ತು ಪಿಎಂಎಲ್ ನಂತಹ (ಅಕ್ರಣ ಹಣ ವರ್ಗಾವಣೆ) ಕರಾಳ ಕಾಯಿದೆಗಳ ಅಡಿಯಲ್ಲಿ ಹೂಡುವ ಕೇಸುಗಳಲ್ಲೂ ಜಾಮೀನು ಸರ್ವೇಸಾಮಾನ್ಯ ಆಗಬೇಕು ಮತ್ತು ಜೈಲು ವಿರಳ ಆಗಬೇಕು ಎಂಬ ಮಾತನ್ನು ಸುಪ್ರೀಮ್ ಕೋರ್ಟು ಅಡಿಗಡಿಗೆ ಹೇಳುತ್ತಲೇ ಬಂದಿದೆ. ಆಡಿದ ಈ ಮಾತನ್ನು ಸುಪ್ರೀಮ್ ಕೋರ್ಟ್ ಕೂಡ ನಡೆಸಿಕೊಡಬೇಕಾಗಿದೆ. ಈ ಹಿಂದೆ ಸಾಮಾಜಿಕ ಸಾಮರಸ್ಯ ಕದಡುವ ಪ್ರಸಿದ್ಧ ಟಿವಿ ಆ್ಯಂಕರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತುರ್ತು ವಿಚಾರಣೆಗೆ ಎತ್ತಿಕೊಂಡು ಜಾಮೀನು ನೀಡಲಾಯಿತು. ಹದಿಹರೆಯದ ಬಾಲಕಿಯ ಮೇಲೆ ತನ್ನ ಆಶ್ರಮದಲ್ಲಿ ಹಲವು ಸಲ ಅತ್ಯಾಚಾರ ನಡೆಸಿದ ಧರ್ಮಗುರು ಆಸಾರಾಮ್ ಬಾಪುವಿಗೆ ಹಲವು ಸಲ ಮಧ್ಯಂತರ ಜಾಮೀನು ದೊರೆತಿದೆ. ಕೊಲೆಗಳು ಮತ್ತು ಅತ್ಯಾಚಾರಗಳ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮತ್ತೊಬ್ಬ ಧರ್ಮಗುರು ಗುರ್ಮೀತ್ ಸಿಂಗ್ ರಾಮ್ ರಹೀಮ್ ಗೆ ಚುನಾವಣೆಗಳು ನಡೆದಾಗಲೆಲ್ಲ ತಿಂಗಳುಗಟ್ಟಲೆ ಜಾಮೀನು ದೊರೆಯುತ್ತದೆ.
ಪೌರತ್ವ ಕಾಯಿದೆಯ ತಿದ್ದುಪಡಿಯನ್ನು (ಸಿಎಎ) ವಿರೋಧಿಸಿ ಭಾಷಣಗಳನ್ನು ಮಾಡಿದ್ದ ಶರ್ಜೀಲ್ ಇಮಾಮ್ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ. ದೆಹಲಿ ಹೈಕೋರ್ಟಿನ ಮುಂದೆ ಅವರ ಜಾಮೀನು ಅರ್ಜಿ ಎರಡು ವರ್ಷ ಒಂಬತ್ತು ತಿಂಗಳುಗಳಿಂದ ಬಾಕಿ ಇದೆ.
ಮೂವತ್ತೈದು ವರ್ಷ ವಯಸ್ಸಿನ ಶರ್ಜೀಲ್ ಇಮಾಮ್ ಬಿಹಾರ ಮೂಲದ ಐಐಟಿ ಪದವೀಧರ, ಸಾಫ್ಟ್ವೇರ್ ಎಂಜಿನಿಯರ್ ಹಾಗೂ ಜೆ.ಎನ್.ಯು.ವಿನಲ್ಲಿ ಪಿಎಚ್.ಡಿ. ಅಭ್ಯರ್ಥಿ. ಜಾಮೀನು ಕೋರಿಕೆ ಕುರಿತು 70 ಹಿಯರಿಂಗ್ಗಳಾಗಿವೆ, ಇಲ್ಲಿಯ ತನಕ ಏಳು ನ್ಯಾಯಪೀಠಗಳು ಬದಲಾಗಿವೆ, ಮೂವರು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ, ಎರಡು ಸಲ ನ್ಯಾಯಾಧೀಶರು ಬದಲಾದ ಕಾರಣ ಕೇಸಿನ ವಿಚಾರಣೆಯನ್ನು ಮೂರು ಸಲ ಮೊದಲಿನಿಂದ ಆರಂಭಿಸಿ ವಾದಿಸಲಾಗಿದೆ.
2020ರ ಆಗಸ್ಟ್ 25ರ ದೆಹಲಿ ಕೋಮುವಾದಿ ಗಲಭೆಗಳ ವಿಸ್ತೃತ ಪಿತೂರಿಯ ಕೇಸಿನ ಸಂಬಂಧ ಇವರನ್ನು ಬಂಧಿಸಲಾಗಿದೆ. ಭಾರತೀಯ ಪೌರತ್ವ ನೀಡಿಕೆಗೆ ಧರ್ಮವನ್ನು ಮಾನದಂಡ ಆಗಿಸಿದ್ದ ಪೌರತ್ವ ಕಾಯಿದೆ ತಿದ್ದುಪಡಿಯನ್ನು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ವಿರೋಧಿಸಿದ್ದರು. ಈ ಗಲಭೆಗಳಲ್ಲಿ ಹತರಾದವರ ಪೈಕಿ ಮುಕ್ಕಾಲು ಪಾಲು ಮುಸಲ್ಮಾನರು. ಈ ‘ಪಿತೂರಿ’ಯ ಇತರೆ ಆಪಾದಿತರು ಉಮರ್ ಖಾಲಿದ್, ಗುಲ್ಫಿಶಾ ಫಾತಿಮಾ, ಖಾಲಿದ್ ಸೈಫಿ, ಹಾಗು ಮೀರನ್ ಹೈದರ್. ಇವರು ಕೂಡ ವಿಚಾರಣೆಯೇ ಇಲ್ಲದೆ ಐದು ವರ್ಷಗಳಿಂದ ಜೈಲಿನಲ್ಲಿದ್ದಾರೆ.
ಉಮರ್ ಖಾಲೀದ್ ಜಾಮೀನು ಅರ್ಜಿಯ ವಿಚಾರಣೆಯನ್ನು 11 ತಿಂಗಳ ಅವಧಿಯಲ್ಲಿ 14 ಸಲ ಮುಂದೂಡಲಾಗಿದೆ. ಸುಪ್ರೀಮ್ ಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಿ ಹಿಂಪಡೆದ ನಂತರ ಏಳು ದಿನಗಳ ಮಧ್ಯಂತರ ಜಾಮೀನು ದೊರೆತಿತ್ತು. ಉಮರ್ ಖಾಲೀದ್ ಕೂಡ 2020ರ ಸೆಪ್ಟಂಬರ್ ನಿಂದ ದೆಹಲಿ ಕೋಮುಗಲಭೆಗಳ ಸಂಬಂಧ ಯುಎಪಿಎ ಅಡಿ ಜೈಲಿನಲ್ಲಿದ್ದಾರೆ.
ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದನೆಯ ಕೃತ್ಯಕ್ಕೆ ನಿಧಿ ಸಂಗ್ರಹ, ಭಯೋತ್ಪಾದನೆಯ ಕೃತ್ಯ ಎಸಗುವಿಕೆಯ ಸೆಕ್ಷನ್ ಗಳನ್ನು ಉಲ್ಲೇಖಿಸಿ ಜಾಮೀನು ತಿರಸ್ಕರಿಸುವುದು ಮಾಮೂಲು ಸಂಗತಿಯಾಗಿ ಹೋಗಿದೆ. ಭೀಮಾ ಕೋರೆಗಾಂವ್ ಕೇಸಿನಲ್ಲಿ ಬಂಧಿಸಲಾದ ಎಡಪಂಥೀಯ ಹೋರಾಟಗಾರರಿಗೆ ಆರು ವರ್ಷಗಳ ಜೈಲುವಾಸದ ನಂತರವೇ ಜಾಮೀನು ನೀಡಲಾಯಿತು.
ಶರ್ಜೀಲ್ ಇಮಾಮ್ 2019ರ ಡಿಸೆಂಬರ್ ಮತ್ತು 2020ರ ಜನವರಿಯಲ್ಲಿ ದೆಹಲಿಯ ಜಾಮಿಯಾ ಮಿಲಿಯ, ಉತ್ತರಪ್ರದೇಶದ ಅಲೀಗಢ ಮುಸ್ಲಿಮ್ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳದ ಅಸನ್ಸೋಲ್ ಹಾಗೂ ಬಿಹಾರದ ಗಯಾದಲ್ಲಿ ಸಿಎಎ ವಿರುದ್ಧ ಭಾಷಣ ಮಾಡಿದ್ದರು. ಅಹಿಂಸಾತ್ಮಕ ಪ್ರತಿಭಟನಾ ಪ್ರದರ್ಶನಗಳನ್ನು ಅನುಸರಿಸುವಂತೆ ನನ್ನ ಭಾಷಣಗಳಲ್ಲಿ ಹೇಳಿದ್ದೆ. ‘ರಾಸ್ತಾ ರೋಕೋ’ ವಿಧಾನ ಅತ್ಯಂತ ಪರಿಣಾಮವುಳ್ಳ ವಿಧಾನ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಆದರೆ ನ್ಯಾಯಾಲಯಗಳ ಮುಂದೆ ನನ್ನನ್ನು ಮತಾಂಧ ಮುಸಲ್ಮಾನ ನಾಯಕನಂತೆ ಬಿಂಬಿಸಲಾಗಿದೆ ಎಂಬುದು ಶರ್ಜೀಲ್ ವಾದ.
ಅನುಚ್ಛೇದ 19(1)(ಎ) ಅಡಿಯಲ್ಲಿ ಸಂವಿಧಾವ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಸುಪ್ರೀಮ್ ಕೋರ್ಟು ವ್ಯಾಖ್ಯಾನಿಸಿರುವ ಪ್ರಕಾರ (ಕೇದಾರ್ ನಾಥ್ ವರ್ಸಸ್ ಸ್ಟೇಟ್ ಆಫ್ ಬಿಹಾರ್), ಹಿಂಸಾಚಾರದಲ್ಲಿ ತೊಡಗಿ ಸಾರ್ವಜನಿಕ ಶಾಂತಿಭಂಗ ಮಾಡುವ ಇಲ್ಲವೇ ಸಾರ್ವಜನಿಕ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುವ ಉದ್ದೇಶದ ಭಾಷಣಗಳು, ಬರೆಹಗಳು ಅಥವಾ ಹೇಳಿಕೆಗಳು ಮಾತ್ರವೇ ನಿರ್ಬಂಧಿತ. ಸರ್ಕಾರದ ಕ್ರಮಗಳ ಟೀಕೆಯು ಎಷ್ಟೇ ಕಟುಶಬ್ದಗಳಿಂದ ಕೂಡಿದ್ದರೂ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆ ಎನಿಸುವುದಿಲ್ಲ. ಆಡಿದ ಅಥವಾ ಬರೆದ ನುಡಿಗಳು ವಿನಾಶಕಾರಿ ಧೋರಣೆ ಇಲ್ಲವೇ ಸಾರ್ವಜನಿಕ ಶಾಂತಿಭಂಗ, ಆಡಳಿತ ಸುವ್ಯವಸ್ಥೆಗೆ ಧಕ್ಕೆ ತರುವಂತಿದ್ದರೆ ಮಾತ್ರ ಅಂತಹ ಚಟುವಟಿಕೆಗಳನ್ನು ಸಾರ್ವಜನಿಕಹಿತದ ಮೇರೆಗೆ ತಡೆಗಟ್ಟಬೇಕು. ಸರ್ಕಾರವನ್ನು ಹಿಂಸಾತ್ಮಕವಾಗಿ ಕಿತ್ತೆಸೆವುದನ್ನು ಪ್ರಚೋದಿಸುವ ಉದ್ದೇಶವಿಲ್ಲದೆ, ಅಸಂತೋಷ ಇಲ್ಲವೇ ಹಗೆತನವನ್ನು ಹುಟ್ಟು ಹಾಕುವ ಭಾಷಣವನ್ನು ಶಿಕ್ಷಿಸುವುದು ಸಂವಿಧಾನಬಾಹಿರ ಕ್ರಮ ಎನ್ನುತ್ತದೆ ಈ ವ್ಯಾಖ್ಯಾನ.
ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಹತ್ಯೆಯ ದಿನದಂದು ‘ಖಾಲಿಸ್ತಾನ್ ಜಿಂದಾಬಾದ್’, ‘ರಾಜ್ ಕರೇಗಾ ಖಾಲ್ಸಾ’, ‘ಹಿಂದೂಗಳನ್ನು ಪಂಜಾಬಿನಿಂದ ಹೊಡೆದೋಡಿಸಿ ನಮ್ಮ ಆಡಳಿತ ಸ್ಥಾಪಿಸುತ್ತೇವೆ’ ಎಂಬ ಘೋಷಣೆಗಳನ್ನು ಕೂಗಲಾಗಿತ್ತು. ಈ ಘೋಷಣೆಗಳ ಕೂಗಿದ್ದು ದೇಶದ್ರೋಹ ಅಲ್ಲ ಎಂದು 1995ರ ಮಾರ್ಚ್ ಒಂದರಂದು ಸುಪ್ರೀಮ್ ಕೋರ್ಟು ‘ಬಲವಂತ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್’ ಕೇಸಿನಲ್ಲಿ ತೀರ್ಪು ನೀಡಿತ್ತು.
ಸಿಎಎ ಪ್ರತಿಭಟನಾ ಪ್ರದರ್ಶನಗಳ ವಿದ್ಯಾರ್ಥಿ ಹೋರಾಟಗಾರರಾಗಿದ್ದ ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಹಾಗೂ ಆಸಿಫ್ ಇಕ್ಬಾಲ್ ತನ್ಹಾ ಅವರಿಗೆ 2021ರಲ್ಲಿ ಜಾಮೀನು ನೀಡಿತ್ತು ದೆಹಲಿ ಹೈಕೋರ್ಟು. ಸರ್ಕಾರಿ ಅಥವಾ ಸಂಸದೀಯ ಕ್ರಿಯೆಗಳ ಕುರಿತ ವ್ಯಾಪಕ ವಿರೋಧದ ಸಂದರ್ಭದಲ್ಲಿ ಪ್ರಚೋದನಕಾರಿ ಭಾಷಣಗಳು ಮತ್ತು ರಾಸ್ತಾ ರೋಕೋ (ಚಕ್ಕಾ ಜಾಮ್) ಕ್ರಿಯೆಗಳು ಸರ್ವೇ ಸಾಮಾನ್ಯ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಜೈರಾಮ್ ಭಂಭಾನಿ ಅವರ ನ್ಯಾಯಪೀಠ ಹೇಳಿತ್ತು. ಪ್ರಚೋದನಕಾರಿ ಭಾಷಣಗಳು, ಚಕ್ಕಾ ಜಾಮ್ ಗಳು, ಮಹಿಳಾ ಪ್ರತಿಭಟನಕಾರರನ್ನು ಪ್ರಚೋದಿಸುವುದು ಮುಂತಾದವುಗಳು ಶಾಂತಿಯುತ ಪ್ರತಿಭಟನೆಯ ಗೆರೆಗಳನ್ನು ದಾಟಿವೆ ಎನ್ನಿಸಿದರೂ ಅವುಗಳನ್ನು ಭಯೋತ್ಪಾದನೆಯ ಕೃತ್ಯ- ಪಿತೂರಿ ಇಲ್ಲವೇ ಯುಎಪಿಎ ವ್ಯಾಪ್ತಿಗೆ ಬರುವ ಭಯೋತ್ಪಾದಕ ಕೃತ್ಯಕ್ಕೆ ಸಿದ್ಧತೆಯೆಂದು ಅರ್ಥೈಸಲು ಬರುವುದಿಲ್ಲ ಎಂದೂ ನ್ಯಾಯಮೂರ್ತಿಗಳು ಹೇಳಿದ್ದರು.
ಆದರೆ ಇದೇ ನ್ಯಾಯಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಅವರು ನ್ಯಾಯಮೂರ್ತಿ ರಾಜೇಶ್ ಭಟ್ನಾಗರ್ ಜೊತೆಗಿದ್ದ ಮತ್ತೊಂದು ನ್ಯಾಯಪೀಠದ ಮುಂದೆ 2022ರ ಅಕ್ಟೋಬರ್ ನಲ್ಲಿ ಉಮರ್ ಖಾಲೀದ್ ಅವರ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಮೇಲೆ ಹೇಳಲಾಗಿರುವ ಅಂಶಗಳೇ ಈ ಎಫ್.ಐ.ಆರ್.ನ ಭಾಗವಾಗಿದ್ದವು. ಅದರೂ ಉಮರ್ ಖಾಲೀದ್ ಗೆ ಜಾಮೀನು ನಿರಾಕರಿಸಲಾಯಿತು.
ಜಿಲ್ಲಾ ನ್ಯಾಯಾಲಯಗಳು ನಿರಾಕರಿಸುತ್ತ ಬಂದ ಜಾಮೀನಿಗಾಗಿ 2022ರ ಏಪ್ರಿಲ್ನಿಂದ ದೆಹಲಿ ಹೈಕೋರ್ಟಿನ ಕದ ಬಡಿಯತೊಡಗಿದ್ದಾರೆ ಶರ್ಜೀಲ್ ಇಮಾಮ್. ‘ನಾಳೆ ಬಾ’ ಎಂದು ಬಾಗಿಲುಗಳ ಮೇಲೆ ಬರೆಯುವ ಮೂಢನಂಬಿಕೆಯೊಂದು ಒಂದು ಕಾಲದಲ್ಲಿ ವ್ಯಾಪಕವಾಗಿತ್ತು. ಅದು ‘ಇರುಳು ಬಂದು ಬಾಗಿಲು ತಟ್ಟುವ ದೆವ್ವʼಕ್ಕೆ ನೀಡುವ ಸಂದೇಶವಾಗಿತ್ತು. ಈ ಮೂಢನಂಬಿಕೆಯು ಶರ್ಜೀಲ್ ಪಾಲಿಗೆ ನಿಜವಾದಂತಿದೆ. ಕಣ್ಣಿಗೆ ಕಾಣದ ಕದಗಳ ಮೇಲೆ ನ್ಯಾಯಾಲಯಗಳು ನಾಳೆ ಬಾ ಎಂಬ ಸಂದೇಶವನ್ನು ಬರೆದಿವೆಯೇನೋ ಎಂಬಂತಾಗಿದೆ ಶರ್ಜೀಲ್ ಮತ್ತು ಉಮರ್ ಸಂಗಾತಿಗಳ ಸ್ಥಿತಿ. ಅಂತಿಮವಾಗಿ ಈ ಕೇಸುಗಳು ವಜಾ ಆಗುತ್ತವೆ. ಆಳುವವರೂ ಈ ಸತ್ಯವನ್ನು ಬಲ್ಲರು. ಆದರೆ ವರ್ಷಗಟ್ಟಲೆ ವಿಚಾರಣೆಯೇ ಇಲ್ಲದೆ ಸೆರೆವಾಸ ಮತ್ತು ಕೋರ್ಟುಗಳಿಗೆ ಅಲೆದಾಡುವ ಪ್ರಕ್ರಿಯೆಯೇ ಶಿಕ್ಷೆಯಾಗಿ ಪರಿಣಮಿಸಿದೆ. ಆಳುವವರ ಈ ಉದ್ದೇಶ ಈಡೇರುತ್ತಿರುವುದು ವ್ಯವಸ್ಥೆಯ ಬಹು ಕ್ರೂರ ವಿಡಂಬನೆ.
