ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟವರ ಪೈಕಿ ಇಬ್ಬರ ಮೃತದೇಹ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತಲುಪಿದ್ದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಉಳಿದ ಇಬ್ಬರ ಮೃತದೇಹ ಗೋವಾ ವಿಮಾನ ನಿಲ್ದಾಣಕ್ಕೆ ತಲುಪಿದ್ದು ರಸ್ತೆ ಮಾರ್ಗವಾಗಿ ರಾತ್ರಿ 12.00 ಗಂಟೆಯೊಳಗಾಗಿ ಬೆಳಗಾವಿ ತಲುಪಲಿದೆ.
ರಾಜ್ಯದ ಅರುಣಾ ಖೋರ್ಪಡ್ (61) ಹಾಗೂ ಮಹಾದೇವಿ ಹಣಮಂತ ಬಾವಣೂರ (48) ಅವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪ್ರಯಾಗ್‌ರಾಜ್ ಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಬಲಿಯಾದ ಕರ್ನಾಟಕದ ನಾಲ್ಕು ಜನರ ಮೃತದೇಹವನ್ನು ಗುರುವಾರ ವಿಮಾನದ ಮೂಲಕ ಬೆಳಗಾವಿಗೆ ರವಾನಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇಂದು (ಜ.30) ಬೆಳಿಗ್ಗೆ ತಿಳಿಸಿದ್ದರು.
ಕುಂಭಮೇಳ ದುರಂತದಲ್ಲಿ ಬೆಳಗಾವಿ ತಾಲೂಕು ಯಲ್ಲೂರು ರಸ್ತೆ ವಡಗಾಂವ್ ಭಾಗದ ಮೇಘಾ ದೀಪಕ್ ಹತ್ತರವರ್ (24), ಜ್ಯೋತಿ ದೀಪಕ್ ಹತ್ತರವರ್ (44) ಹಾಗೂ ಬೆಳಗಾವಿ ತಾಲೂಕಿನ ಶೆಟ್ಟಿಗಲ್ಲಿ ಭಾಗದ ಅರುಣಾ ಖೋರ್ಪಡೆ (61), ಮಹಾದೇವಿ ಹಣಮಂತ ಬಾವಣೂರ (48) ಮೃತಪಟ್ಟಿದ್ದಾರೆ.

“ಮೃತರ ಕುಟುಂಬದವರಿಗೆ ಸರ್ಕಾರದ ವತಿಯಿಂತ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಮೃತರ ದೇಹವನ್ನು ದೆಹಲಿಯಿಂದ ಬೆಳಗಾವಿಗೆ ರವಾನಿಸಲು ಉಂಟಾಗುವ ಎಲ್ಲಾ ಖರ್ಚನ್ನು ಈಗಾಗಲೇ ಸರ್ಕಾರವೇ ಭರಿಸಿದೆ. ಸೂಕ್ತ ಹರಿಹಾರವನ್ನೂ ನೀಡಲಿದೆ. ಆದರೆ, ಪ್ರಾಣನಷ್ಟಕ್ಕೆ ಯಾವ ಪರಿಹಾರವೂ ಸಮಾನವಲ್ಲ. ಕುಟುಂಬಸ್ಥರ ಜೊತೆ ಸರ್ಕಾರ ಸಹಾನುಭೂತಿ ಇದೆ” ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
“ಈಗಾಗಲೇ ನಮ್ಮ ಅಧಿಕಾರಿಗಳು ದೆಹಲಿಯಲ್ಲಿದ್ದು ದುರಂತದಲ್ಲಿ ಸಿಲುಕಿದ ಕರ್ನಾಟಕದ ಪ್ರವಾಸಿಗರಿಗೆ ಅಗತ್ಯ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿಕೊಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ ಇಲಾಖೆಯ ಸಹಾಯವಾಣಿಗೂ ಕರೆಗಳು ಬಂದಿವೆ. ಆ ದೂರವಾಣಿ ಕರೆ ಆಧಾರದಲ್ಲಿ ಕುಂಭಮೇಳಕ್ಕೆ ಹೋದವರನ್ನು ನಾವು ಸಂಪರ್ಕಿಸಿದ್ದು, ಬಹುತೇಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇಶಾ ಫೌಂಡೇಶನ್ ಕಡೆಯಿಂದ ಕುಂಭಮೇಳಕ್ಕೆ ತೆರಳಿದವರ ಪೈಕಿ ಓರ್ವ ವ್ಯಕ್ತಿ ಫೋನ್ ರಿಂಗ್ ಆಗುತ್ತಿದೆ, ಆದರೆ, ಆತ ಕರೆಯನ್ನು ಸ್ವೀಕರಿಸುತ್ತಿಲ್ಲ. ಹೀಗಾಗಿ ಆತನನ್ನು ಹುಡುಕುವ ಕೆಲಸವೂ ಮುಂದುವರಿದಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಹಾ ಕುಂಭಮೇಳವೆಂಬ ಸನಾತನ ಗರ್ವ, ಕಾಲ್ತುಳಿತದ ಪರ್ವ
“ಕರ್ನಾಟಕದ ಎಷ್ಟು ಮಂತಿ ಕುಂಭಮೇಳಕ್ಕೆ ತೆರಳಿದ್ದಾರೆ? ಈ ಪೈಕಿ ದುರಂತದಲ್ಲಿ ಸಿಲುಕಿದವರೆಷ್ಟು? ಗಾಯಾಳುಗಳೆಷ್ಟು? ಮೃತರ ಸಂಖ್ಯೆ ಎಷ್ಟು? ಎಂಬ ಕುರಿತು ಉತ್ತರಪ್ರದೇಶ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ಕರ್ನಾಟಕದ ಐಎಎಸ್ ಅಧಿಕಾರಿ ಹರ್ಷಲ್ ಬೋಯಲ್ ಅವರೇ ಸ್ವತಃ ಕುಂಭಮೇಳದ ಸ್ಥಳಕ್ಕೆ ತೆರಳಿದ್ದು, ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡಿ ನಮ್ಮ ರಾಜ್ಯದ ಜನ ಅಲ್ಲಿ ಗಾಯಾಳುಗಳಾಗಿ ಇದ್ದಾರಾ? ಎಂದು ಪರಿಶೀಲಿಸುತ್ತಿದ್ದಾರೆ” ಎಂದು ಸಚಿವರು ತಿಳಿಸಿದ್ದಾರೆ.
ಪ್ರಯಾಗರಾಜ್‌ನಲ್ಲಿ ಮೃತಪಟ್ಟ ನಾಲ್ವರ ಶವಗಳನ್ನೂ ಬೆಳಗಾವಿಗೆ ತಂದು ಬಿಮ್ಸ್ ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಜಿಲ್ಲಾಡಳಿತ ವತಿಯಿಂದ ಶವ ಪಡೆದು, ಗೌರವ ಸಲ್ಲಿಸಲಾಗುವುದು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಗಳಿಗೆ ಹಸ್ತಾಂತರ ಮಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಧ್ಯಮಗಳಿಗೆ ಹೇಳಿದ್ದಾರೆ.