ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ(ವಿಮ್ಸ್)ದಲ್ಲಿ ಶನಿವಾರ ಬೆಳಿಗ್ಗೆ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವು ಸಂಭವಿಸಲು ಕಾರಣವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ(21) ಮೃತ ಬಾಣಂತಿ.
“ಪತ್ನಿ ಮಹಾದೇವಿಗೆ ಜನವರಿ 25ರಂದು ಸಿಸೇರಿಯನ್ ಮೂಲಕ ಹೆರಿಗೆಯಾಗಿದ್ದು, ಹೆಣ್ಣುಮಗು ಜನಿಸಿತ್ತು. ಅಂದಿನಿಂದಲೂ ಆರೋಗ್ಯವಾಗಿದ್ದ ಮಹಾದೇವಿ ಮೂರು ದಿನಗಳ ಹಿಂದೆ ಅಸ್ವಸ್ಥರಾಗಿದ್ದರು. ವಿಪರೀತ ಜ್ವರ ಬಂದಿತ್ತು. ಸೋಂಕಿನಿಂದಾಗಿ ಮಹಾದೇವಿ ಮೃತಪಟ್ಟಿದ್ದಾರೆಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅವರು ಕೊಟ್ಟಿಲ್ಲ” ಎಂದು ನಂದೀಶ್ ಆರೋಪಿಸಿದ್ದಾರೆ.
“ಕೆಲವು ಔಷಧಿ ಮತ್ತು ನೆಬ್ಯುಲೈಸರ್ ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಟ್ಟಿದ್ದರು. ತಂದುಕೊಟ್ಟ ಔಷಧಿಯನ್ನೂ ಬಳಸಿಲ್ಲ. ಮಹಾದೇವಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದ ಕಾರಣ ಸಾವು ಸಂಭವಿಸಿದೆ” ಎಂದು ಮೃತರ ಸಂಬಂಧಿ ಹೊನ್ನೂರಮ್ಮ ಆರೋಪಿಸಿದರು.
“ಸಿಸೇರಿಯನ್ ಆಗುವುದಕ್ಕೂ ಮೊದಲು ನನ್ನ ಸಹೋದರಿ ಆರೋಗ್ಯವಾಗಿಯೇ ಇದ್ದಳು. ಸಿಸೇರಿಯನ್ ಬಳಿಕವೂ ಒಂದೆರಡು ದಿನ ಆರಾಮವಾಗಿಯೇ ಇದ್ದಳು. ಆದರೆ ಸೋಂಕಾಗಿದೆಯೆಂದು ವೈದ್ಯರು ಹೇಳುತ್ತಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿ ಅಥವಾ ಶಸ್ತ್ರಚಿಕಿತ್ಸೆಗೆ ಬಳಸಿದ ಸಾಧನಗಳನ್ನು ಸರಿಯಾಗಿ ಸ್ವಚ್ಛಗೊಳಿಸದ ಕಾರಣದಿಂದಲೇ ಹೀಗಾಗಿದೆ” ಎಂದು ವಿಮ್ಸ್ ಸಿಬ್ಬಂದಿಯೂ ಆದ ಮಹಾದೇವಿ ಸಹೋದರ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಎರಡು ಕಡೆ ಕುರಿ ಹಟ್ಟಿಗಳಿಗೆ ಬೆಂಕಿ; 55 ಮೇಕೆ, ಎರಡು ಟಗರು ಸಾವು
“ಥೋಂಬೋಎಂಬಾಲಿಸಂ’ ಎಂಬ ಸಮಸ್ಯೆಯಿಂದಾಗಿ ಬಾಣಂತಿ ಮೃತಪಟ್ಟಿದ್ದಾರೆ. ಆದರೂ ಘಟನೆಯ ಬಗ್ಗೆ ತನಿಖೆ ಮಾಡಲಾಗುವುದು. ವೈದ್ಯರು, ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು” ಎಂದು ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ ತಿಳಿಸಿದ್ದಾರೆ.