ಯುವತಿಯರು, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮತ್ತು ಚಿತ್ರೀಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪ್ರಕರಣಕ್ಕೆ ಎಚ್ಚೆತ್ತ ಚನ್ನಗಿರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ನಗರದ ಮೆಡಿಕಲ್ ಸ್ಟೋರ್ ಮಾಲೀಕನೊಬ್ಬ ತನ್ನ ಮೆಡಿಕಲ್ ಶಾಪಿಗೆ ಬರುವ ಕಾಲೇಜು ಯುವತಿಯರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಜತೆಗೆ ಲೈಂಗಿಕ ಕ್ರಿಯೆ ನಡೆಸಿರುವ ಆಘಾತಕಾರಿ ವಿಚಾರವೊಂದು ಬೆಳಕಿಗೆಬಂದ ಹಿನ್ನೆಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ`ದೇವರಾಜ್ ಅರಸ್ ಲೇಔಟ್‌ನ ಅಹ್ಮದ್ ಬಂಧಿತ ಆರೋಪಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡಿದ ಹಿನ್ನೆಲೆಯಲ್ಲಿ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ವಶಪಡಿಸಿಕೊಂಡಿದ್ದು, 30ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.
30ಕ್ಕೂ ಅಧಿಕ ಮಂದಿ ಮಹಿಳೆಯರು, ಕಾಲೇಜು ಯುವತಿಯರು ಹಾಗೂ ವಿದ್ಯಾರ್ಥಿನಿಯರ ಜತೆಗೆ ಲೈಂಗಿಕ ಕ್ರಿಯೆ ನಡೆಸಿ ವಿಡಿಯೊ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇವುಗಳಲ್ಲಿ ಕೆಲವು ಹಳೆಯ ಮತ್ತು ಇತ್ತೀಚಿನ ವಿಡಿಯೊಗಳು ಇರುವುದಾಗಿ ಮಾಹಿತಿ ಸಿಕ್ಕಿದೆ. ಈಗ ಒಂದೆರಡು ವಿಡಿಯೊಗಳು ವೈರಲ್ ಆಗಿದ್ದು, ಇವು ಪೊಲೀಸರಿಗೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯವನ್ನೇ ಕಂಗೆಡಿಸಿ ಕುಖ್ಯಾತಿ ಸೃಷ್ಟಿಸಿದ್ದ ಹಾಸನದ ಪ್ರಜ್ವಲ್ ರೇವಣ್ಣ ಪ್ರಕರಣದ ನಂತರ ಅದೇ ರೀತಿ ಹೋಲುವ ಪ್ರಕರಣ ದಾಖಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಎಲ್ಲರನ್ನೂ ಅನುಮಾನದ ದೃಷ್ಟಿಯಿಂದ ನೋಡುವ ಸ್ಥಿತಿ ನಿರ್ಮಾಣವಾಗಿದೆ. 56 ವಯಸ್ಸಿನ ಅಹ್ಮದ್ ವಿಕೃತ ಕಾಮುಕನಾಗಿದ್ದು, ಶಾಲಾ ಮಕ್ಕಳು, ಕಾಲೇಜು ಯುವತಿಯರು, ಮಹಿಳೆಯರ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎನ್ನಲಾಗಿದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ 30ಕ್ಕೂ ಅಧಿಕ ವಿಡಿಯೋಗಳಿವೆ ಎಂದು ತಿಳಿದುಬಂದಿದೆ.
ಈತ ಎರಡು ವಿವಾಹಗಳಾಗಿದ್ದು, ಮೊದಲ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದನೆಂದು ಮೂಲಗಳು ತಿಳಿಸಿದ್ದು, ಕೌಟುಂಬಿಕ, ಆಸ್ತಿ ಕಲಹದ ಹಿನ್ನೆಲೆಯಲ್ಲಿ ಸಂಬಂಧಿಕರೇ ವೀಡಿಯೋ ಹರಿಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿನ ಲೈಂಗಿಕ ವಿಡಿಯೊವೊಂದನ್ನು ಈತನೇ ಸ್ನೇಹಿತರಿಗೆ ಕಳುಹಿಸಿದ್ದ ಎಂದೂ ಹೇಳಲಾಗುತ್ತಿದೆ.
ದಾವಣಗೆರೆಯಿಂದ ಪ್ರತಿನಿತ್ಯ ಓಡಾಡುತ್ತಿದ್ದ ಈತ ಚನ್ನಗಿರಿ ಬಸ್ ನಿಲ್ದಾಣ ಸಮೀಪ ಕಳೆದ ಕೆಲ ವರ್ಷಗಳಿಂದ ಮೆಡಿಕಲ್ ಶಾಪ್ ನಡೆಸುತ್ತಿದ್ದ. ಶಾಪ್‌ಗೆ ಬರುವ ವಿದ್ಯಾರ್ಥಿನಿಯರು, ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚನ್ನಗಿರಿಯಲ್ಲಿ ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿ ಜತೆಗಿರುವ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ. ಈ ವಿಡಿಯೊವನ್ನು ಆರೋಪಿ ಅಹ್ಮದ್ ಸ್ನೇಹಿತರಿಗೆ ಕಳುಹಿಸಿದ್ದ ಎನ್ನಲಾಗಿದೆ. ಈ ವಿಡಿಯೊ ಚನ್ನಗಿರಿ ತಾಲೂಕಿನ ಕೆಲವೆಡೆ ವೈರಲ್ ಆಗಿ, ಯುವತಿಯರು, ಮಹಿಳೆಯರು ತಲೆತಗ್ಗಿಸುವಂತಾಗಿತ್ತು. ಪ್ರಕರಣದ ಗಂಭೀರತೆ ಅರಿತ ಎಸ್‌ಪಿ ಉಮಾ ಪ್ರಶಾಂತ್ ಅವರು ಕೂಡಲೇ ಎಚ್ಚೆತ್ತು ಚನ್ನಗಿರಿ ಮತ್ತು ಗಾಂಧಿನಗರ ಪೊಲೀಸರು, ಸಿಇಎನ್ ಪೊಲೀಸರಿಗೆ ಸೂಚನೆ ನೀಡಿ ಆರೋಪಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಕೋಟೆಕಾರು ಬ್ಯಾಂಕ್ ದರೋಡೆ: ಮತ್ತೊಬ್ಬ ಆರೋಪಿಯ ಕಾಲಿಗೆ ಗುಂಡೇಟು
ಈ ಮಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾಧ್ಯಮಗಳ ಜೊತೆ ಮಾತನಾಡಿ, “ಯುವತಿಯರು, ಮಹಿಳೆಯರ ಗೌರವ ಮತ್ತು ಘನತೆಗೆ ಧಕ್ಕೆ ತರುವಂಥ ವಿಡಿಯೊಗಳನ್ನು ಮಾಡಬಾರದು ಮತ್ತು ಅವುಗಳನ್ನು ಹರಿಬಿಡಬಾರದು. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು. ಈ ರೀತಿ ಹಂಚಿಕೊಂಡವರೂ ಕೂಡ ಅಪರಾಧಿಗಳಾಗುತ್ತಾರೆ. ನಿಮ್ಮಲ್ಲಿ ವಿಡಿಯೊಗಳು ಬಂದರೆ ಪೊಲೀಸರಿಗೆ ಮಾಹಿತಿ ನೀಡಿ ತಿಳಿಸಿ. ಪೊಲೀಸರು ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವುದು, ಸ್ಟೋರ್ ಮಾಡಿಟ್ಟುಕೊಳ್ಳುವುದು, ವಿಡಿಯೊ ಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದ್ದಾರೆ.