ಶಿಕ್ಷಣ ಇಂದಿಗೂ ಅದೆಷ್ಟೋ ಕುಟುಂಬಕ್ಕೆ ಕೈಗೆಟುಕದ ನಕ್ಷತ್ರ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿದ್ದರೆ ಬೆಂಚಿಲ್ಲ, ಬೆಂಚಿದ್ದರೆ ಕೋಣೆಯಿಲ್ಲ, ಶೌಚಾಲಯವಿದ್ದರೆ ನೀರಿಲ್ಲ – ಇವೆಲ್ಲವನ್ನು ಜೀವನದ ರೂಢಿಯಾಗಿ ಮಾಡಿಕೊಂಡು ಶಿಕ್ಷಣ ಪಡೆಯಲು ಹಲವಾರು ಮಕ್ಕಳು ಹೆಣಗಾಡುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣವೂ ದೊರೆಯುತ್ತಿಲ್ಲ. ‘ನಾವು ಪಟ್ಟ ಕಷ್ಟ ಸಾಕಪ್ಪ, ನಮ್ಮ ಮಕ್ಕಳಿಗೆ ಈ ಕಷ್ಟ ಬೇಡ’ ಎಂದು ಸಾಲಸೂಲ ಮಾಡಿ ಖಾಸಗಿ ದರೋಡೆಕೋರರ ಬಲೆಯಲ್ಲಿ ಸಿಲುಕುವ ಕುಟುಂಬ ಅದೆಷ್ಟೋ ಇದೆ.
ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿ, ಶಿಕ್ಷಣದ ಖಾಸಗೀಕರಣಕ್ಕೆ ಕಡಿವಾಣ ಹಾಕಬೇಕಾದ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ, ಶ್ರೀಮಂತ ದೊರೆಗಳ ಕೈಗೊಂಬೆಗಳಂತೆ ಕೆಲಸ ಮಾಡುತ್ತಿವೆ. ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಬೇಕಾದ ಎಲ್ಲ ಸಿದ್ದತೆಗಳನ್ನೂ ನಡೆಯುತ್ತಲೇ ಇವೆ. ಹಂತ-ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುವುದರ ಜೊತೆಗೆ, ಶಿಕ್ಷಕರ ಸಂಖ್ಯೆಯನ್ನೂ ಕಡಿತಗೊಳಿಸುತ್ತಿವೆ. ಪರಿಣಾಮವಾಗಿ, ಉಳ್ಳವರು ದೇಣಿಗೆ ನೀಡಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದರೆ, ಬಡವರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲಾಗದೆ, ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿಕೊಂಡು, ಜೀವನಪೂರ್ತಿ ಸಾಲ ತೀರಿಸುವ ತಾಪತ್ರಯದಲ್ಲಿ ಸಿಲುಕಿಕೊಳ್ಳುತ್ತಾರೆ.
ಇದನ್ನು ಓದಿದ್ದೀರಾ? ಕನ್ನಡ ಬೆಳೆಯಲು ಸರ್ಕಾರಿ ಶಾಲೆಗಳು ಉಳಿಯಬೇಕು; ಆದರೆ…
ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದಾಗ ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಪಾವತಿ ಮಾಡುವುದು ಕಷ್ಟವೆಂದು ಅರಿತ ಹಲವು ಕುಟುಂಬಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿದ್ದರು. ಆದರೆ, ಉತ್ತಮ ಶಿಕ್ಷಣ ಸಿಗುತ್ತಿಲ್ಲವೆಂದು ಈಗ ಮತ್ತೆ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಮತ್ತೆ ಇಳಿಕೆಯಾಗಿದೆ.
ಮಂಗಳವಾರ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ (ಎಎಸ್ಇಆರ್) ಬಿಡುಗಡೆಯಾಗಿದ್ದು ವರದಿ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ 6-14 ವರ್ಷ ವಯೋಮಾನ ಮಕ್ಕಳ ದಾಖಲಾತಿ ಪ್ರಮಾಣವು 2018ರಲ್ಲಿ ಇದ್ದ ಮಟ್ಟಕ್ಕೆ ಕುಸಿದಿದೆ. ‘ಪ್ರಥಮ’ ಎಂಬ ಎನ್ಜಿಒ ಈ ಸಮೀಕ್ಷೆಯನ್ನು ನಡೆಸಿದೆ.
2006ರಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣದಲ್ಲಿ ಏರಿಳಿತವು ಶೇಕಡ 18.7ರಷ್ಟಿತ್ತು. ಆದರೆ ಇದು 2014ರಲ್ಲಿ ಶೇಕಡ 30.8ಕ್ಕೆ ಹೆಚ್ಚಳವಾಗಿತ್ತು. ಆದಾಗ್ಯೂ, 2018ರಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರಮಾಣವು 65.6% ಇತ್ತು. ಕೋವಿಡ್ ಸಮಯದ ನಂತರ, 2022ರಲ್ಲಿ ಬರೋಬ್ಬರಿ 72.9%ಗೆ ಜಿಗಿತ ಕಂಡಿತ್ತು. ಆದರೆ, 2024ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಮತ್ತೆ 66.8%ಗೆ ಕುಸಿದಿದೆ. ಇದು, 2018ರ ಪ್ರಮಾಣಕ್ಕೆ ಇಳಿದಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ನಡೆ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ
ಇವಿಷ್ಟಕ್ಕೂ ಕಾರಣ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯ ಕೊರತೆ, ಶಿಕ್ಷಕರ ಕೊರತೆ ಹಾಗೂ ಖಾಸಗಿ ಶಾಲೆಗಳಲ್ಲಿ ಅತ್ಯುತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಮನೋಭಾವೇ ಕಾರಣ ಎಂದರೆ ತಪ್ಪಾಗಲಾರದು. 2012ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಮಕ್ಕಳ ಕೊರತೆ ನೆಪವೊಡ್ಡಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಈ ವೇಳೆ ಮಂಗಳೂರಿಗೆ ಅಂದಿನ ಶಿಕ್ಷಣ ಸಚಿವ ಸಿ.ಟಿ ರವಿ ವಿರುದ್ಧ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸುಮಾರು 10 ಅಪ್ರಾಪ್ತರು ಸೇರಿದಂತೆ ಒಟ್ಟು 38 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಒಂದೆರಡು ವರ್ಷಗಳ ಹಿಂದಷ್ಟೆ ಖುಲಾಸೆಗೊಂಡಿತು.
ಆದರೆ ವಿದ್ಯಾರ್ಥಿಗಳ ಈ ಪ್ರತಿಭಟನೆ ಕೂಗು ವಿಧಾನಸೌಧಕ್ಕೆ ಮುಟ್ಟಿದ್ದು ನಿಜ. ಕೋರ್ಟ್ ಮೆಟ್ಟಿಲಲ್ಲೂ ಚರ್ಚೆಯಾಗಿದ್ದು ಹೌದು. ಈ ವಿಚಾರ ಮುನ್ನಲೆಗೆ ಬರುತ್ತಿದ್ದಂತೆ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂಜರಿಯಿತು. ಆದರೆ, ಒಂದು ವರ್ಷ ಕಳೆಯುತ್ತಿದ್ದಂತೆ ಮತ್ತೆ ಬಾಲ ಬಿಚ್ಚಿದ ಸರ್ಕಾರ ಶಾಲೆಗಳ ವಿಲೀನದ ನೆಪದಲ್ಲಿ ಸಾವಿರಾರು ಶಾಲೆಗಳಿಗೆ ಬೀಗ ಜಡಿಯಿತು. ವಿದ್ಯಾರ್ಥಿಗಳು ಒಂದು ಶಾಲೆಯಿಂದ, ಇನ್ನೊಂದು ಶಾಲೆಗೆ ವರ್ಗಾಯಿತರಾದರು.
ರಾಜ್ಯದ 6,158 ಸರ್ಕಾರಿ ಶಾಲೆಗಳಲ್ಲಿದ್ದಾರೆ ಒಬ್ಬರೇ ಶಿಕ್ಷಕರು!
ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರಲು ಖಾಸಗಿ ಸಂಸ್ಥೆಗಳ ಬಣ್ಣ ಬಣ್ಣದ ಜಾಹೀರಾತುಗಳೇ ಕಾರಣ ಎನ್ನುವ ಕೆಲವು ಜನರು ಕೊಂಚ ಸರ್ಕಾರಿ ಶಾಲೆಯ ಸ್ಥಿತಿಯ ಬಗ್ಗೆಯೂ ಕಣ್ಣಾಡಿಸಬೇಕಾಗುತ್ತದೆ. ವರದಿ ಪ್ರಕಾರ ಕರ್ನಾಟಕದಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಶಾಲೆಗೆ ಒಬ್ಬರೇ ಶಿಕ್ಷಕರು ಇರುವಾಗ ಯಾವ ಪೋಷಕರು ಆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಬಯಸುತ್ತಾರೆ? ಸಾಲವಾದರೂ ಪರವಾಗಿಲ್ಲ, ಹೊಟ್ಟೆಬಟ್ಟೆ ಕಟ್ಟಿಯಾದರೂ ಖಾಸಗಿ ಶಾಲೆಗೆ ಮಕ್ಕಳ ದಾಖಲಾತಿ ಮಾಡುತ್ತಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಸರ್ಕಾರಿ ಶಾಲೆಗೆ ತಡೆಗೋಡೆ ನಿರ್ಮಿಸುವಲ್ಲಿ ಶಾಸಕ ಶರಣಪ್ರಕಾಶ ಪಾಟೀಲ್ ವಿಫಲ; ಆರೋಪ
ಯಾವುದೇ ರಾಜ್ಯವಾಗಲಿ ಸರ್ಕಾರ ಬದಲಾದರೂ ಸರ್ಕಾರಿ ಶಾಲೆಗಳ ಸ್ಥಿತಿ ಬದಲಾಗಲ್ಲ. ಅಂದು ಬಿಜೆಪಿ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿತ್ತು. ಕೊನೆಗೆ ವಿಲೀನದ ಹೆಸರಲ್ಲಿ ಮುಚ್ಚಿಯೇ ಬಿಟ್ಟಿತು. ಬಿಜೆಪಿ ಹೋಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೂ ಪರಿಸ್ಥಿತಿ ಬದಲಾಗಿಲ್ಲ. ರಾಜ್ಯದ 6,158 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ.
ಕರ್ನಾಟಕವು 2019ರಲ್ಲಿ ಏಕೋಪಾದ್ಯಾಯ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ದೇಶದಲ್ಲಿ ಆರನೇ ಸ್ಥಾನದಲ್ಲಿತ್ತು. ರಾಜಸ್ಥಾನದಲ್ಲಿ 12,052, ಉತ್ತರ ಪ್ರದೇಶದ 8,092, ಜಾರ್ಖಂಡ್ನಲ್ಲಿ 7,564, ಆಂಧ್ರಪ್ರದೇಶದಲ್ಲಿ 7,483 ಹಾಗೂ ಕರ್ನಾಟಕದಲ್ಲಿ 4,767 ಏಕೋಪಾದ್ಯಾಯ ಶಾಲೆಗಳಿದ್ದವು. 2019ರಲ್ಲಿ ಭಾರತದಾದ್ಯಂತ ಇಂತಹ 92,275 ಶಾಲೆಗಳಿದ್ದವು. ಆದರೆ ಈಗ ಕರ್ನಾಟಕದಲ್ಲಿ ಏಕೋಪಾದ್ಯಾಯ ಸರ್ಕಾರಿ ಶಾಲೆಗಳ ಸಂಖ್ಯೆ 6,158ಕ್ಕೆ ಏರಿಕೆಯಾಗಿದೆ. 2023-2024ರ ಲೆಕ್ಕಾಚಾರದ ಪ್ರಕಾರ ದೇಶದಲ್ಲಿ 1,10,971 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಇದ್ದಾರೆ. ಏಕೋಪಾದ್ಯಾಯ ಸರ್ಕಾರಿ ಶಾಲೆಗಳ ಪಟ್ಟಿಯಲ್ಲಿ ಕರ್ನಾಟಕ ಈಗ ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದೆ.
ಶೈಕ್ಷಣಿಕವಾಗಿ ಕೊಂಚ ಸಾಕ್ಷರತೆ ಪ್ರಮಾಣ ಹೊಂದಿರುವ ರಾಜ್ಯವಾದ ಕರ್ನಾಟಕದಲ್ಲಿಯೇ ಸರ್ಕಾರಿ ಶಾಲೆಗಳ ಸ್ಥಿತಿ ಹೀಗಿದೆ ಎಂದರೆ ಇನ್ನು ಬಿಹಾರ, ಒಡಿಶಾ, ಜಾರ್ಖಂಡ್, ರಾಜಸ್ಥಾನದಂತಹ ಕಡಿಮೆ ಸಾಕ್ಷರತಾ ಪ್ರಮಾಣವಿರುವ ರಾಜ್ಯಗಳ ಸರ್ಕಾರಿ ಶಾಲೆಗಳ ಸ್ಥಿತಿ ಹೇಗಿರಬಹುದು? ಇಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಜನರನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಕೇಂದ್ರದ, ರಾಜ್ಯದ ಕೊಡುಗೆಯೇನು?
ಹೀಗೆ ಸರ್ಕಾರಿ ಶಾಲೆಗಳ ಸಮಸ್ಯೆ ನಮಗೆ ಕಂಡರೂ ಕಾಣಿಸಿದ, ಕಾಣಿಸಿದರೂ ಅದೆಷ್ಟೋ ಜನರಿಗೆ ಸಮಸ್ಯೆಯೇ ಅನಿಸದಂತಾಗಿದೆ. ಸರ್ಕಾರಿ ಶಾಲೆಯೂ ಅಭಿವೃದ್ಧಿಯಾಗಬೇಕು, ಶಿಕ್ಷಣ ಕ್ಷೇತ್ರಕ್ಕಾಗಿ ಮೀಸಲಿಟ್ಟ ಬಜೆಟ್ ಸರಿಯಾದ ರೀತಿಯಲ್ಲಿ ವಿನಿಯೋಗವಾಗಬೇಕು ಎಂದು ಆಲೋಚಿಸಬೇಕಾಗಿರುವಾಗ ‘ಸರ್ಕಾರಿ ಶಾಲೆಯೆಂದರೆ ಹಾಗೆಯೇ ಬಿಡಿ, ನಾವಿರುವಾಗ ಕಟ್ಟಡವೂ ಇರಲಿಲ್ಲ ಗೊತ್ತಾ’ ಎನ್ನುವವರೂ ಇದ್ದಾರೆ. ಇಂದಿಗೂ ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ವಿದ್ಯುತ್ ವ್ಯವಸ್ಥೆ, ಗ್ರಂಥಾಲಯವಿಲ್ಲ, ಕಂಪ್ಯೂಟರ್ ಇಲ್ಲ, ಇದ್ದರೂ ಕಂಪ್ಯೂಟರ್ ಶಿಕ್ಷಕರಿಲ್ಲ, ಇಂಟರ್ನೆಟ್ ವ್ಯವಸ್ಥೆಯಿಲ್ಲ, ಕೊಠಡಿಗಳೇ ಇಲ್ಲ.
ಇದನ್ನು ಓದಿದ್ದೀರಾ? ಮೈಸೂರು | ಸರ್ಕಾರಿ ಶಾಲೆ ಮುಚ್ಚಲು ಮುಂದಾಗಿರುವ ಕಾಂಗ್ರೆಸ್ ನಡೆಗೆ ಎಐಡಿಎಸ್ಒ ವಿರೋಧ
ಈಗ ಶಿಕ್ಷಣ ಎಂಬುದು ಈಗ ಮಾರಾಟದ ಸರಕಾಗಿದೆ. ಎಲ್ಕೆಜಿ, ಯುಕೆಜಿಗೂ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಬೇಕಾಗುತ್ತದೆ. ಶಾಲೆಗೆ ಹೋದ ಮಕ್ಕಳಿಗೆ ಶಾಲೆಯ ಶಿಕ್ಷಣವಷ್ಟೇ ಸಾಲದು ‘ಟ್ಯೂಷನ್’ ಕಡ್ಡಾಯ ಎಂಬಂತಹ ಸ್ಥಿತಿಯನ್ನು ಖಾಸಗಿ ಶಾಲೆಗಳ ಶಿಕ್ಷಕರೂ ಮತ್ತು ಪೋಷಕರು ಅಳವಡಿಸಿಕೊಂಡಿದ್ದಾರೆ. ಶಿಕ್ಷಣಕ್ಕೆ ಈಗ ಬ್ಯಾಂಕುಗಳು ಸಾಲವೂ ನೀಡುತ್ತದೆ. ಆದರೆ ಅದರ ಬಡ್ಡಿ! ನಾವು ಉದ್ಯೋಗ ಪಡೆದು 10 ವರ್ಷ ಕಳೆದರೂ ತೀರಿಸಲಾಗದ ಸಾಲದ ಹೊರೆಯನ್ನು ವಿದ್ಯಾರ್ಥಿಗಳಾಗಿರುವಾಗಲೇ ಹೊರಿಸಲಾಗುತ್ತದೆ. ಇವೆಲ್ಲವುದರ ನಡುವೆ ಉಚಿತವಾಗಿ, ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳು ಮಂಕಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರ ಹಿತ ಕಾಪಿಡುವ ಸರ್ಕಾರಗಳು ಸರ್ಕಾರಿ ಶಾಲೆಗಳತ್ತ ದೃಷ್ಟಿಯೂ ಹಾಯಿಸದು.
ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ, ಬದಲಾಯಿಸುವ, ಮೂಲಭೂತ ಸೌಕರ್ಯ ಒದಗಿಸುವ, ಅಭಿವೃದ್ಧಿ ಮಾಡುವ, ವಿದ್ಯಾರ್ಥಿಗಳನ್ನು- ಪೋಷಕರನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ಜವಾಬ್ದಾರಿ ನಮ್ಮ ಸರ್ಕಾರದ್ದು. ಅದರೊಂದಿಗೆ ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಬಲೆಗೆ ಬೀಳದೆ, ಆಕರ್ಷಣೆಗೆ ಒಳಗಾಗದೆ ಸರ್ಕಾರಿ ಶಾಲೆಯಲ್ಲಿ ಸೌಲಭ್ಯಕ್ಕೆ ಬೇಡಿಕೆಯಿಟ್ಟು ನಮ್ಮ ಮಕ್ಕಳಿಗೂ ಅಲ್ಲಿಯೇ ವಿದ್ಯಾಭ್ಯಾಸ ಕೊಡಿಸುವ ಕರ್ತವ್ಯ ಸರ್ಕಾರಿ ಶಾಲೆ ಉಳಿಸುವ ಹೋರಾಟ ಮಾಡುವ ನಮ್ಮ ನಿಮ್ಮದು. ಕನ್ನಡ ಶಾಲೆ- ಸರ್ಕಾರಿ ಶಾಲೆ ಉಳಿಯಬೇಕಾದರೆ ಇಲ್ಲಿ ಕನ್ನಡ ಪರ ಘೋಷಣೆ ಕೂಗುವವರೂ, ಸರ್ಕಾರಿ ಶಾಲೆ ಪರ ಹೋರಾಡುವವರು ಜೊತೆಯಾಗಬೇಕು. ಮೊದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ಶಾಲೆ ಮುಚ್ಚಲು ಸರ್ಕಾರಕ್ಕೆ ಅವಕಾಶವೇ ಇಲ್ಲದಂತೆ ಮಾಡಬೇಕು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.