ಸೇವಾ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು 12 ದಿನಗಳಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಮುಂದುವರೆದಿದೆ.
ʼಕಾಯಂ ನೌಕರರ ಸ್ಥಳದಲ್ಲಿ ಮಾತ್ರ ಕಾಯಂ ನೌಕರರ ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆ ಕಡ್ಡಾಯವಾಗಿ ಕೊಡಬೇಕು. ಕಾಯಂ ನೌಕರರು 15 ದಿನಕ್ಕಿಂತ ಹೆಚ್ಚು ರಜೆ ಹಾಕಿದಾಗ ಆ ಸ್ಥಳದಲ್ಲಿ ತಾತ್ಕಾಲಿಕವಾಗಿ ಹೊರಗುತ್ತಿಗೆ ನೌಕರರನ್ನು ನೇಮಿಸಬೇಕು. ಕನಿಷ್ಠ ವೇತನ ₹31,000 ನಿಗದಿಪಡಿಸಬೇಕು. ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು. 10 ವರ್ಷ ಮೆಲ್ಪಟ್ಟು ಸೇವೆ ಸಲ್ಲಿಸಿದ ನೌಕರರಿಗೆ ಕ್ಷೇಮಾಭಿವೃದ್ಧಿ ಯೋಜನೆಯಲ್ಲಿ ನೇಮಕಾತಿ ಮಾಡಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ʼಬೀದರ ಜಿಲ್ಲೆಯಲ್ಲಿ ಸೊಸೈಟಿಯ ಮಾದರಿಯಲ್ಲಿ ವೇತನ ನೀಡುವಂತೆ ನೌಕರರು ಪ್ರಬಲವಾದ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದರು. ನೌಕರರಿಗೆ ಪಾವತಿಸಬೇಕಾದ ಬಾಕಿ ವೇತನವನ್ನು ಕೂಡಲೇ ಪಾವತಿ ಮಾಡಬೇಕು. ಸಿಬ್ಬಂದಿ ಕಡಿತ ಮಾಡಿದ ಆದೇಶ ವಾಪಾಸ ಪಡೆಯಬೇಕು. ಹಿಂದಿನಂತೆ 100 ವಿದ್ಯಾರ್ಥಿಗಳಿಗೆ 5 ಜನ ಅಡಿಗೆ ಸಿಬ್ಬಂದಿ ಇರಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯಗಳಿಗೆ ರಾತ್ರಿ ಕಾವಲುಗಾರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.
ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, ʼ ಹಾಸ್ಟೆಲ್ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದಿದ್ದರು. ಆದರೆ ಇಲ್ಲಿಯವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ವಾರದದೊಳಗೆ ಬೇಡಿಕೆ ಈಡೇರಿಸದಿದ್ದರೆ ಫೆ.5 ರಿಂದ ಸಂಘದ ರಾಜ್ಯಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ನೇತ್ರತ್ವದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ ಲೋಕಸಭಾ ಕ್ಷೇತ್ರಕ್ಕೆ 50,380 ಮನೆ ಮಂಜೂರು : ಸಂಸದ ಸಾಗರ್ ಖಂಡ್ರೆ
ಸಂಘದ ಪ್ರಮುಖರಾದ ಪರಶುರಾಮ ಹಡಲಗಿ, ನಾಗರತ್ನ ಮದನಕರ್, ಕಾಶಿನಾಥ ಬಂಡಿ, ಮೇಘರಾಜ ಕಠಾರೆ, ಜ್ಯೋತಿ ದೊಡ್ಡಮನಿ, ಅಲ್ಲಾ ಪಟೇಲ್, ಸಂಜುಕುಮಾರ ಮೇತ್ರಿ, ಕಲ್ಯಾಣಿ ಎನ್.ಪೂಜಾರಿ, ರೇಣುಕಾ ಸಂಗೋಗಿ ಹಾಗೂ ಮತ್ತಿತರಿದ್ದರು.