ಕೊಪ್ಪಳ ತಾಲೂಕಿನ ಗಿಣಿಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತೀಕರಿಸಲು ನಾಗರಿಕ ಹೋರಾಟ ಸಮಿತಿ ಆಗ್ರಹಿಸಿದೆ. ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಮತ್ತು ನಾಗರಿಕ ಹೋರಾಟ ಸಮಿತಿಯು ಫೆ. 3ರಂದು ಗಂಗಾವತಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಿದೆ.
ಇಂದು ನಡೆದ ಪ್ರಚಾರಾಂದೋಲನದಲ್ಲಿ ಪಕ್ಷದ ಜಿಲ್ಲಾ ನಾಯಕ ಶರಣು ಗಡ್ಡಿ ಮಾತನಾಡಿ, “ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಗಿಣಿಗೇರಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಅಗತ್ಯತೆ ಬಹಳ ಇದೆ. ಆದರೆ ಈಗಿರುವ ಆಸ್ಪತ್ರೆ ಅಗತ್ಯ ಇರುವಷ್ಟು ವೈದ್ಯರನ್ನು ಹೊಂದಿಲ್ಲ. ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ದೊಡ್ಡ ಮಟ್ಟದಲ್ಲಿ ವಲಸಿಗರು ಊರಲ್ಲಿ ಇರುವುದರಿಂದ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. ಕಾರ್ಖಾನೆಗಳಿಂದ ಬರುವ ಧೂಳು ವಿಷಕಾರಿ ಅನಿಲದಿಂದ ಜನರು ನಿರಂತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಆತಂಕಕ್ಕೀಡುಮಾಡಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಸಾಮಾನ್ಯ ಕಾಯಿಲೆಗೂ ಕೂಡ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಜನ ದುಡ್ಡು ಕಳೆದುಕೊಳ್ಳುತ್ತಿದ್ದಾರೆ. ವಿಷಕಾರಿ ಅನಿಲದಿಂದ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗ್ರಾಮಕ್ಕೆ ಕಾರ್ಖಾನೆಗಳಿಂದ ಸಿಎಸ್ಆರ್ ನಿಧಿಯನ್ನು ಸರಿಯಾಗಿ ಬಳಕೆ ಮಾಡದೆ ಜನಗಳ ಆರೋಗ್ಯವನ್ನು ನಿರ್ಲಕ್ಷಿಸಲಾಗಿದೆ. ಕೂಡಲೇ ಆರೋಗ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಸುತ್ತಮುತ್ತಲ ಹಳ್ಳಿಗಳಿಗೆ ಭೇಟಿ ನೀಡಿ ಜನರ ಆರೋಗ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಸಮಿತಿ ಒತ್ತಾಯಿಸಿತು.
ಈ ಸುದ್ದಿ ಓದಿದ್ದೀರಾ?: ಕೊಪ್ಪಳ | ಮಾನಸಿಕ ದುರ್ಬಲರನ್ನು ಶೋಷಿಸುವುದೇ ಅಸಮಾನತೆಗೆ ಮೂಲ ಕಾರಣ: ನ್ಯಾ. ಮಂಜುನಾಥ ಬಾಗೇಪಲ್ಲಿ
ಪ್ರಚಾರಾಂದೋಲನದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಈ ವೇಳೆ ಗಿಣಿಗೇರಾ ನಾಗರಿಕ ಹೋರಾಟ ಸಮಿತಿಯ ಮುಖಂಡ ಮಂಗಳೇಶ ರಾಥೋಡ್, ಮೌನೇಶ್ ಹಲಗೇರಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡ ಶರಣು ಪಾಟೀಲ್, ಶಾರದಾ, ಮುಂತಾದ ಗ್ರಾಮಸ್ಥರು ಇದ್ದರು.
