ಕೊಪ್ಪಳ ತಾಲೂಕಿನ ಗಿಣಿಗೇರಿ, ಅಲ್ಲಾನಗರ ಸಮೀಪದಲ್ಲಿರುವ ಕಾಮಿನಿ ಕಬ್ಬಿಣ ಮತ್ತು ಸ್ಟೀಲ್ ಕಾರ್ಖಾನೆಯಲ್ಲಿ(ಹೊಸಪೇಟೆ ಇನ್ಸಾತ್) ಅನಿಲ ಸೋರಿಕೆಯಿಂದ ನಡೆದ ಅವಘಡದ ಪ್ರದೇಶಕ್ಕೆ ಕಾರ್ಖಾನೆ ಮತ್ತು ಬಾಯ್ದರುಗಳ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ತಾತ್ಕಾಲಿಕವಾಗಿ ಉತ್ಪಾದನಾ ಕೆಲಸ ಸ್ಥಗಿತ ಮಾಡುವಂತೆ ಸೂಚಿಸಿದ್ದಾರೆ.
ಕಾರ್ಖಾನೆಯ ಒಂದನೇ ಘಟಕದಲ್ಲಿ ಜನವರಿ 16ರಿಂದ ನಿರ್ವಹಣೆ ಕಾರ್ಯ ನಡೆಯುತ್ತಿದ್ದು, ಕೊನೆಯ ಹಂತದ ಕೆಲಸ ನಡೆಯುವಾಗಲೇ ಅವಘಡ ಸಂಭವಿಸಿದೆ. ಕಾರ್ಬನ್ ಮೊನಾಕ್ಸೈಡ್ ಅನಿಲ ಸೋರಿಕೆಯಿಂದ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಕೆ ಎಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ ಒಂಬತ್ತು ಮಂದಿ ಕಾರ್ಮಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
“ಕಾರ್ಖಾನೆ ಮತ್ತು ಬಾಯ್ದರುಗಳ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ ತನಿಖೆ ಮಾಡಿದ್ದಾರೆ. ಕಾರ್ಖಾನೆಯಲ್ಲಿನ ಸುರಕ್ಷತೆಯ ಕುರಿತು ಕ್ರಮ ತೆಗೆದುಕೊಳ್ಳಲು ಮತ್ತು ಮುಂದಿನ ದಿನಗಳಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲು ಕಾರ್ಖಾನೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಸುರಕ್ಷತಾ ಆಡಿಟ್ ಮಾಡಿಸಿ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿಗೆ ವರದಿ ಸಲ್ಲಿಸಲು ಸೂಚಿಸಿದ್ದು, ಅಲ್ಲಿಯ ತನಕ ಕಾರ್ಖಾನೆಯಲ್ಲಿ ಎಲ್ಲ ಉತ್ಪಾದನಾ ಕೆಲಸ ಸ್ಥಗಿತಗೊಳಿಸಬೇಕು” ಎಂದು ನಿರ್ದೇಶನ ನೀಡಿದ್ದಾರೆ.
ಕಾರ್ಮಿಕ ಸಚಿವ ಸಂತೋಷ ಲಾಡ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಮೃತ ಕಾರ್ಮಿಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ದೊರಕಿಸಲು ಕಾರ್ಮಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಆರೋಗ್ಯ ಮತ್ತು ಕಾರ್ಖಾನೆಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿದೆ’ ಎಂದು ಕಾರ್ಖಾನೆಗಳು, ಬಾಯ್ದರುಗಳು, ಸುರಕ್ಷತಾ ಮತ್ತು ಸ್ವಾಸ್ಥ್ಯ ಇಲಾಖೆಯ ಹುಬ್ಬಳ್ಳಿ ವಲಯದ ಕಾರ್ಖಾನೆಗಳ ಜಂಟಿ ನಿರ್ದೇಶಕ ರವೀಂದ್ರನಾಥ ಎನ್ ರಾಠೋಡ್ ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನ ಚಿಕ್ಕಬಗನಾಳ ಗ್ರಾಮದ ಯಮನೂರ ಬೆಣಕಲ್, ವಿರೂಪಾಕ್ಷಿ ಮೋರನಾಳ, ಹಾಲಪ್ಪ ಈಳಿಗೇರ, ಕನರಾಯ ಬಗನಾಳ, ಜಾರ್ಖಂಡ್‌ನ ರೋಯಾ ಬಗುಂಗಾ, ಆಂಧ್ರದ ಶಿವಕುಮಾರ ಕುಲಶ, ಮಹಾರಾಷ್ಟ್ರದ ಕಮಲೇಶಸಿಂಗ್, ಗಿಣಿಗೇರಿಯ ಸುರೇಶ ಚೌವಾಣ್, ಹಗರಿಬೊಮ್ಮನಹಳ್ಳಿಯ ನಾಗರಾಜ, ಗಂಗಾವತಿ ತಾಲೂಕಿನ ದಾಸನಾಳದ ಮಹಾಂತೇಶ ಅಸ್ವಸ್ಥಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ತುಮಕೂರು | ಅವಶ್ಯಕತೆ ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬೇಡಿ : ಜಿಲ್ಲಾಧಿಕಾರಿ ಮನವಿ
ಕಾರ್ಖಾನೆ ನಿರ್ವಹಣೆ ಮಾಡುವವರ ನಿರ್ಲಕ್ಷ್ಯದಿಂದಲೇ ದುರ್ಘಟನೆ ಸಂಭವಿಸಿದೆಯೆಂದು ಮಂಗಳವಾರ ಮೃತಪಟ್ಟ ಮಾರುತಿ ಕೊರಗಲ್ ಅವರ ಸಹೋದರ ವೀರೇಶ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಲಾಗಿದೆ.
ಕಂಪೆನಿಯ ಸೈಟ್ ವ್ಯವಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕ, ಆಪರೇಷನ್ ಮತ್ತು ನಿರ್ವಹಣಾ ಮಾಲೀಕರು, ಕಾರ್ಖಾನೆ ಮಾಲೀಕರು ಹಾಗೂ ಹೊಸಪೇಟೆ ಇಸ್ಪಾತ್ ಕಂಪನಿಯ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ಅವರ ಹೆಸರುಗಳನ್ನು ಉಲ್ಲೇಖಿಸಿಲ್ಲ.