ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಕಾರ್ಯಕ್ರಮಕ್ಕೆ ತೆರಳಿದ್ದ ಬೆಳಗಾವಿಯ ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ನಗರದ ವಡಗಾಂವಿಯ ನಿವಾಸಿ ಜ್ಯೋತಿ ಹತ್ತರವಾಠ ಹಾಗೂ ಇವರ ಪುತ್ರಿ ಮೇಘಾ ಹತ್ತರವಾಠ, ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ, ಶಿವಾಜಿ ನಗರದ ನಿವಾಸಿ ಮಹಾದೇವಿ ಮೃತಪಟ್ಟಿದ್ದು, ಸರೋಜಿನಿ ನಡುವಿನಹಳ್ಳಿ ಗಾಯಗೊಂಡಿದ್ದಾರೆ.
ಗಾಯಗೊಂಡವರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದ್ದು, ಘಟನೆಯ ನಂತರ ಅನೇಕರು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರಿಂದ ಬೇರ್ಪಟ್ಟಿದ್ದಾರೆ.
“ಬೆಳಗಾವಿಯಿಂದ ಸುಮಾರು 60 ಮಂದಿ ಎರಡು ಬಸ್‌ಗಳಲ್ಲಿ ಪ್ರಯಾಗ್ ರಾಜ್‌ಗೆ ಪ್ರಯಾಣಿಸಿ ಪವಿತ್ರ ಸ್ನಾನ ಮಾಡಲು ಮಧ್ಯರಾತ್ರಿ 1ಕ್ಕೆ ಗಂಗಾ-ಯಮುನಾ ಸಂಗಮ ತಲುಪಿದೆವು. ಇದ್ದಕ್ಕಿದ್ದಂತೆ, ಕಾಲ್ತುಳಿತ ಪ್ರಾರಂಭವಾಯಿತು. ಜನರು ನಮ್ಮನ್ನು ತುಳಿಯಲಾರಂಭಿಸಿದರು. ನಮ್ಮಲ್ಲಿ ಅನೇಕರು ಸ್ಥಳಾಂತರಗೊಂಡಿದ್ದು, ಕೆಲವರು ಕಾಲ್ತುಳಿತಕ್ಕೊಳಗಾಗಿದ್ದೇವೆ” ಎಂದು ಗಾಯಾಳು ಸರೋಜಿನಿ ನಡುವಿನಹಳ್ಳಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಕುಂಭಮೇಳಕ್ಕೆ ತೆರಳಿದ್ದ ಯುವಕರು ಅಪಘಾತದಲ್ಲಿ ದುರ್ಮರಣ
“ಜಿಲ್ಲಾಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬೆಳಗಾವಿಯಿಂದ ಜನರನ್ನು ಕರೆದೊಯ್ದಿದ್ದ ಟ್ರಾವೆಲ್ ಏಜೆನ್ಸಿಯೊಂದಿಗೆ ಆಡಳಿತವು ನಿರಂತರವಾಗಿ ಸಂಪರ್ಕದಲ್ಲಿದೆ. ಬೆಳಗಾವಿಯ ನಾಲ್ವರು ಸಾವನ್ನಪ್ಫಿರುವ ಮಾಹಿತಿ ಖಚಿತವಾಗಿದೆ. ಅವರ ಶವಗಳನ್ನು ತರಲು ಕ್ರಮ ವಹಿಸಲಾಗಿದೆ ಮತ್ತು ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗುವುದು” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.