ಜನವರಿ 30 ರಾಷ್ಟ್ರಪಿತ ಮಹಾತ್ಮ ಗಾಂಧಿ ಹುತಾತ್ಮ ದಿನ. ದೇಶಾದ್ಯಂತ ಗಾಂಧಿ ಹುತಾತ್ಮ ದಿನವನ್ನು ಅಚರಿಸಲಾಗುತ್ತಿರುವ ಸಮಯದಲ್ಲೇ, ಹಿಂದು ಮಹಾಸಭಾ ಗಾಂಧಿ ಕೊಲೆಯ ಸಂಭ್ರಮಾಚರಣೆ ಮಾಡಿದೆ. ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ ಜೈಕಾರ ಕೂಗಿ, ಸಂಭ್ರಮಿಸಿದೆ.
ಉತ್ತರ ಪ್ರದೇಶದ ಮೀರತ್‌ನಲ್ಲಿನ ‘ಅಮರ ಹುತಾತ್ಮ ನಾಥೂರಾಮ್ ಗೋಡ್ಸೆ ನಾನಾ ಅಪ್ಟೆ ಧಾಮ’ದಲ್ಲಿ ಹಿಂದು ಮಹಾಸಭಾದ ಮುಖಂಡರು ಮತ್ತು ಕಾರ್ಯಕರ್ತರು ಗಾಂಧಿ ಅವರ ಕೊಲೆಯನ್ನು ಸಂಭ್ರಮಿಸಿದ್ದಾರೆ. ಗಾಂಧಿ ಅವರನ್ನು ಹತ್ಯೆಗೈದ ಹಂತ ಗೋಡ್ಸೆಯನ್ನು ಹೊಗಳಿ, ಜೈಕಾರ ಕೂಗಿದ್ದಾರೆ.
ಹಿಂದು ಮಹಾಸಭಾದ ನಾಯಕ, ನಾನಾ ಅಪ್ಟೆ ಧಾಮದ ಸಂಸ್ಥಾಪಕ ಪಂಡಿತ್ ಅಶೋಕ್ ಶರ್ಮಾ ನೇತೃತ್ವದಲ್ಲಿ ಗಾಂಧಿ ಹಂತಕ ಗೋಡ್ಸೆಯನ್ನು ಸಂಭ್ರಮಿಸಿದ ಕಾರ್ಯಕ್ರಮ ನಡೆದಿದೆ.
ಗಾಂಧಿ ಹತ್ಯೆಯಲ್ಲಿ ಭಾಗಿಯಾದ ಹಂತಕರಾದ ನಾಥೂರಾಮ ಗೋಡ್ಸೆ ಮತ್ತು ನಾರಾಯಣ ನಾನಾ ಅಪ್ಟೆ ಅವರ ಕುಟುಂಬವನ್ನು ಸನ್ಮಾನಿಸುತ್ತೇವೆಂದು ಕಾರ್ಯಕ್ರಮದಲ್ಲಿ ಘೋಷಿಸಿದ್ದಾರೆ.
“ಭಾರತದಿಂದ ಗಾಂಧಿವಾದವನ್ನು ತೊಡೆದುಹಾಕಬೇಕು. ಗಾಂಧಿಯ ಆತ್ಮವನ್ನು ಇಲ್ಲವಾಗಿಸಬೇಕು. ಗಾಂಧಿ ಅವರನ್ನು ‘ರಾಷ್ಟ್ರಪಿತ’ ಎನ್ನಬಾರದು. ಆ ಬಿರುದನ್ನು ತೆಗೆಯಬೇಕು” ಎಂದು ಒತ್ತಾಯಿಸಿದ್ದಾರೆ.
1948ರ ಜನವರಿ 30ರಂದು ಬಿರ್ಲಾ ಮಂದಿರದ ಬಳಿ ಗಾಂಧಿ ಅವರನ್ನು ಹಿಂದು ಮಹಾಸಭಾದ ಸದಸ್ಯನಾಗಿದ್ದ ಗೋಡ್ಸೆ ಗುಂಡಿಕ್ಕಿ ಹತ್ಯೆಗೈದಿದ್ದ. ಗೋಡ್ಸೆಯನ್ನು ಬಂಧಿಸಿ, 1949ರಲ್ಲಿ ಅಂಬಾಲ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.