ಪ್ಯಾರಿಸ್ ಒಪ್ಪಂದ ತಮ್ಮ ದೇಶದ ಮೌಲ್ಯಗಳನ್ನು ಅಥವಾ ಆರ್ಥಿಕ ಮತ್ತು ಪರಿಸರ ಉದ್ದೇಶಗಳನ್ನು ಸಾಧಿಸುವಲ್ಲಿ ತಮ್ಮ ಕೊಡುಗೆಗಳನ್ನು ಪ್ರತಿಬಿಂಬಿಸುವುದಿಲ್ಲ. ಅಮೆರಿಕದ ತೆರಿಗೆದಾರರಿಗೆ ಹೊರೆಯಾಗುತ್ತದೆ ಎಂಬುದು ಟ್ರಂಪ್ ವಾದ
ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದ ಹಲವು ವಿವಾದಾತ್ಮಕ ಘೋಷಣೆಗಳನ್ನು ಮಾಡಿದ್ದಾರೆ. ಹವಾಮಾನ ಬದಲಾವಣೆ ಕುರಿತಾಗಿರುವ ‘ಪ್ಯಾರಿಸ್ ಹವಾಮಾನ ಒಪ್ಪಂದ’ದಿಂದ ಹೊರಬರುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದನ್ನು ವಿಶ್ವಸಂಸ್ಥೆ ಕೂಡಾ ಖಚಿತಪಡಿಸಿದೆ. ಈ ಮೂಲಕ ಕಳೆದ ಒಂದು ದಶಕದ ಅವಧಿಯಲ್ಲಿ ಎರಡನೇ ಬಾರಿಗೆ ಈ ಒಪ್ಪಂದದಿಂದ ಅಮೆರಿಕ ಹೊರಬಂದಂತಾಗಿದೆ.
ಪ್ಯಾರಿಸ್ ಒಪ್ಪಂದವೇ ಒಂದು ‘ಮೋಸ’ ಎಂದು ಹೇಳಿರುವ ಟ್ರಂಪ್, ಮತ್ತೆ ಚೀನಾದತ್ತ ಬೆರಳು ಮಾಡಿದ್ದಾರೆ. “ಚೀನಾ ಯಾರ ಆತಂಕವೂ ಇಲ್ಲದೆ ಪರಿಸರವನ್ನು ನಾಶ ಮಾಡುತ್ತಿದೆ. ಆದರೆ ಅಮೆರಿಕ ತನ್ನ ಕೈಗಾರಿಕೆಗಳನ್ನು ಸುಸ್ಥಿತಿಯಲ್ಲಿಟ್ಟಿದೆ” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಹಾಗೆಯೇ ಏಕಪಕ್ಷೀಯವಾದ ಈ ಒಪ್ಪಂದವನ್ನು ಹರಿದುಹಾಕುವುದಾಗಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್ ಆಡಳಿತದ ಪೌರತ್ವ ನೀತಿ ಆದೇಶಕ್ಕೆ ಅಮೆರಿಕ ಕೋರ್ಟ್ ತಡೆ
ಅಷ್ಟಕ್ಕೂ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಈ ಒಪ್ಪಂದದಿಂದ ಹಿಂದೆ ಸರಿದಿರುವುದಲ್ಲ. ತನ್ನ ಮೊದಲ ಅಧಿಕಾರವಧಿಯಲ್ಲಿಯೂ ಟ್ರಂಪ್ ಇದೇ ನಿರ್ಧಾರ ಕೈಗೊಂಡಿದ್ದರು. ಆದರೆ, 2021ರಲ್ಲಿ ಅಮೆರಿಕ ಅಧ್ಯಕ್ಷರಾದ ಜೋ ಬೈಡೆನ್ ಮತ್ತೆ ಈ ಒಪ್ಪಂದಕ್ಕೆ ಸಹಿ ಮಾಡಿದರು. ಇದೀಗ 2ನೇ ಬಾರಿಗೆ ಅಧ್ಯಕ್ಷರಾಗುತ್ತಿದ್ದಂತೆ ಟ್ರಂಪ್ ಒಪ್ಪಂದದಿಂದ ಹಿಂದೆ ಸರಿದಿದ್ದಾರೆ. ಟ್ರಂಪ್ ಆಡಳಿತವು ತುಘಲಕ್ ದರ್ಬಾರ್‌ನಂತಾಗಿದೆ.
ಏನಿದು ಪ್ಯಾರಿಸ್ ಹವಾಮಾನ ಒಪ್ಪಂದ?
ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ಅಭಿಯಾನಕ್ಕಾಗಿ ಹಲವು ದೇಶಗಳು ಒಪ್ಪಿಕೊಂಡು ಮಾಡಿಕೊಂಡ ಒಪ್ಪಂದವಿದು. 2015ರ ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸುಮಾರು 200ಕ್ಕೂ ಅಧಿಕ ದೇಶಗಳು ಒಗ್ಗೂಡಿ, ಒಪ್ಪಂದವನ್ನು ಅಂಗೀಕರಿಸಿದವು, ಒಪ್ಪಂದದ ಭಾಗವಾದವು. 2016ರ ನವೆಂಬರ್ 4ರಂದು ಒಪ್ಪಂದವನ್ನು ಜಾರಿಗೆ ತರಲಾಯಿತು.
ಜಾಗತಿಕ ತಾಪಮಾನವನ್ನು ಮುಂದಿನ 2050ರ ವೇಳೆಗೆ 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಗೆ, 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಗೊಳಿಸುವುದು ಒಪ್ಪಂದದ ಗುರಿಯಾಗಿದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವುದು ಒಪ್ಪಂದದ ಆದ್ಯತೆಯಾಗಿದೆ. ಒಪ್ಪಂದದ ಪ್ರಕಾರ ಪ್ರತಿಯೊಂದು ದೇಶವು ಹಸಿರುಮನೆ ಅನಿಲಗಳ ಹೊರಸೂಸುವಿಕೆಗೆ ನಿರ್ದಿಷ್ಟ ಗುರಿಯನ್ನು ಹೊಂದಿಸಬೇಕು. ಪ್ರತಿ ಐದು ವರ್ಷಕ್ಕೊಮ್ಮೆ ಇದರ ಪರಿಶೀಲನೆ ನಡೆಸಬೇಕು. ಶ್ರೀಮಂತ ದೇಶಗಳು ಬಡ ದೇಶಗಳಿಗೆ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು, ನವೀಕರಿಸಬಹುದಾದ ಇಂಧನದ ಬಳಕೆಯನ್ನು ಮಾಡಲು ‘ಹವಾಮಾನ ಹಣಕಾಸು’ ಎಂದು ಕರೆಯಲಾಗುವ ಹಣಕಾಸು ಸಹಾಯವನ್ನು ಒದಗಿಸುತ್ತವೆ.
ಇದನ್ನು ಓದಿದ್ದೀರಾ?: ಡೊನಾಲ್ಡ್ ಟ್ರಂಪ್ ಪುನರಾಗಮನ; ಜಾಗತಿಕ ನಾಯಕರಿಗೆ ಶುರುವಾಯಿತೆ ಆತಂಕ?
ಒಪ್ಪಂದದಿಂದ ಹಿಂದೆ ಸರಿಯುವಾಗ ಟ್ರಂಪ್ ನೀಡಿದ ಕಾರಣವೇನು?
ಡೊನಾಲ್ಡ್ ಟ್ರಂಪ್ ತನ್ನ ಈ ಹಿಂದಿನ ಅಧಿಕಾರವಧಿ ಸಂದರ್ಭದಲ್ಲಿಯೂ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದರು. ಆ ಸಂದರ್ಭದಲ್ಲಿ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದಿದ್ದು ಸರಿಯಲ್ಲ ಎಂದು ಪೋಪ್ ಫ್ರಾನ್ಸಿಸ್ ಸೇರಿದಂತೆ ಹಲವು ಮಂದಿ ಅಭಿಪ್ರಾಯಪಟ್ಟಿದ್ದರು. ಇದೀಗ ತನ್ನ ಎರಡನೇ ಅವಧಿಯಲ್ಲಿಯೂ ಟ್ರಂಪ್ ತನ್ನ ಹಿಂದಿನ ತೀರ್ಮಾನವನ್ನೇ ಬೆನ್ನತ್ತಿದ್ದಾರೆ.
“ಅಂತಹ ಒಪ್ಪಂದಗಳು ನಮ್ಮ ದೇಶದ ಮೌಲ್ಯಗಳನ್ನು ಅಥವಾ ಆರ್ಥಿಕ ಮತ್ತು ಪರಿಸರ ಉದ್ದೇಶಗಳನ್ನು ಸಾಧಿಸುವಲ್ಲಿ ನಮ್ಮ ಕೊಡುಗೆಗಳನ್ನು ಪ್ರತಿಬಿಂಬಿಸುವುದಿಲ್ಲ. ಈ ಒಪ್ಪಂದ ಅಮೆರಿಕದ ಮೇಲೆ ಅನ್ಯಾಯದ ಹೊರೆಯಾಗುತ್ತದೆ. ಅಮೆರಿಕದ ತೆರಿಗೆದಾರರಿಗೆ ಹೊರೆಯಾಗುತ್ತದೆ” ಎಂದಿರುವ ಟ್ರಂಪ್, ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ.
ಈ ಹಿಂದೆ ಟ್ರಂಪ್ ಅವರು ಪ್ಯಾರಿಸ್ ಒಪ್ಪಂದದಿಂದ ಸಂಪೂರ್ಣವಾಗಿ ಹಿಂದೆ ಸರಿಯಲು ಸರಿಸುಮಾರು ಮೂರು ವರ್ಷಗಳೇ ತಗುಲಿತು ಎಂದು ವರದಿ ಹೇಳುತ್ತದೆ. ಈ ಬಾರಿ ಕನಿಷ್ಠ ಒಂದು ವರ್ಷವಾದರೂ ಬೇಕಾದೀತು ಎನ್ನಲಾಗಿದೆ. ಸದ್ಯ ಪಾರಿಸ್ ಒಪ್ಪಂದದಿಂದ ಲಿಬಿಯಾ, ಯೆಮನ್ ಹಾಗೂ ಇರಾನ್ ದೇಶಗಳು ಈಗಾಗಲ ಹೊರಗುಳಿದಿವೆ.
ಇದನ್ನು ಓದಿದ್ದೀರಾ? ದಿನಕ್ಕೆ 20 ಸುಳ್ಳುಗಳು: 30,573 ಹುಸಿ ಸುಳ್ಳುಗಳ ದಾಖಲೆ ಮುರಿಯುತ್ತಾರಾ ಅಮೆರಿಕ ಅಧ್ಯಕ್ಷ ಟ್ರಂಪ್?
ಪ್ಯಾರಿಸ್ ಒಪ್ಪಂದ ಮತ್ತು ಭಾರತ
2016ರಿಂದಲೇ ಭಾರತ ಹವಾಮಾನ ಸಂಬಂಧಿಸಿದ ಪ್ಯಾರಿಸ್ ಒಪ್ಪಂದದ ಭಾಗವಾಗಿದೆ. 2023ರಲ್ಲಿ ಈ ಒಪ್ಪಂದವನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಜಾಗತಿಕ ನಾಯಕರನ್ನು ಭಾರತ ಒತ್ತಾಯಿಸಿತ್ತು. “ಪ್ಯಾರಿಸ್ ಒಪ್ಪಂದದ ಅನುಷ್ಠಾನವು ನ್ಯಾಯಸಮ್ಮತ ಹಾಗೂ ಎಲ್ಲರ ಹಕ್ಕುಗಳನ್ನು ಗೌರವಿಸುವ ತತ್ವದಡಿ ನಡೆಯಬೇಕು” ಎಂದು ಭಾರತ ಪ್ರತಿಪಾದಿಸಿತ್ತು.
ಟ್ರಂಪ್ ಮತ್ತು ವಿವಿಧ ವಿವಾದಾತ್ಮಕ ನಿರ್ಧಾರಗಳು
ಡೊನಾಲ್ಡ್ ಟ್ರಂಪ್ ತನ್ನ ಮೊದಲ ಅಧಿಕಾರವಧಿಯಂತೆ ಈ ಬಾರಿಯೂ ಹಲವು ಸುಳ್ಳುಗಳನ್ನು ಪೋಣಿಸಿಕೊಂಡು ವಿವಾದಾತ್ಮಕ ಘೋಷಣೆ, ನಿರ್ಧಾರಗಳನ್ನು ಕೈಗೊಳ್ಳುತ್ತಾ ತಾನು ವಿಭಿನ್ನ ವ್ಯಕ್ತಿ ಎಂಬಂತೆ ಬಿಂಬಿಸಿಕೊಂಡು ಬಂದಿದ್ದಾರೆ. ಟ್ರಂಪ್ ಕೋವಿಡ್ ಬಿಕ್ಕಟ್ಟು ಮತ್ತು ಅಂತಾರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟನ್ನು ಜಾಗತಿಕ ಆರೋಗ್ಯ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆ (WHO) ಸರಿಯಾಗಿ ನಿರ್ವಹಿಸಿಲ್ಲ ಎಂದು ಆರೋಪಿಸಿ, ಡಬ್ಲ್ಯೂಎಚ್‌ಒನಿಂದ ಹೊರಬರುವುದಾಗಿ ಘೋಷಿಸಿದ್ದಾರೆ. ಇದಾದ ಒಂದೆರಡು ದಿನದಲ್ಲೇ ಮತ್ತೆ ವಿಶ್ವ ಆರೋಗ್ಯ ಸಂಸ್ಥೆ ಸೇರಬಹುದು ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ 2021ರ ಜನವರಿ 6ರಂದು ಗಲಭೆ ಮಾಡಿದ್ದ ತನ್ನ 1,500 ಬೆಂಬಲಿಗರಿಗೆ ಕ್ಷಮಾದಾನ ನೀಡುವ ಆದೇಶಕ್ಕೂ ಟ್ರಂಪ್ ಸಹಿ ಹಾಕಿದ್ದಾರೆ.
ವಿಶ್ವದಲ್ಲೇ ‘ದೊಡ್ಡಣ್ಣ’ ಎಂದು ಕರೆಸಿಕೊಳ್ಳುವ ಅಮೆರಿಕ ಇತರೆ ದೇಶಗಳಿಗೆ ಸಹಾಯ ಮಾಡುತ್ತಾ ಹವಾಮಾನ ಸಮತೋಲನ ಕಾಯ್ದುಕೊಳ್ಳುವ ಮಹತ್ವದ ಒಪ್ಪಂದದಿಂದ, ‘ನಮಗೆ ಆರ್ಥಿಕ ಹೊರೆ’ ಎಂದು ಕಾರಣ ನೀಡಿ ಹಿಂದೆ ಸರಿಯುತ್ತಿದೆ. ಅಮೆರಿಕದ ನಿರ್ಧಾರದಿಂದ ಜಾಗತಿಕ ತಾಪಮಾನದಲ್ಲಾಗುವ ಬದಲಾವಣೆಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.