ಮೂಢನಂಬಿಕೆ ವಿರುದ್ಧ ಜಾಗೃತಿ ಕಾರ್ಯಕ್ರಮ, ಅಭಿಯಾನಗಳು ನಡೆಯುತ್ತಲೇ ಇವೆ. ಆದರೂ, ಮೌಢ್ಯಕ್ಕೆ ಕಡಿವಾಣ ಬಿದ್ದಿಲ್ಲ. ಮಾಟಮಂತ್ರಗಳಂತಹ ಅಪಾಯಕಾರಿ ಮೂಢನಂಬಿಕೆಗೆ ಜನರು ಬಲಿಯಾಗುತ್ತಲೇ ಇದ್ದಾರೆ. ಅಂತದ್ದೇ ಆಘಾತಕಾರಿ ಘಟನೆಯಲ್ಲಿ, ವಿಕೃತ, ಮೂಢ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಕಮಲೇಶ್ ಎಂಬಾತ, ಬಲಿ ಕೊಟ್ಟರೆ ತನಗಿರುವ ಕೋಗ ನಿವಾರಣೆಯಾಗುತ್ತದೆಂದು ಮೂಢನಂಬಿಕೆಗೆ ಒಳಗಾಗಿ ತನ್ನ ಪತ್ನಿಯನ್ನೇ ಬಲಿಯ ಹೆಸರಿನಲ್ಲಿ ಕೊಲೆ ಮಾಡಿದ್ದ. ಆತನಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ತೀರ್ಪು ನೀಡಿದೆ.
ಅಪರಾಧಿ ಕಮಲೇಶ್ ಫೈಲೇರಿಯಾಸಿಸ್ ಎಂಬ ರೋಗಕ್ಕೆ ತುತ್ತಾಗಿದ್ದ. ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆತನ ರೋಗ ವಾಸಿಯಾಗಿರಲಿಲ್ಲ. ಬಳಿಕ, ಆತ ವಾಮಾಚಾರಿಗಳ ಮೊರೆ ಹೋಗಿದ್ದ. ನರಬಲಿ ಕೊಟ್ಟರೆ ತನ್ನ ರೋಗ ವಾಸಿಯಾಗುತ್ತದೆ ಎಂದು ವಾಮಾಚಾರಿಗಳು ಸಲಹೆ ನೀಡಿದ್ದಾರೆ.
ಅವರ ಮಾತು ಕೇಳಿ, ಮೌಢ್ಯವನ್ನು ನಂಬಿದ ಕಮಲೇಶ್ 2020ರ ಡಿಸೆಂಬರ್ 11ರಂದು ತನ್ನ ಪತ್ನಿಯನ್ನೇ ಬಲಿಯ ಹೆಸರಿನಲ್ಲಿ ಕೊಲೆ ಮಾಡಿದ್ದ ಎಂದು ವರದಿಯಾಗಿದೆ.
ಮಹಿಳೆಯ ಸಾವಿನ ಬಗ್ಗೆ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ, ಆಕೆಯನ್ನು ಕಮಲೇಶ್ ಕೊಲೆ ಮಾಡಿದ್ದಾನೆ ಎಂಬುದು ಬಯಲಾಗಿದೆ.
ಆರೋಪಿ ಕಮಲೇಶ್‌ನನ್ನು ಬಂಧಿಸಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಕಮಲೇಶ್ ಅಪರಾಧಿ ಎಂದು ಘೋಷಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಜೊತೆಗೆ, 25,000 ರೂ. ದಂಡ ವಿಧಿಸಿದೆ.