ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಟೋಯಿಂಗ್’ ಕಾರ್ಯಾಚರಣೆಯನ್ನು ಮತ್ತೆ ಆರಂಭಿಸಿಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಸುಳಿವು ನೀಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸರು ಆಯೋಜಿಸಿದ್ದ ‘ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ’ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪರಮೇಶ್ವರ್ ಟೋಯಿಂಗ್ ಪುನರಾರಂಭದ ಬಗ್ಗೆ ಮಾತನಾಡಿದ್ದಾರೆ. “ಸಂಚಾರ ಸುಧಾರಣೆಗಾಗಿ ತಂತ್ರಜ್ಞಾನ ಬಳಸಿಕೊಂಡು ಬೆಂಗಳೂರಿನಲ್ಲಿ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಅಂತೆಯೇ, ನಗರದ ಕೆಲವು ರಸ್ತೆಗಳಲ್ಲಿ ಮತ್ತೆ ಟೋಯಿಂಗ್ ಪುನರಾರಂಭಿಸಲು ಪೊಲೀಸರು ಯೋಜಿಸಿದ್ದಾರೆ” ಎಂದು ಹೇಳಿದ್ದಾರೆ.
“ರಾಷ್ಟ್ರ ರಾಜಧಾನಿ ದೆಹಲಿಯ ನಂತರದಲ್ಲಿ ಅತೀ ಹೆಚ್ಚು ಸಂಚಾರ ಪೊಲೀಸರು ಕಾರ್ಯನಿರ್ವಹಿಸುತ್ತಿರುವ ನಗರ ಬೆಂಗಳೂರು. ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಹಲವು ಕ್ರಮಗಳನ್ನು ಜಾರಿಯಾಗುತ್ತಿವೆ. ಅಗತ್ಯಬಿದ್ದರೆ, ಇನ್ನಷ್ಟು ಸಂಚಾರ ಪೊಲೀಸ್ ಠಾಣೆಗಳನ್ನು ತೆರೆಯಲಾಗುತ್ತದೆ” ಎಂದೂ ಹೇಳಿದ್ದಾರೆ.
2022ರಿಂದ ಬೆಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ನಗರದಲ್ಲಿ ಟ್ರಾಫಿಕ್ ಪೊಲೀಸರು ಅನಗತ್ಯವಾಗಿ ವಾಹನಗಳನ್ನು ಟೋಯಿಂಗ್ ಮಾಡುತ್ತಿದ್ದಾರೆ. ವಾಹನದ ಬಳಿಯೇ ವಾಹನ ಮಾಲೀಕರು ಇದ್ದರೂ, ವಾಹನಗಳನ್ನು ಹೊತ್ತೊಯ್ದು ದಂಡ ವಿಧಿಸುತ್ತಿದ್ದಾರೆ ಎಂಬ ಆರೋಪಗಳು ಬೆಂಗಳೂರಿನಲ್ಲಿ ಹೆಚ್ಚಾಗಿದ್ದರು.
ಅಲ್ಲದೆ, ರಸ್ತೆಯೊಂದರಲ್ಲಿ ಆಹಾರ ಡೆಲಿವೆರಿ ಮಾಡುವ ಕಾರ್ಮಿಕರೊಬ್ಬರು ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ಟೋಯಿಂಗ್ ಮಾಡಿದ್ದರು. ತಮ್ಮ ವಾಹನವನ್ನು ಬಿಡಿಸಿಕೊಳ್ಳಲು ಆ ಯುವಕ ಟೋಯಿಂಗ್ ವಾಹನದ ಹಿಂದೆ ಓಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿಲುಗಡೆ ನಿಷೇಧಿತ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದ್ದಕ್ಕೆ, ವಾಹನ ಮಾಲೀಕರು ಸ್ಥಳದಲ್ಲಿಯೇ ಇದ್ದರೂ, ಅಲ್ಲಿಯೇ ದಂಡ ವಿಧಿಸದೆ, ವಾಹನವನ್ನು ಟೋಯಿಂಗ್ ಮಾಡಿ ಹೊತ್ತೊಯ್ಯುವುದರ ವಿರುದ್ಧ ಹಾಗೂ ಟೋಯಿಂಗ್ ಮಾಡುವಾಗ ವಾಹನಗಳಿಗೆ ಹಾನಿ ಮಾಡುವುದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಬಳಿಕ, ಸರ್ಕಾರ ಬೆಂಗಳೂರಿನಲ್ಲಿ ವಾಹನ ಟೋಯಿಂಗ್‌ಅನ್ನು ಸ್ಥಗಿತಗೊಳಿಸಿ ಆದೇಶಿಸಿತ್ತು. ಟೋಯಿಂಗ್ ಬದಲಾಗಿ, ವಾಹನವನ್ನು ನಿಲ್ಲಿಸಿದ್ದ ಸ್ಥಳದಲ್ಲಿಯೇ ವಾಹನ ಚಕ್ರಗಳಿಗೆ ವ್ಹೀಲ್ ಕ್ಲ್ಯಾಂಪ್ ಹಾಕಬೇಕು. ವಾಹನ ಮಾಲೀಕರು ಬಂದಾಗ, ಸ್ಥಳದಲ್ಲಿಯೇ ದಂಡ ವಿಧಿಸಬೇಕು ಎಂದು ಸರ್ಕಾರ ಸೂಚನೆ ನೀಡಿತ್ತು. ಆದರೆ, ಇದೀಗ, ಟೋಯಿಂಗ್‌ಅನ್ನು ಪುನರಾರಂಭಿಸಲು ಸರ್ಕಾರ ಮುಂದಾಗಿದೆ.