ಬಿಜೆಪಿ ಪಕ್ಷವು ಸಾಮಾನ್ಯ ಕಾರ್ಯಕರ್ತನಾದ ನನ್ನನ್ನ ಗುರುತಿಸಿ ಬಿಜೆಪಿ ಜಿಲ್ಲಾಧ್ಯಕ್ಷನಾಗಿ ನೇಮಿಸಿದೆ. ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸುತ್ತೇನೆ ಎಂದು ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಸಂದೀಪ್ ಬಿ ರೆಡ್ಡಿ ಹೇಳಿದರು.
ಚಿಕ್ಕಬಳ್ಳಾಪುರ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ನನ್ನ ತಾಯಿ ಇದ್ದಂತೆ. ಅದಕ್ಕೆ ಯಾವುದೇ ರೀತಿಯ ಚ್ಯುತಿ ಬರದಂತೆ ನೋಡಿಕೊಳ್ಳುತ್ತೇನೆ. ಯಾವುದೇ ಬೇಧ ಭಾವವಿಲ್ಲದೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲಾ ಪದಾಧಿಕಾರಿಗಳು ಸೇರಿ ಚುನಾವಣೆ ಪ್ರಕ್ರಿಯೆ ಮೂಲಕ ನನ್ನನ್ನು ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಸಂಘಟಿಸುವ ಮತ್ತು ಪಕ್ಷವನ್ನು ಮುನ್ನಡೆಸುವಂತ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ಪಕ್ಷ ನನ್ನ ಮೇಲಿಟ್ಟುರುವ ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ್ ನಾರಾಯಣ್ ಮಾತನಾಡಿ, ಹಿಂದಿನ ಆಯ್ಕೆ ಪ್ರಕ್ರಿಯೆಯಂತೆಯೇ ಸಂದೀಪ್ ರೆಡ್ಡಿಯವರ ಆಯ್ಕೆಯಾಗಿದೆ. ಮೊದಲಿಗೆ 6 ಜನರ ಪಟ್ಟಿಯಿತ್ತು. ಅದರಲ್ಲಿ ಮೂವರನ್ನು ಆಯ್ಕೆ ಮಾಡಿ ರಾಜ್ಯಕ್ಕೆ ಕಳಿಸಲಾಗಿತ್ತು. ಮಾಜಿ ಶಾಸಕರು, ಮಾಜಿ ಅಧ್ಯಕ್ಷರು, ಮಂಡಲ ಅಧ್ಯಕ್ಷರು ಸೇರಿದಂತೆ ಪಕ್ಷದಲ್ಲಿರುವ ಎಲ್ಲರ ಅಭಿಪ್ರಾಯ ಮತ್ತು ಸಹಮತದೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ಆಯ್ಕೆಗೆ ಸಂಸದರ ಅಸಮಾಧಾನವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೇ ಆಗಲಿ ಪಕ್ಷದಲ್ಲಿ ಕಳೆದ 43 ವರ್ಷಗಳಿಂದ ನಡೆದುಕೊಂಡು ಬಂದಿರುವ ಪ್ರಕ್ರಿಯೆ ಮೂಲಕವೇ ಆಯ್ಕೆ ಮಾಡಬೇಕೆ ಹೊರತು ಹೊಸ ರೀತಿಯಲ್ಲಿ ಆಯ್ಕೆ ಮಾಡಲು ಸಾಧ್ಯವಿಲ್ಲ. ರಾಷ್ಟ್ರೀಯ ಅಧ್ಯಕ್ಷರಿಂದ ಭೂತ್ ಮಟ್ಟದವರೆಗೆ ಒಂದೇ ರೀತಿಯ ಪ್ರಕ್ರಿಯೆ ಇರುತ್ತದೆ. ಅದರಂತೆ ಆಯ್ಕೆ ಮಾಡಲಾಗುವುದು ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಪ್ರದೀಪ್ ಈಶ್ವರ್ ನಡೆ, ಹಳ್ಳಿ ಜನರ ಕಡೆ
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಳಿ ಸೇರಿದಂತೆ ಇತರೆ ಕಾರ್ಯಕರ್ತರು ಹಾಜರಿದ್ದರು.