ರಾಜ್ಯ ಸರ್ಕಾರಕ್ಕೂ ಈ ಪ್ರಕರಣದಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಆರೋಪಿಗಳು ಬೇರೆ ಬೇರೆ ಪಕ್ಷದವರಾಗಿದ್ದರೂ ಭೂ ಅಕ್ರಮದಲ್ಲಿ ತೊಡಗಿರುವವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅವರನ್ನು ಇವರು ರಕ್ಷಿಸುವುದು, ಇವರನ್ನು ಅವರು ರಕ್ಷಿಸುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ... ಎನ್ನುತ್ತಾರೆ ಎಸ್.ಆರ್ ಹಿರೇಮಠ
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಅವರ ಸಂಬಂಧಿಕರಾದ ಮದ್ದೂರು ಶಾಸಕ ಡಿ ಸಿ ತಮ್ಮಣ್ಣ ಹಾಗೂ ಚಿಕ್ಕಮ್ಮ ಸಾವಿತ್ರಮ್ಮ ಸೇರಿದಂತೆ ಮತ್ತಿತರರು ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸುಮಾರು 14 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಆರೋಪದ ಪ್ರಕರಣ ದಿನೇ ದಿನೆ ಬಿಗಿಯಾಗುತ್ತಿದೆ.
“ಕುಮಾರಸ್ವಾಮಿ ಮತ್ತವರ ಸಂಬಂಧಿಕರು ಕೇತಗಾನಹಳ್ಳಿಯಲ್ಲಿ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ಕೋರ್ಟ್ ಸೂಚನೆ ಹೊರತಾಗಿಯೂ ಒತ್ತುವರಿ ತೆರವು ಮಾಡುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿ ಎಸ್ ಆರ್ ಹಿರೇಮಠ ಅವರ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕುಮಾರಸ್ವಾಮಿ, ಅವರ ಚಿಕ್ಕಮ್ಮ ಸಾವಿತ್ರಮ್ಮ, ಸಂಬಂಧಿಕ ಮಾಜಿ ಶಾಸಕ ಡಿ ಸಿ ತಮ್ಮಣ್ಣ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್ ಸೇರಿ ಮತ್ತಿತರರು ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ 14 ಎಕರೆ ಸರ್ಕಾರಿ ಜಮೀನನ್ನು ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎರಡು ವಾರದಲ್ಲಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಿ ಬುದ್ದಿ ಕಲಿಸಬೇಕಾಗುತ್ತದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್ ಕಟು ಎಚ್ಚರಿಕೆ ಕೊಟ್ಟಿದೆ.
ಪ್ರಕರಣದಲ್ಲಿ ಕೋರ್ಟ್ ಆದೇಶ ಪಾಲಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕೆಂಬ ಸರ್ಕಾರಿ ವಕೀಲರ ಮನವಿಯನ್ನು ತಳ್ಳಿಹಾಕಿರುವ ನ್ಯಾಯಮೂರ್ತಿ ಸೋಮಶೇಖರ್, “ಕೆ ವಾಸುದೇವನ್ ವರ್ಸಸ್ ಟಿ ಆರ್ ಧನಂಜಯ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಅದೂ ಸಾರ್ವಜನಿಕ ಕಾಳಜಿಯುಳ್ಳ ಪ್ರಕರಣಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ಇದನ್ನೇ ನಾನೂ ಅನುಸರಿಸುತ್ತೇನೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆ ಆರಂಭಿಸುತ್ತೇನೆ. ನೀವು ನೆಪ ಹೇಳಿ ತಪ್ಪಿಸಿಕೊಳ್ಳಲು ಅವಕಾಶವೇ ಇಲ್ಲ. ವ್ಯವಸ್ಥೆ ನೋಡಿ ಜನ ನಗುತ್ತಿದ್ದಾರೆ. ನೀವೆಲ್ಲಾ ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುವ ತನಕ ನಿಮ್ಮ ಸಂಬಳ ತಡೆಹಿಡಿದರೆ ಗೊತ್ತಾಗುತ್ತದೆ” ಎಂದು ಗುಡುಗಿದ್ದಾರೆ.
“ಪ್ರತಿವಾದಿಗಳು ಪ್ರಭಾವಿಗಳು (ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಡಿ ಸಿ ತಮ್ಮಣ್ಣ ಮುಂತಾದವರು) ಎಂದು ನೀವು ಐದು ವರ್ಷ ಏನೂ ಮಾಡಿಲ್ಲ ತಾನೆ? ನಿಮಗೆ ಇನ್ನೆರಡು ವಾರ ಸಮಯ ಕೊಡುತ್ತೇನೆ. ನೀವು ಅಸಮರ್ಥರು ಎಂದಾದರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೆ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದರೆ ಸರಿಹೋಗ್ತೀರಿ..” ಎಂದು ನ್ಯಾಯಮೂರ್ತಿಗಳು ಬಾಯಿಮಾತಿನಿಂದ ಚಾಟಿ ಬೀಸಿದ್ದಾರೆ.
ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ಉತ್ತರಿಸಲು ಮುಂದಾದ ಕಠಾರಿಯಾ, “ಸರ್ಕಾರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ನಾವು 14 ಎಕರೆಗೂ ಹೆಚ್ಚು ಆಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್‌ಐಟಿ ರಚಿಸಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ” ಎಂದು ಸಮಜಾಯಿಷಿ ನೀಡಿದರು. ನ್ಯಾಯಮೂರ್ತಿ ಸೋಮಶೇಖರ್ ಅವರು ಕಠಾರಿಯಾ ಅವರ ಮಾತು ಒಪ್ಪದೇ, “ಹೈದಿನೈದು ದಿನ ಕಾಲಾವಕಾಶ ನೀಡುತ್ತೇನೆ. ಅಷ್ಟರೊಳಗೆ ಆದೇಶ ಪಾಲಿಸಿದರೆ ಸರಿ. ಇಲ್ಲಾಂದ್ರೆ, ಎಲ್ಲ ಪ್ರತಿವಾದಿಗಳನ್ನೂ ಬೆಂಗಾವಲಿನಲ್ಲಿ ಕರೆಯಿಸಿಬಿಡುತ್ತೇನೆ. ಅಧಿಕಾರಿಗಳನ್ನು ಎಲ್ಲಿಗೆ ಕಳುಹಿಸಬೇಕೊ ಅಲ್ಲಿಗೆ ಕಳುಹಿಸುತ್ತೇನೆ. ಯಾವುದಾದರೂ ವಿಷಯಕ್ಕೆ ಎಸ್ಐಟಿ ರಚಿಸುವುದು ಸರ್ಕಾರಕ್ಕೆ ಚಾಳಿಯಾಗಿದೆ” ಎಂದು ಅಬ್ಬರಿಸಿದ್ದಾರೆ.
ನ್ಯಾಯಮೂರ್ತಿ ಕೆ. ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠವು ರಾಜ್ಯ ಸರ್ಕಾರವನ್ನು ಈ ರೀತಿಯಾಗಿ ತೀವ್ರ ತರಾಟೆಗೆ ತೆಗೆದುಕೊಂಡಿರುವುದು ಗಮನಿಸಿದರೆ ಹೈಕೋರ್ಟ್ ಕುಮಾರಸ್ವಾಮಿ ಮತ್ತು ಸಂಬಂಧಿಕರು ಕಬಳಿಸಿದ್ದಾರೆ ಎನ್ನಲಾದ ಭೂ ವಿವಾದ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಐಎಎಸ್ ಅಧಿಕಾರಿ ವಂದಿತಾ ಶರ್ಮಾ ಅವರು ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿದ್ದಾಗಲೂ ಅವರನ್ನು ವಿಚಾರಣೆಗೆ ಕರೆಯಿಸಿ ತರಾಟೆಗೆ ತೆಗೆದುಕೊಂಡಿತ್ತು. ಆದರೂ ಸರ್ಕಾರದಿಂದ ಯಾವುದೇ ಕ್ರಮಗಳು ಆಗಿರಲಿಲ್ಲ. ಹೀಗಾಗಿ ಸರ್ಕಾರ ಪದೇ ಪದೆ ಈ ಪ್ರಕರಣದಲ್ಲಿ ಜಾರಿಕೊಳ್ಳುತ್ತಿರುವುದನ್ನು ಮನಗಂಡಿರುವ ಹೈಕೋರ್ಟ್ ಕಠಿಣವಾದ ನ್ಯಾಯಾಂಗದ ಭಾಷೆಯಲ್ಲೇ ಈಗ ಉತ್ತರಿಸಿದೆ.

ಸರ್ಕಾರದಿಂದ ರಕ್ಷಿಸುವ ಕೆಲಸ: ಎಸ್ ಆರ್ ಹಿರೇಮಠ ಆರೋಪ ಪ್ರಕರಣದ ವಿಚಾರವಾಗಿ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಅವರನ್ನು ಈ ದಿನ.ಕಾಮ್ ಮಾತನಾಡಿಸಿದಾಗ, "ಆರೋಪಿಗಳು ಪ್ರಭಾವಿ ಎಂಬ ಕಾರಣಕ್ಕೆ ಕ್ರಮ ಜರುಗಿಸಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಸಾಮಾನ್ಯವಾಗಿ ಅಧಿಕಾರಿಗಳ ಕಾರ್ಯವೈಖರಿಯೇ ಹೀಗಿದೆ. ಸುಮ್ಮನೇ ಏನೋ ಒಂದು ಬರೆದುಕೊಂಡು ಬಂದು ಅದನ್ನು ಮಾಡಿದ್ದೇವೆ, ಇದನ್ನು ಮಾಡಿದ್ದೇವೆ ಎಂದು ಹೇಳುತ್ತಾರೆ. ನೋಡಿದರೆ ಅದರಲ್ಲಿ ಏನೂ ಹುರುಳು ಇರುವುದಿಲ್ಲ" ಎನ್ನುತ್ತಾರೆ. "ರಾಜ್ಯ ಸರ್ಕಾರಕ್ಕೂ ಈ ಪ್ರಕರಣದಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಆರೋಪಿಗಳು ಬೇರೆ ಬೇರೆ ಪಕ್ಷದವರಾಗಿದ್ದರೂ ಭೂ ಅಕ್ರಮದಲ್ಲಿ ತೊಡಗಿರುವವರು ಎಲ್ಲ ಪಕ್ಷದಲ್ಲೂ ಇದ್ದಾರೆ. ಅವರನ್ನು ಇವರು ರಕ್ಷಿಸುವುದು, ಇವರನ್ನು ಅವರು ರಕ್ಷಿಸುವ ಕೆಲಸ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಭೂ ಒತ್ತುವರಿ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು ಅಂತ ಯಾರಿಗೂ ಅನ್ನಿಸಿಲ್ಲ" ಎಂದು ಹೇಳಿದರು. "ಕೇತಗಾನಹಳ್ಳಿ ಭೂ ಒತ್ತುವರಿ ಪ್ರಕರಣದಲ್ಲಿ ಕೇವಲ 14 ಎಕರೆ ಒತ್ತುವರಿ ಅಂತ ತೋರಿಸಲಾಗಿದೆ. ಆದರೆ ನಮ್ಮ ದಾಖಲೆಗಳ ಪ್ರಕಾರ 71 ಎಕರೆ 30 ಗುಂಟೆ ಇದೆ. ಇದರಲ್ಲಿ ಅಕ್ರಮದ ಸಿಂಹಪಾಲು ಹೆಚ್ ಡಿ ಕುಮಾರಸ್ವಾಮಿ ಅವರದ್ದೇ ಇದೆ. ಅವರ ಚಿಕ್ಕಮ್ಮ ಸಾವಿತ್ರಮ್ಮ, ಮದ್ದೂರಿನ ಶಾಸಕ ಡಿ ಸಿ ತಮ್ಮಣ್ಣ ಮತ್ತು ಅವರ ಹೆಂಡತಿ ಹಾಗೂ ಮಕ್ಕಳು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದರಲ್ಲಿ ಬೇರೆ ಬೇರೆ ವ್ಯಕ್ತಿಗಳು ಇದ್ದಾರೆ. ಈಗಿನ ಸಂಸದ ಡಾ. ಸಿ ಎನ್ ಮಂಜುನಾಥ್ ಅವರು ಕೂಡ ಕೆಲವು ಗುಂಟೆ ಒತ್ತುವರಿ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಪ್ರಭಾವಿಗಳೇ ಆಗಿದ್ದರಿಂದ ಕ್ರಮಕೈಗೊಳ್ಳಬೇಕಾದ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ" ಎಂದು ಆರೋಪಿಸಿದರು. "ಭೂ ಒತ್ತುವರಿ ಮಾಡಲು ಸರ್ಕಾರಕ್ಕೆ ಎರಡು ದಿನ ಸಾಕು. ಯಾವೆಲ್ಲ ವ್ಯಕ್ತಿಗಳು ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಅವರಿಗೆ ನೋಟಿಸ್ ಕಳುಹಿಸಿ ಅದನ್ನು ತೆರವು ಮಾಡುವುದು ಸರ್ಕಾರಕ್ಕೆ ದೊಡ್ಡ ಕೆಲಸವೇ ಅಲ್ಲ. ಇನ್ನು ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅಧಿಕಾರಿಗಳು ಶಾಮೀಲಾಗಿದ್ದರೆ ಅವರ ವಿರುದ್ಧವೂ ಶಿಸ್ತುಕ್ರಮವಾಗಬೇಕು. ಕೋರ್ಟು ಈಗ ದೊಡ್ಡ ಮನಸ್ಸು ಮಾಡಿದೆ. ಸರ್ಕಾರ ಮುಂದೆ ಬಂದರೆ ಆರೋಪಿಗಳಿಗೆ ಶಿಕ್ಷೆ ಆಗುತ್ತದೆ" ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರು ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯಲ್ಲಿ ವಿವಿಧ ಸರ್ವೆ ನಂಬರ್‌ಗಳಲ್ಲಿ ಇವರೆಲ್ಲರೂ 110.32 ಎಕರೆ ಪೈಕಿ ಸುಮಾರು 54 ಎಕರೆಯಷ್ಟು ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ದಿವಂಗತ ಜಿ. ಮಾದೇಗೌಡರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಸರ್ವೆ ನಂ. 7, 8, 9, 10, 16, 17 ಮತ್ತು 79ರಲ್ಲಿ ಮಂಜೂರಾಗಿರುವ ಗೋಮಾಳದ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಸ್ತೃತ ತನಿಖೆ ನಡೆಸಬೇಕು. ಒಂದೊಮ್ಮೆ ಆ ಭೂಮಿ ಒತ್ತುವರಿಯಾಗಿದ್ದರೆ ಅದನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಸರ್ಕಾರಿ ಭೂಮಿ ವಾಪಸ್ ಪಡೆಯಲು ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕು. ಸರ್ಕಾರದ ಭೂಮಿಗೆ ಅತಿಕ್ರಮ ಪ್ರವೇಶ ಮಾಡಿರುವವರು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಕೈಗೊಳ್ಳಬೇಕು. ನಾಲ್ಕು ತಿಂಗಳಲ್ಲಿ ಈ ಕ್ರಮವಾಗಬೇಕು. ಆನಂತರ 15 ದಿನಗಳಲ್ಲಿ ರಿಜಿಸ್ಟ್ರಾರ್‌ಗೆ ಅನುಪಾಲನಾ ವರದಿ ಸಲ್ಲಿಸುವಂತೆ ಲೋಕಾಯುಕ್ತರು 2014ರ ಆಗಸ್ಟ್ 4ರಂದು ಆದೇಶಿಸಿದ್ದರು.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಲೋಕಾಯುಕ್ತ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಜಾರಿ ಮಾಡಲು ವಿಫಲವಾಗಿರುವ ರಾಜ್ಯ ಸರ್ಕಾರದ ನಡೆ ಪ್ರಶ್ನಿಸಿ ಎಸ್ ಆರ್ ಹಿರೇಮಠ ನೇತೃತ್ವದ ಸಮಾಜ ಪರಿವರ್ತನಾ ಸಮುದಾಯ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ. ಇದರ ವಿಚಾರಣೆ ಹಂತ ಹಂತವಾಗಿ ನಡೆಯುತ್ತ ಬರುತ್ತಿದೆ. ಭೂ ಕಬಳಿಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖಾ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಪಾಲನಾ ವರದಿ (ಕ್ರಮ ಜರುಗಿಸುವ ವರದಿ) ಹೈಕೋರ್ಟ್‌ಗೆ ಸಲ್ಲಿಕೆಯಾಗಬೇಕಿದೆ. ಈ ವರದಿ ಸಲ್ಲಿಕೆಗೆ 2023ರ ಜನವರಿ 19ರಂದು ಒಂದು ವಾರ ಕಾಲಾವಕಾಶವನ್ನು ಸರ್ಕಾರಿ ವಕೀಲರು ಕೋರಿದ್ದರು. ಆದರೆ ಇಲ್ಲಿಯವರೆಗೂ ವರದಿ ಕೋರ್ಟ್‌ಗೆ ಸಲ್ಲಿಕೆಯಾಗಿಲ್ಲ.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ 7, 8, 9, 10, 16, 17 ಮತ್ತು 79ರ ಸರ್ವೆ ನಂಬರ್‌ಗಳಲ್ಲಿನ ಜಮೀನು ಪರಿಶೀಲಿಸಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಅವರು ಕೆಲವು ವಿಚಾರಗಳು ಮತ್ತು ವಾಸ್ತವಿಕ ಅಂಶಗಳನ್ನು ದಾಖಲಿಸಿದ್ದಾರೆ ಎಂದು 2023ರ ಫೆಬ್ರವರಿ 6ರಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಅಫಿಡವಿಟ್‌ನಲ್ಲಿ ಸರ್ವೆ ನಂಬರ್ 79 ಹೊರತುಪಡಿಸಿ ಕೇವಲ ಆರು ಸರ್ವೆ ನಂಬರ್‌ಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. 8, 9, 10, 16 ಮತ್ತು 79ರ ಸರ್ವೆ ನಂಬರ್‌ಗಳಲ್ಲಿ ಒಟ್ಟು 14 ಎಕರೆ 4 ಗುಂಟೆ ಇದೆ ಎಂದು ಹೇಳಲಾಗಿದೆ. ಸರ್ಕಾರದ ಭೂಮಿ ಒತ್ತುವರಿ ತೆರವು ಮಾಡುವಂತೆ ತಹಶೀಲ್ದಾರ್ ಅವರು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಒತ್ತುವರಿದಾರರು ಉಪವಿಭಾಗಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಿದ್ದು, ಇದನ್ನು ವಜಾ ಮಾಡಿ, 14 ಎಕರೆ 4 ಗುಂಟೆ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಹೇಳಲಾಗಿದೆ. ಉಪವಿಭಾಗಾಧಿಕಾರಿಯ ಆದೇಶವನ್ನು ಜಿಲ್ಲಾಧಿಕಾರಿ ಎತ್ತಿ ಹಿಡಿದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಅರ್ಜಿದಾರರ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಎಸ್ ಬಸವರಾಜು ಅವರು, ''ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ 71 ಎಕರೆ ಭೂಮಿ ಒತ್ತುವರಿಯಾಗಿದ್ದು, ಇದರಲ್ಲಿ 14 ಎಕರೆ ಹೊರತುಪಡಿಸಿ ರಾಜ್ಯ ಸರ್ಕಾರವು ಇದುವರೆಗೂ ಒಂದೇ ಒಂದು ಇಂಚು ಭೂಮಿಯನ್ನೂ ತನ್ನ ಸುಪರ್ದಿಗೆ ಪಡೆದಿಲ್ಲ. ಯಾರನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ? ನಾವು ಸಂದೇಶಕಾರರಾಗಿ ಕೆಲಸ ಮಾಡುತ್ತಿದ್ದೇವೆ. ಸರ್ಕಾರಕ್ಕೆ ತನ್ನ ಭೂಮಿ ವಶಕ್ಕೆ ಪಡೆಯುವ ಇಚ್ಛೆ ಇಲ್ಲದಿರುವಾಗ ಏನು ಮಾಡಲಾಗುತ್ತದೆ. ನಮಗೆ ಸಾಕಾಗಿ ಹೋಗಿದೆ'' ಎಂದಿದ್ದಾರೆ.
ಕೇತಗಾನಹಳ್ಳಿಯಲ್ಲಿ ಅತಿಕ್ರಮಿಸಿದ್ದಾರೆ ಎಂದು ಆರೋಪಿಸಲಾದ ಭೂಮಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 11 ಅಫಿಡವಿಟ್‌ಗಳನ್ನು ಆಧರಿಸಿ ಸಮಗ್ರ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ 2024 ಅಕ್ಟೋಬರ್ 24ರಂದು ನಿರ್ದೇಶಿಸಿತ್ತು. ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಆದೇಶ ಮಾಡಿರುವುದನ್ನು ಜಾರಿ ಮಾಡುವಂತೆ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಆದೇಶಗಳಿಗೆ ಸರ್ಕಾರ ನಿರ್ಲಕ್ಷ್ಯಧೋರಣೆ ತಾಳುತ್ತಲೇ ಬರುತ್ತಿದೆ. ಈಗ ಹೈಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡ್ಡಿ ಮುರಿದಂತೆ ಮಾತನಾಡಿದೆ. 15 ದಿನದಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಸಂಬಂಧಿಕರ ವಿರುದ್ಧ ಸರ್ಕಾರ ಏನು ಕ್ರಮ ಜರುಗಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.