ಮೈಸೂರಿನಲ್ಲಿರುವ ಮಹಾರಾಣಿ ಕಾಲೇಜು ಕಟ್ಟಡ ಕುಸಿದುಬಿದ್ದಿದ್ದು, ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದಾರೆ. ಮೃತ ಕಾರ್ಮಿಕನನ್ನು ಮೈಸೂರಿನ ಗೌಸಿಯಾ ನಗರ ನಿವಾಸಿ ಸದ್ದಾಂ ಎಂದು ಗುರುತಿಸಲಾಗಿದೆ.
ಮೂರು ವರ್ಷಗಳ ಹಿಂದೆ ಮಹಾರಾಣಿ ಕಾಲೇಜಿನ ನೂರು ವರ್ಷಗಳಷ್ಟು ಹಳೆಯದಾದ ಕಟ್ಟಡವೊಂದು ಕುಸಿದುಬಿದ್ದಿತ್ತು. ಬಳಿಕ, ಆ ಜಾಗವನ್ನು ಖಾಲಿ ಮಾಡಲಾಗಿತ್ತು. ಇತ್ತೀಚೆಗೆ, ಆ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರು ಮಾಡಿತ್ತು.
ಕುಸಿದು ಬಿದ್ದಿದ್ದ ಕಟ್ಟಡದಲ್ಲಿದ್ದ ಕಬ್ಬಿಣದ ಕಿಟಕಿ ಸೇರಿದಂತೆ ಉಪಯುಕ್ತ ವಸ್ತುಗಳನ್ನು ತೆರವುಗೊಳಿಸಲು ಗುತ್ತಿಗೆ ನೀಡಲಾಗಿತ್ತು. 14 ಮಂದಿ ಕಟ್ಟಡದಲ್ಲಿದ್ದ ಉಪಕರಣಗಳನ್ನು ತೆರವುಗೊಳಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ, ಕಟ್ಟಡದ ಉಳಿದ ಅವಶೇಷಗಳು ಕುಸಿವೆ. ಕೂಡಲೇ 13 ಮಂದಿ ಕಟ್ಟಡದಿಂದ ಹೊರಬಂದಿದ್ದಾರೆ. ಆದರೆ, ಸದ್ದಾಂ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಸದ್ದಾಂ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.