ಹಾಸನದಲ್ಲಿ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸುತ್ತಮುತ್ತಲಿನ ಗ್ರಾಮಗಳಿಗೆ, ಸಂಪರ್ಕ ರಸ್ತೆ ಮತ್ತು ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ಹಾಗೂ ಭೂಮಿ ದುರಸ್ತಿ, ಉಳಿಕೆ ಭೂಮಿಗೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ, ಶನಿವಾರದಂದು ಮಹಾರಾಜ ಪಾರ್ಕ್ ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು.
ಹಾಸನದ ಬೂವನಹಳ್ಳಿ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಬೂವನಹಳ್ಳಿ, ಲಕ್ಷ್ಮೀಸಾಗರ, ದ್ಯಾವಲಾಪುರ, ತೊಂಡಿಹಳ್ಳಿ ಮತ್ತು ಜಿ.ಮೈಲನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ರೈತರ ನೂರಾರು ಎಕ್ಕರೆ ಕೃಷಿಯೋಗ್ಯ ಭೂಮಿಯನ್ನು ಕೆಐಡಿಬಿ ಭೂಸ್ವಾಧೀನ ಮಾಡಿಕೊಂಡು ವಿಮಾನ ನಿಲ್ದಾಣದ ಕಾರ್ಯ ನಡೆಯುತ್ತಿದೆ.

1997 ರಲ್ಲಿ ಕೆಐಡಿಬಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆದಾಗಲೇ ವಿಮಾನ ನಿಲ್ದಾಣದ ಸುತ್ತಲೂ ಬರುವ ಗ್ರಾಮಗಳಿಗೆ ಮತ್ತು ಕೃಷಿ ಭೂಮಿಗೆ ಅನುಕೂಲವಾಗುವಂತೆ, ಸಂಪರ್ಕ ರಸ್ತೆಯನ್ನು ನಿರ್ಮಾಣ ಮಾಡಿಕೊಡುವುದಾಗಿ ಜಿಲ್ಲಾಡಳಿತವು ಭರವಸೆ ನೀಡಿತ್ತು. ಈ ಭರವಸೆ ಈಡೇರದಿದ್ದರೆ ಸುತ್ತಮುತ್ತಲ ಗ್ರಾಮಗಳಿಗೆ ಸಂಲರ್ಕವೇ ಕಡಿತವಾಗಿ ರೈತರು ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಇದರ ಜೊತೆಗೆ ಭೂಮಿ ಕಳೆದುಕೊಂಡ ಪ್ರತಿ ಕುಟುಂಬಕ್ಕೂ ಒಂದೊಂದು ಉದ್ಯೋಗ ನೀಡುತ್ತೇವೆಂಬ ಭರವಸೆಯನ್ನು ಜಿಲ್ಲಾಡಳಿತ ನೀಡಿತ್ತು. ಪ್ರಸ್ತುತ ಈ ಕುರಿತು ಜಿಲ್ಲಾಡಳಿತ ಅಧಿಕೃತವಾಗಿ ತೀರ್ಮಾನ ಮಾಡಬೇಕಾಗಿದೆ ಎಂದು ಪ್ರತಿಭಟನಾ ರೈತರು ತಿಳಿಸಿದರು.
ಬೂವನಹಳ್ಳಿ, ಲಕ್ಷ್ಮೀಸಾಗರ, ದ್ಯಾವಲಾಪುರ, ತೆಂಡಿಹಳ್ಳಿ, ಜಿ.ಮೈಲನಹಳ್ಳಿ, ಸಂಕೇನಹಳ್ಳಿ, ಚಿಕ್ಕಬೂವನಹಳ್ಳಿ, ಕೊಮ್ಮೇನಹಳ್ಳಿ, ಚಟ್ಟನಹಳ್ಳಿ, ಹಲಸಿನಹಳ್ಳಿ, ಗಾಡೇನಹಳ್ಳಿ, ಸಮುದ್ರವಳ್ಳಿ, ಗೇಕರವಳ್ಳಿ, ಯೋಗಿಹಳ್ಳಿ, ಹಂಡಂಗಿ, ಕುಂದೂರು ಮಠ ರಸ್ತೆ ಸೇರಿದಂತೆ ಇನ್ನೂ ಹಲವು ಗ್ರಾಮಗಳಿಗೆ ವಿಮಾನ ನಿಲ್ದಾಣ ಪ್ರಾರಂಭವಾದ ನಂತರ ರಸ್ತೆ ಸಂಪರ್ಕ ಇಲ್ಲದಾಗುತ್ತದೆ. ಇವರೆಲ್ಲರೂ ಹತ್ತಾರು ಕಿಲೋಮೀಟರ್‌ಗಳು ಸುತ್ತಿಬಳಸಿ ತಮ್ಮ ಕೆಲಸ ಕಾರ್ಯಗಳಿಗೆ ಹಾಸನಕ್ಕೆ ಬರಬೇಕಾಗುತ್ತದೆ. ಒಂದೆಡೆ ಆದಾಯದ ಮೂಲವಾಗಿದ್ದ ಕೃಷಿಯೋಗ್ಯ ಭೂಮಿಯನ್ನು ಕಳೆದುಕೊಂಡು, ಪರ್ಯಾಯ ಉದ್ಯೋಗವೂ ಇಲ್ಲದೆ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಕೆಪಿಅರ್ ಎಸ್ ಸಂಘಟನೆಯ ಮುಖಂಡರು ತಿಳಿಸಿದರು.

ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭೂಮಿಯು ಹಲವು ವರ್ಷಗಳ ಹಿಂದೆ ರೈತರಿಗೆ ಬಗರ್ ಹುಕುಂ ಸಾಗುವಳಿಯ ಆಧಾರದಲ್ಲಿ ಮಂಜೂರಾಗಿದ್ದರೂ, ರೈತರೇ ಸ್ವಾಧೀನಾನುಭವದಲ್ಲಿದ್ದರೂ, ಇದುವರೆಗೂ ಈ ಭೂಮಿಯಲ್ಲಿ ಪೂರ್ಣ ಪ್ರಮಾಣದ ದುರಸ್ತಿಕಾರ್ಯ ಕೈಗೊಂಡಿಲ್ಲದಿರುವುದರಿಂದ ಬಹುತೇಕ ರೈತರಿಗೆ ಪಟ್ಟಭದ್ರಹಿತಾಸಕ್ತಿಗಳು ದಾರಿತಪ್ಪಿಸಿ ಮೋಸ ಮಾಡುತ್ತಿದ್ದಾರೆ. ಜೊತೆಗೆ ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಳ್ಳುತ್ತಿರುವ ಲಕ್ಷ್ಮೀಸಾಗರ ಗ್ರಾಮದ ರೈತರ ಭೂಮಿಗೆ ಸೂಕ್ತ ಪರಿಹಾರವನ್ನು ನೀಡಿಲ್ಲ ಎಂದು ಕೆಪಿಆರ್ ಎಸ್ ರೈತ ಮುಖಂಡ ಎಚ್ ಅರ್ ನವೀನ್ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಒಳಮೀಸಲಾತಿ ಅನುಷ್ಠಾನಕ್ಕೆ ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
ಈ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ ರೈತರು, ವಿಮಾನ ನಿಲ್ದಾಣ ಭೂ ಸಂತ್ರಸ್ತರ ಹೋರಾಟ ಸಮಿತಿ, ಪ್ರಗತಿಪರ ರೈತರು, ಕೆಪಿಆರ್ ಎಸ್ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ಇನ್ನಿತರರು ಉಪ್ಥಿತರಿದ್ದರು.
