ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್‌ನಲ್ಲಿ ಕೇಂದ್ರ ಬಜೆಟ್ 2025-26ಅನ್ನು ಮಂಡಿಸುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ, ರೈತರಿಗಾಗಿ ‘ಧನ್ ಧಾನ್ಯ ಕೃಷಿ’ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಯೋಜನೆಯು 1 ಕೋಟಿಗೂ ಹೆಚ್ಚು ರೈತರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
‘ಧನ್ ಧಾನ್ಯ ಕೃಷಿ ಯೋಜನೆ’ಯು ಕಡಿಮೆ ಇಳುವರಿ ಹೊಂದಿರುವ, ಆಧುನಿಕ ಬೆಳೆ ಅಳವಡಿಕೆಯಲ್ಲಿ ಹಿಂದುಳಿದಿರುವ ಹಾಗೂ ಸರಾಸರಿಗಿಂತ ಕಡಿಮೆ ಸಾಲ ಸೌಲಭ್ಯ ಪಡೆದಿರುವ 100 ಜಿಲ್ಲೆಗಳನ್ನು ಒಳಗೊಳ್ಳುತ್ತದೆ ಎಂದು ಹೇಳಿದ್ದಾರೆ.
“ಕೇಂದ್ರ ಸರ್ಕಾರವು ರಾಜ್ಯಗಳ ಸಹಭಾಗಿತ್ವದಲ್ಲಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಜಾರಿಗೊಳಿಸಲಿದೆ. ಅಸ್ತಿತ್ವದಲ್ಲಿರುವ ಯೋಜನೆಗಳು ಮತ್ತು ವಿಶೇಷ ಕ್ರಮಗಳ ಮೂಲಕ ರೈತರಿಗೆ ಅಗತ್ಯ ನೆರವು ನೀಡುತ್ತದೆ. ಕೃಷಿ ಉತ್ಪನ್ನಗಳ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ತರಕಾರಿ, ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ಲಾಭದಾಯಕ ಬೆಲೆಗಳನ್ನು ಒದಗಿಸುವ ಸಮಗ್ರ ಕಾರ್ಯಕ್ರಮವನ್ನು ಯೋಜನೆಯಡಿ ಪ್ರಾರಂಭಿಸಲಾಗುವುದು” ಎಂದು ಅವರು ಹೇಳಿದ್ದಾರೆ.