ಅತ್ಯಾಚಾರದಂತಹ ವಿಕೃತಿಯಲ್ಲಿ 'ಜಾತಿ'ಯನ್ನು ಹುಡುಕುವುದು ಎಷ್ಟು ಸರಿ ಎಂಬ ಪ್ರಶ್ನೆ ಹಳೆಯದ್ದು. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕಾರಣಕ್ಕೆ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರ ಮೇಲೆ ಹೆಚ್ಚಿನ ಅತ್ಯಾಚಾರಗಳಾಗುತ್ತವೆ
ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದಲಿತ ಯುವತಿಯ ಬೆತ್ತಲೆ ದೇಹ ಕಾಲುವೆಯಲ್ಲಿ ಸಿಕ್ಕಿದ್ದು, ಭೀಕರ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಸ್ಪಷ್ಟವಾಗುತ್ತಿದೆ. ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಬಂಧಿಸಿರುವುದಾಗಿ ಪೊಲೀಸರು ಇಂದು ಹೇಳಿಕೆ ನೀಡಿದ್ದಾರೆ.
ಜನವರಿ 30ರಂದು ಯುವತಿ ನಾಪತ್ತೆಯಾಗಿದ್ದಳು. ಪೊಲೀಸರಿಗೆ ದೂರನ್ನೂ ನೀಡಲಾಗಿತ್ತು. ಆದರೆ ಪತ್ತೆಹಚ್ಚುವಲ್ಲಿ ವಿಳಂಬವಾಗಿ, ಫೆಬ್ರುವರಿ 1ನೇ ತಾರೀಖು ಕಾಲುವೆಯಲ್ಲಿ ಮೃತದೇಹ ಸಿಕ್ಕಿತ್ತು. ”ನಾಪತ್ತೆಯಾಗಿದ್ದ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ, ಆಕೆಯ ಕಣ್ಣುಗಳನ್ನು ಕಿತ್ತು ಹಾಕಲಾಗಿದೆ, ಮೃತದೇಹದ ಮೇಲೆ ಭೀಕರ ಗಾಯಗಳು ಕಂಡು ಬಂದಿದೆ” ಎಂದಿದೆ ಕುಟುಂಬ.
ಭಗವತ್ ಕಥಾ ಕಾರ್ಯಕ್ರಮಕ್ಕೆ ಹೋಗಿದ್ದ ಯುವತಿ ಹಿಂತಿರುಗಿ ಬರಲೇ ಇಲ್ಲ. ಪೊಲೀಸರು ತುರ್ತು ಕ್ರಮ ತೆಗೆದುಕೊಳ್ಳಲಿಲ್ಲ ಎಂಬ ಗಂಭೀರ ಆರೋಪ ಬಂದಿದೆ. ಕಾಲುವೆಯಲ್ಲಿ ದೊರೆತ ಯುವತಿಯ ಬೆತ್ತಲೆ ದೇಹ ಹೃದಯ ವಿದ್ರಾಹಕ ಸ್ಥಿತಿಯಲ್ಲಿತ್ತು. ಕೈಗಳು ಮತ್ತು ಕಾಲುಗಳನ್ನು ಹಗ್ಗಗಳಿಂದ ಕಟ್ಟಿ ಹಾಕಲಾಗಿತ್ತು. ಆಕೆಯ ದೇಹದ ಮೇಲೆ ತೀವ್ರವಾದ ಗಾಯಗಳಾಗಿದ್ದವು. ಕಾಲು ಮುರಿಯಲಾಗಿತ್ತು.
ಫೈಜಾಬಾದ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಗದ್ಗದಿತರಾದರು. ದಲಿತರಾದ ಅವಧೇಶ್ ಅವರ ಅಸಹಾಯಕತೆಯಲ್ಲಿ ಸಹಜವಾಗಿ ನೋವು ವ್ಯಕ್ತವಾಗಿತ್ತು. ”ನಾನು ದೆಹಲಿಗೆ ಹೋಗಿ ಪ್ರಧಾನಿ ಮೋದಿ ಬಳಿ ವಿಷಯವನ್ನು ಪ್ರಸ್ತಾಪಿಸುತ್ತೇನೆ. ನಮಗೆ ನ್ಯಾಯ ಸಿಗದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಆ ಯುವತಿಯ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ರಾಮ ಎಲ್ಲಿದ್ದೀಯಾ, ಸೀತಾ ತಾಯಿ ಎಲ್ಲಿದ್ದೀಯಾ?” ಎಂದು ಕಣ್ಣೀರು ಹಾಕಿದ್ದಾರೆ ಅವಧೇಶ್.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಎಸ್‌ಸಿಎಸ್‌ಪಿ / ಟಿಎಸ್‌ಪಿ ಅನುದಾನ ಬಳಕೆಯಾಗುತ್ತಿಲ್ಲವೇಕೆ?
ಈ ಬೆಳವಣಿಗೆ ದೇಶದ ಆತ್ಮವನ್ನು ಕಲುಕೀತೆ ಎಂಬುದೇ ಸದ್ಯದ ಪ್ರಶ್ನೆ. ದಲಿತ ಹೆಣ್ಣುಮಕ್ಕಳ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಇದೇ ಮೊದಲೇನೂ ಜರುಗುತ್ತಿಲ್ಲ. ಒಂದು ಭೀಕರತೆಯನ್ನು ಮೀರಿಸುವ ಮತ್ತೊಂದು ಭೀಕರತೆ ಘಟಿಸುತ್ತಿವೆ ಅಷ್ಟೇ. 2020ರ ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಹೆಣ್ಣುಮಗಳ ಮೇಲೆ ನಾಲ್ವರು ದುರುಳರು ಇದೇ ರಾಜ್ಯದ ಹತ್ರಾಸ್‌ನಲ್ಲಿ ಭೀಕರ ಅತ್ಯಾಚಾರ ಎಸಗಿದ್ದರು. ದನಕುರುವಿಗೆ ಮೇವು ತರಲು ಹೋದ ಆಕೆಯ ಕುತ್ತಿಗೆಯನ್ನು ದುಪ್ಪಟ್ಟದಿಂದ ಸುತ್ತಿ ಎಳೆದಾಡಿದ್ದರು. ಈ ಘಟನೆಯಲ್ಲಿ ತೀವ್ರ ಗಾಯಗೊಂಡ ಆಕೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾವು ಬದುಕಿನ ಮಧ್ಯೆ ಎರಡು ವಾರ ಹೋರಾಡಿದ ಸಂತ್ರಸ್ತೆ ಸೆಪ್ಟೆಂಬರ್ 29, 2020ರಂದು ಕೊನೆಯುಸಿರೆಳೆದಿದ್ದಳು. ಆದರೆ ಕುಟುಂಬದ ಒಪ್ಪಿಗೆ ಇಲ್ಲದೆಯೇ ಸಂತ್ರಸ್ತೆಯ ಮೃತದೇಹವನ್ನು ಪೊಲೀಸರು ರಾತ್ರೋರಾತ್ರಿ ಸುಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಗಿ ಭಾರೀ ಚರ್ಚೆಯನ್ನು ಹುಟ್ಟಿಹಾಕಿತ್ತು.
2024ರ ಜನವರಿಯಲ್ಲಿ ಹೊರಬಿದ್ದ 2022ರ ‘ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿ’ಯ ಪ್ರಕಾರ, ಸಾಮೂಹಿಕ ಅತ್ಯಾಚಾರ, ಕೊಲೆಯಂತಹ ಮಹಿಳಾ ವಿರೋಧಿ ಒಟ್ಟು ಅಪರಾಧಗಳಲ್ಲಿ ಉತ್ತರ ಪ್ರದೇಶಕ್ಕೆ ಮೊದಲ ಸ್ಥಾನ. 2022ರಲ್ಲಿ 65,743 ಪ್ರಕರಣ, 2021ರಲ್ಲಿ 56,083 ಪ್ರಕರಣ, 2020ರಲ್ಲಿ 49,385 ಪ್ರಕರಣಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ಅಂದರೆ ವರ್ಷದಿಂದ ವರ್ಷಕ್ಕೆ ಇಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಲೇ ಇವೆ. 7 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದು ಸ್ಪಷ್ಟವಾಗುತ್ತಿದೆ.
ಈ ಹಿಂದಿನ ವರ್ಷಗಳಲ್ಲಿ ದೇಶದಲ್ಲಿ ದಲಿತ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯ ಪ್ರಕರಣಗಳ ಪ್ರಮಾಣ ಆತಂಕ ಹುಟ್ಟಿಸುತ್ತದೆ. ”2015 ಮತ್ತು 2020ರ ನಡುವೆ ದಲಿತ ಮಹಿಳೆಯರ ಮೇಲಿನ ಅತ್ಯಾಚಾರಗಳಲ್ಲಿ ಶೇ. 45ರಷ್ಟು ಹೆಚ್ಚಳವಾಗಿದೆ” ಎನ್ನುತ್ತಿದೆ ಎನ್‌ಸಿಆರ್‌ಬಿ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-2016ರ ವರದಿ ಪ್ರಕಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರ ಪ್ರಮಾಣವು ಪರಿಶಿಷ್ಟ ಪಂಗಡಗಳ ಮಹಿಳೆಯರಲ್ಲಿ ಶೇ. 7.8 ರಷ್ಟಿದೆ, ಪರಿಶಿಷ್ಟ ಜಾತಿಗಳ ಮಹಿಳೆಯರಲ್ಲಿನ ಪ್ರಮಾಣ ಶೇ. 7.3 ರಷ್ಟಿದೆ. ಹಿಂದುಳಿದ ಜಾತಿಗಳ ಮಹಿಳೆಯರ ಪ್ರಮಾಣ- ಶೇ. 5.4ರಷ್ಟಿದೆ.
2019ರ ಅಂಕಿಅಂಶಗಳು ಹೇಳುವ ಪ್ರಕಾರ ಪರಿಶಿಷ್ಟ ಜಾತಿಯ ಸಂತ್ರಸ್ತರನ್ನು ಒಳಗೊಂಡ ಶೇ.60ರಷ್ಟು ಪ್ರಕರಣಗಳಲ್ಲಿ ಮಾತ್ರ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಇದಲ್ಲದೆ, ಹೆಚ್ಚಿನ ರಾಜ್ಯಗಳಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾದ ಅಂತಹ ಪ್ರಕರಣಗಳಲ್ಲಿ ಕೇವಲ 40%ಕ್ಕೆ ಮಾತ್ರ ಶಿಕ್ಷೆಯಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿಯೂ ನ್ಯಾಯ ಸಿಕ್ಕಿರುವುದು ಕಡಿಮೆಯಾಗಿ ತೋರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆಯರ ಮೇಲಿನ ಅತ್ಯಾಚಾರಗಳು ಹೆಚ್ಚಿವೆ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಜಾತಿ ದೌರ್ಜನ್ಯ ಪ್ರಕರಣ: ಶಿಕ್ಷೆಯ ಪ್ರಮಾಣ ಕುಸಿತ; ದಲಿತ ಕಳಕಳಿಯ ವಕೀಲರ ನೇಮಕವಾಗಲಿ
ಅತ್ಯಾಚಾರದಂತಹ ವಿಕೃತಿಯಲ್ಲಿ ‘ಜಾತಿ’ಯನ್ನು ಹುಡುಕುವುದು ಎಷ್ಟು ಸರಿ ಎಂಬ ಪ್ರಶ್ನೆ ಹಳೆಯದ್ದು. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕಾರಣಕ್ಕೆ ಎಸ್‌ಸಿ, ಎಸ್‌ಟಿ ಸಮುದಾಯದ ಮಹಿಳೆಯರ ಮೇಲೆ ಹೆಚ್ಚಿನ ಅತ್ಯಾಚಾರಗಳಾಗುತ್ತವೆ. ಬಲಾಢ್ಯರು ತಮ್ಮ ಹಣಬಲ, ತೋಳ್ಬಲದ ಮೂಲಕ ಇಂತಹ ಕೃತ್ಯಗಳನ್ನು ಮುಚ್ಚಿಹಾಕುವ ದಾರ್ಷ್ಟ್ಯದಲ್ಲಿ ಇರುತ್ತಾರೆ. ಹೀಗಾಗಿ ಅಂಚಿನ ಸಮುದಾಯಗಳ ಮಹಿಳೆಯರ ಮೇಲೆ ವಿಕೃತಿ ಮೆರೆಯುತ್ತಲೇ ಇರುತ್ತಾರೆ. ದಲಿತೇತರ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆಯಂತಹ ಘಟನೆಗಳಾದಾಗ ಮಾಧ್ಯಮಗಳು, ಇಡೀ ಸಮಾಜ ಸ್ಪಂದಿಸಿರುವ ರೀತಿಯಲ್ಲಿನ ಮಾನವೀಯತೆ ದಲಿತ ಹೆಣ್ಣುಮಕ್ಕಳ ಮೇಲಾದ ದೌರ್ಜನ್ಯದ ಸಂದರ್ಭದಲ್ಲಿ ಗೌಣವಾಗುತ್ತದೆ.
‘ಭೇಟಿ ಬಚಾವೋ, ಭೇಟಿ ಪಢಾವೋ’ ಎನ್ನುವ ಪ್ರಧಾನಿ ಮೋದಿ ಮತ್ತು ಬಿಜೆಪಿಯವರು, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ಅತ್ಯಾಚಾರಗಳು ವರದಿಯಾದಾಗ ದೊಡ್ಡ ಮಟ್ಟದ ಪ್ರತಿಭಟನೆಯನ್ನು ತೋರುತ್ತಾರೆ. ಆದರೆ ತಮ್ಮದೇ ಅಧಿಕಾರದ ಅಡಿಯಲ್ಲಿ ನಡೆಯುವ ಘಟನೆಗಳ ವಿಚಾರದಲ್ಲಿ ಗಾಢ ಮೌನವನ್ನು ವಹಿಸುತ್ತಾರೆ. ಅಸಹಾಯಕ ಸಮುದಾಯಗಳ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು ಬಿಜೆಪಿಯ ದುಷ್ಟ ಆಡಳಿತವನ್ನು ಹೊರಗೆಡವುತ್ತಿದೆ. ಈ ಪಕ್ಷವು ನಿಜಕ್ಕೂ ಅಸಹಾಯಕರ ಪರವಾದ ಧೋರಣೆ ಹೊಂದಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ.
