ಮಹಿಳೆಯರ ಕೊರಳಿಗೆ ನೇಣು ಹಗ್ಗವಾಗಿ ಪರಿಣಮಿಸುತ್ತಿರುವ ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯ ಖಂಡಿಸಿ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಇಂದು ದಲಿತ ಸಂಘರ್ಷ ಸಮಿತಿ ಹಾಗೂ ಜಿಲ್ಲಾ ಮಹಿಳಾ ಒಕ್ಕೂಟಗಳು ಪ್ರತಿಭಟನೆ ನಡೆಸಿದವು.
“ರಾಜ್ಯಾದ್ಯಂತ ಮೂಲೆ ಮೂಲೆಗಳಲ್ಲಿ ಮೈಕ್ರೋ ಫೈನಾನ್ಸ್‌ಗಳ ದೌರ್ಜನ್ಯ ಮಿತಿಮೀರಿದ್ದು, ಹುಣಸೂರು ತಾಲೂಕಿನಲ್ಲಿ ಸಹ ಆತ್ಮಹತ್ಯೆ ಮಾಡಿಕೊಳ್ಳುವುದು, ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಕುಟುಂಬಗಳು ಸಾಲ ಕಟ್ಟಿದ್ದರೂ ಸಹ ಸುಖಾಸುಮ್ಮನೆ ನೋಟಿಸ್ ನೀಡುವುದು, ಕಟ್ಟಿದ ಹಣವೆಲ್ಲ ಬಡ್ಡಿಗೆ ಸರಿಯಾಗಿದೆ ಎನ್ನುವುದು, ಸಾಲ ಮರುಪಾವತಿ ಆಗಿಲ್ಲ ಎಂದು ದುಪ್ಪಟ್ಟು ಬಾಕಿ ತೋರಿಸುವ ಕೆಲಸ ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಕೇವಲ ಆಧಾರ್ ಪಡೆದು ಐದಾರು ಫೈನಾನ್ಸ್‌ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ನೀಡುವುದು, ಬಳಿಕ ಸಾಲ ಮರುಪಾವತಿ ಸಮಯದಲ್ಲಿ ಮನೆ ಮುಂದೆ ಸಮಯವಲ್ಲದ ಸಮಯಗಳಲ್ಲಿ ಬರುವುದು, ಪೀಡಿಸುವುದು, ಅವಮಾನ ಮಾಡುವಂತಹ ಹೀನ ಕೃತ್ಯಗಳನ್ನು ಸಾಲ ವಸೂಲಿಗಾರರಿಂದ ಮಾಡಿಸುವುದು.. ಇಂತಹ ಘಟನೆಗಳು ಹೆಚ್ಚಾಗಿದ್ದು, ಮಹಿಳೆಯರು ಮಾನಕ್ಕೆ ಅಂಜಿ ಸಾವಿಗೆ ಶರಣಾಗುವಂತಾಗಿದೆ” ಎಂದು ಪ್ರತಿಭಟನಾನಿರತ ಮಹಿಳೆಯರು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಮಹದೇವಮ್ಮ ಕಟ್ಟೆಮಳಲವಾಡಿ ಅವರ ನೇತೃತ್ವದಲ್ಲಿ ನೂರಾರು ಮಹಿಳೆಯರು ಸೇರಿ ಮೈಕ್ರೋ ಫೈನಾನ್ಸ್ ನಡೆಗೆ ದಿಕ್ಕಾರ ಕೂಗಿದರು. ಹುಣಸೂರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ನೀಡಿ ತಾಲೂಕಿನಾದ್ಯಂತ ಫೈನಾನ್ಸ್ ಪ್ರತಿನಿಧಿಗಳು, ಪೊಲೀಸ್ ಇಲಾಖೆ, ಸಂಘಟನೆಗಳ ಮುಖಂಡರನ್ನು ಕರೆದು ಸಭೆ ನಡೆಸಿ, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?: ಮೈಸೂರು ಜಿಲ್ಲೆಯ ಕ್ಷಯ ಮುಕ್ತ ಅಭಿಯಾನಕ್ಕೆ ಜಿಲ್ಲಾ ಪಂಚಾಯತ್ ಚಾಲನೆ
ಪ್ರತಿಭಟನೆಯಲ್ಲಿ ಪ್ರೇಮ, ಲತಾ, ಕಮಲಾಕ್ಷಿ, ಪುಟ್ಟಮ್ಮ, ಸುಧಾ, ವಿಶಾಲಮ್ಮ, ವಿಶಾಲಕ್ಷಮ್ಮ, ವೆಂಕಟಲಕ್ಷ್ಮಮ್ಮ, ವೀಣಾ, ಸುಶೀಲಾ, ಸರಿತಾ, ಭಾಗ್ಯ, ಎಂ ಆರ್ ಹೊಸಳ್ಳಿ ಪ್ರಕಾಶ್, ರತ್ನಾಪುರಿ ಡೇವಿಡ್, ಕೊಳಗಟ್ಟ ಕೃಷ್ಣ, ಕಾಂತರಾಜು, ಜೆ ಮಹಾದೇವು, ರಾಜು ಚಿಕ್ಕ ಹುಣಸೂರು, ವೇಣು ಕುಮಾರ್, ಹನುಮಯ್ಯ ಸೇರಿದಂತೆ ನೂರಾರು ಮಹಿಳಾ ಕಾರ್ಯಕರ್ತರು ಭಾಗಿಯಾಗಿದ್ದರು.
