ಪಿಂಜಾರ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಆ ಹಿನ್ನೆಲೆಯಲ್ಲಿ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ ಮುಂದಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ಟಿ ಬಸನಗೌಡ್ರ ಹೇಳಿದರು.
ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕವಾಗಿ ಅತ್ಯಂತ ಹಿಂದುಳಿದ ಪಿಂಜಾರ ಸಮುದಾಯದ ಕುರಿತು ಕುಲಶಾಸ್ತ್ರ ಅಧ್ಯಯನ ಮಾಡಲು ರಾಜ್ಯ ಸರ್ಕಾರವು ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ ಟಿ ಬಸನಗೌಡ್ರ ಅವರನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ವತಿಯಿಂದ ಧಾರವಾಡದ ನಿವೃತ್ತ ನೌಕರರ ಭವನದಲ್ಲಿ ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಪಿ ಬಿ ನದಾಫ, ರುಬೀನಾ ನದಾಫ, ರಜೀಯಾ ಕೊಟಬಾಗಿ, ಗೀತಾ ಇನ್ನಿತರರನ್ನು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಅವರು, ಪಿಂಜಾರ ಸಮುದಾಯವು ಆರ್ಥಿಕವಾಗಿ ಹಿಂದುಳಿದಿದೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಬೇಕಾದರೆ ಜನಸಂಖ್ಯೆ ಮತ್ತು ವೃತ್ತಿಯ ಬಗ್ಗೆ ಅಧ್ಯಯನ ನಡೆಯುತ್ತದೆ. ಯಾವುದೇ ಜನಾಂಗವಿರಲಿ ಗುರುತಿಸುವಿಕೆ ಬಹಳ ಮುಖ್ಯವಾಗುತ್ತದೆ. ಜನಾಂಗದ ಮೂಲದ ಕುರಿತು ಅರ್ಥಾತ್ ವೃತ್ತಿ, ಆಚಾರ-ವಿಚಾರ, ಸಂಪ್ರದಾಯ ಇತ್ಯಾದಿ ಕುರಿತಾಗಿ ಸಂಶೋಧನಾತ್ಮಕವಾಗಿ ಹುಡುಕುವುದೇ ಮಾನವಶಾಸ್ತ್ರದ ಉದ್ದೇಶವಾಗಿದೆ. ಅಸಲಿಗೆ ಹೆಣ್ಣು-ಗಂಡು ಎರಡೇ ಜಾತಿಗಳು. ಆದರೆ; ಸರ್ಕಾರ ಯೋಜನೆಗಳನ್ನು ರೂಪಿಸುವ ಮೂಲಕ ಹಿಂದುಳಿದ ಸಮುದಾಯಗಳನ್ನು ಹುಡುಕಿ ಸಮಾಜದ ಮುಖ್ಯ ವಾಹಿನಿಗೆ ತರುವ ಸಲುವಾಗಿ ಈ ರೀತಿಯ ಅಧ್ಯಯನ ನಡೆಸುತ್ತದೆ.
ಆ ಹಿನ್ನೆಲೆಯಲ್ಲಿ ಪಿಂಜಾರ/ನದಾಫ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ಸರ್ಕಾರ ನನ್ನನ್ನು ನೇಮಿಸಿದೆ. ಮಂಡ್ಯ, ಮಂಗಳೂರು ಭಾಗಗಳಲ್ಲಿ ಪಿಂಜಾರ ಕುಟುಂಬಗಳು ಬಹುತೇಕ ಸಿಗುವುದಿಲ್ಲ. ಉತ್ತರ ಕರ್ನಾಟಕದ ಭಾಗದಲ್ಲಿ ಪಿಂಜಾರರು ಹೆಚ್ಚಾಗಿ ಕಾಣಸಿಗುತ್ತಾರೆ. ಸಮುದಾಯದ ಬಗ್ಗೆ ಅಧ್ಯಯನ ಮಾಡುವವರು ಆ ಸಮುದಾಯದವರೇ ಅರ್ಥಾತ್ ಆ ಕುಟುಂಬದವರಲ್ಲಿ ಒಬ್ಬರಂತೆ ಅಧ್ಯಯನ ನಡೆಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಸಂಶೋಧಕರು ಸಹಭಾಗಿತ್ವ ಅವಲೋಕನ ಮಾಡಬೇಕು. ಈ ರೀತಿಯಲ್ಲಿ ಅಧ್ಯಯನ ನಡೆಸಿದಾಗ ಸರ್ಕಾರಕ್ಕೆ ನೈಜ ಸ್ಥಿತಿ ತಲುಪುತ್ತದೆ ಎಂದರು.
ಪಿ ಬಿ ನದಾಫ್ ಮಾತನಾಡಿ, ಬಸವಣ್ಣ ಸಮಾಜದಲ್ಲಿ ಸಾಮರಸ್ಯವನ್ನು ಬಿತ್ತಿದ್ದಾರೆ. ಬಸವಣ್ಣನವರ ಹೆಸರಿನ ಬಸನಗೌಡರಿಂದ ಪಿಂಜಾರ್ ಕ್ರಾಂತಿಯಾಗಲಿ. ಒಂದು ಕಾಲದಲ್ಲಿ ನಾವು ಪಿಂಜಾರ ಎಂದು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದೆವು. ಉತ್ತರ ಕರ್ನಾಟಕದ ಭಾಗದಲ್ಲಿ ನದಾಫ್ ಸಮುದಾಯದ ಸಾಂದ್ರತೆ ಇದೆ. ಇಲ್ಲಿಂದ ವಲಸೆ ಹೋದಂತ ಪಿಂಜಾರರು ಮಂಡ್ಯ, ಶ್ರೀರಂಗಪಟ್ಟಣ, ಬೆಂಗಳೂರು ಆಸುಪಾಸಿನಲ್ಲಿ ಕಾಣಸಿಗುತ್ತಾರೆ. ಅವರಿಗೆ ಪಿಂಜಾರ ಜಾತಿ ಪ್ರಮಾಣಪತ್ರ ಇನ್ನೂ ಸಿಗುತ್ತಿಲ್ಲ. ಪಿಂಜಾರ್ ಸಮುದಾಯವು ರೈತರೊಂದಿಗೆ ಅತ್ಯಂತ ಬಾಂದ್ಯವ ಬೆಸೆದುಕೊಂಡಿದೆ. ಪಿಂಜಾರರು ಸಮಾಜದಲ್ಲಿ ಸಾಮರಸ್ಯದಿಂದ ಬದುಕುತ್ತ ಬಂದಿದ್ದಾರೆ ಎಂದರು.
ಸಂಘದ ಮಾಜಿ ರಾಜ್ಯಾಧ್ಯಕ್ಷ ಹಜರತ್ಅಲಿ ದೊಡಮನಿ ಮಾತನಾಡಿ, ಪಿಂಜಾರ ಕುಲಶಾಸ್ತ್ರ ಅಧ್ಯಯನಕ್ಕೆ ಸರ್ಕಾರವು ಕೇವಲ 45ಲಕ್ಷ ರೂ ನೀಡಿದರೆ ಸಾಲದು. ಇಡೀ ರಾಜ್ಯಾದ್ಯಂತ ಅಧ್ಯಯನ ನಡೆಸಬೇಕಾದರೆ 1 ಕೋಟಿ ರೂ. ನೀಡಿ ಪಿಂಜಾರ ಕುಲಶಾಸ್ತ್ರ ಅಧ್ಯಯನಕ್ಕೆ ಸಿದ್ದರಾಮಯ್ಯ ಸರ್ಕಾರ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸಮಾಜ ಸೇವಕಿ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತೆ ರಜಿಯಾಬೇಗಂ ಕೊಟಬಾಗಿ ಮಾತನಾಡಿ, ದೇವಸ್ಥಾನಕ್ಕೂ ಹೋಗುತ್ತೇವೆ. ಪಿಂಜಾರಾದ ನಾವು ನಮಾಜ್ ಅನ್ನೂ ಮಾಡುತ್ತೇವೆ. ಸಮಾಜದಲ್ಲಿ ಪಿಂಜಾರರು ಯಾರೊಂದಿಗೂ ಧ್ವೇಷ ಕಟ್ಟಿಕೊಳ್ಳದೆ ಸಾಮರಸ್ಯದಿಂದಲೇ ಬದುಕುತ್ತ ಬಂದಿದ್ದಾರೆ. ಮುಂದುವರೆದು ಜಿಲ್ಲೆಗೆ ಒಂದಾದರೂ ಶಾದಿ ಮಹಲ್ ಆಗಬೇಕು ಮತ್ತು ಪಿಂಜಾರ್ ಸಮಾಜದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳ ಸಂಖ್ಯೆ ಹೇರಳವಾಗಿದೆ ಈ ಕುರಿತು ಸರ್ಕಾರವು ಗಮನಹರಿಸಬೇಕು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ಕನ್ನಡ ಮಾತನಾಡುವುದು ಮನೆಯಿಂದಲೇ ಪ್ರಾರಂಭವಾಗಲಿ: ಸತೀಶ್ ತುರಮರಿ
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಎಪ್ ಎಮ್ ನದಾಫ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎ ಎಚ್ ನದಾಫ, ಹನೀಫ ನದಾಫ, ಗೌಸುಸಾಬ ನದಾಫ, ಪಿಂಜಾರ ಸಮುದಾಯದ ಪದಾಧಿಕಾರಿಗಳು, ಮಹಿಳೆಯರು, ಹಿರಿಯರು ಭಾಗವಹಿಸಿದ್ದರು. ಪ್ರಾರಂಭದಲ್ಲಿ ನೂರಜಾನ ನದಾಫ ಕುರಹಾನ ಪಠಣ ಮಾಡಿದರು. ಆರ್ ಕೆ ಪಿಂಜಾರ ನಿರೂಪಿಸಿದರು.