ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳ ದಿನವಾಗಿದೆ. ರಾಜ್ಯದ ಯಾವ ಬೇಡಿಕೆಯೂ ಈಡೇರಿಲ್ಲ. ನಮ್ಮ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಕರ್ನಾಟಕದವರು ಕಡಲೆ ಬೀಜ ತಿನ್ನೋಕೆ ಇರೋದಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಟೀಕಿಸಿದರು.
ಕೇಂದ್ರ ಬಜೆಟ್ ಬಗ್ಗೆ ವಿಧಾನಸೌಧದಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿ, “ನಮ್ಮ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆ ಕೊಟ್ಟಿದ್ದಾರೆ. ಕರ್ನಾಟಕಕ್ಕೆ ಬರೀ ಚೊಂಬು ಸಿಕ್ಕಿದೆ. ಇದು ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ದ್ರೋಹ” ಎಂದು ಹರಿಹಾಯ್ದರು.
“11,495 ಕೋಟಿ ಫೈನಾನ್ಸ್ ಕಮಿಷನ್ ಕೊಡಲು ಹೇಳಿತ್ತು. ಬರಬೇಕಾದ ಅನುದಾನದ ಬಗ್ಗೆ ಚಕಾರ ಎತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಇಂದು ನೈಯಾ ಪೈಸಾ ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ್ಕೆ ಏನೂ ನೀಡಿಲ್ಲ. ಬೆಂಗಳೂರು ದೇಶಕ್ಕೆ ಉದ್ಯೋಗ ಕೊಡ್ತಿದೆ. ರಪ್ತಿನ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ಕೊಡ್ತಿದೆ. ಆದ್ರೂ ಬಜೆಟಲ್ಲಿ ಬೆಂಗಳೂರಿಗೆ ಏನೂ ಇಲ್ಲ” ಎಂದರು.
“ಯುಪಿ, ಬಿಹಾರ ಮಾತ್ರ ಕೇಂದ್ರಕ್ಕೆ ಕಾಣುತ್ತಿದೆ. ತೆರಿಗೆ ಕಟ್ಟಿದ ಕನ್ನಡಿಗರು ಮೋದಿಗೆ ಕಂಡಿಲ್ಲ. ನಮ್ಮ ರಾಜ್ಯ ಕೇವಲ ದುಡಿಯವ ಆಳಿನ ರೀತಿ ಕಾಣುತ್ತಿದೆ. ಸರ್ಕಾರದ ಪರವಾಗಿ ಕೇಂದ್ರ ಬಜೆಟ್ ಅನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ” ಎಂದು ಹೇಳಿದರು.