ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಕುಲಪತಿಗಳ ನೇಮಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟಂತೆ ಹೊರಡಿಸಿರುವ ಕರಡು ನಿಯಮಾವಳಿಗಳ ಕುರಿತು ಚರ್ಚಿಸಲು ಫೆಬ್ರವರಿ 05 ರಂದು ಬೆಂಗಳೂರಿನಲ್ಲಿ ಕರೆಯಲಾಗಿರುವ ಒಂದು ದಿನದ ಉನ್ನತ ಶಿಕ್ಷಣ ಸಚಿವರ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಏಳು ರಾಜ್ಯಗಳ ಸಚಿವರು ಪಾಲ್ಗೊಳ್ಳುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ಅವರು ತಿಳಿಸಿದ್ದಾರೆ.
ದೇಶದ ಕೆಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಹಿರಂಗವಾಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಲಾರದಂತ ಸ್ಥಿತಿಯಲ್ಲಿವೆ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಜೆಡಿಯು, ಟಿಡಿಪಿ ಹಾಗೂ ಎಲ್ ಜೆ ಪಿ (ರಾಮ್ ವಿಲಾಸ್) ಪಕ್ಷಗಳು ಈಗಾಗಲೇ ಈ ಸಂಬಂಧ ಅತೃಪ್ತಿ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿರುವುದು ಬಹಿರಂಗಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಚುನಾವಣೆ ಇರುವುದರಿಂದ ದೆಹಲಿಯ ಉನ್ನತ ಶಿಕ್ಷಣ ಸಚಿವರು ಪಾಲ್ಗೊಳ್ಳುತ್ತಿಲ್ಲ. ಉಳಿದಂತೆ ಆತಿಥ್ಯ ವಹಿಸಿರುವ ಕರ್ನಾಟಕವೂ ಸೇರಿದಂತೆ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಜಾರ್ಖಂಡ್, ತೆಲಂಗಾಣ, ತಮಿಳುನಾಡು ಹಾಗೂ ಕೇರಳದ ಉನ್ನತ ಶಿಕ್ಷಣ ಸಚಿವರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಫೆಬ್ರವರಿ 5 ರಂದು ಬೆಳಗ್ಗೆ 10.30ಕ್ಕೆ ಈ ಸಮಾವೇಶವನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಡಾ ಎಂ ಸಿ ಸುಧಾಕರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ಯು ಜಿ ಸಿ ಕರಡು ನಿಯಮಾವಳಿಗಳಿಂದ ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಮೇಲೆ ಕೇಂದ್ರ ಸರ್ಕಾರ ರಾಜ್ಯಗಳಿಗಿದ್ದ ಅಧಿಕಾರವನ್ನು ಮೊಟಕುಗೊಳಿಸುವುದು ಮಾತ್ರವಲ್ಲದೆ ರಾಜ್ಯ ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನಿಗ್ರಹಿಸ ಹೊರಟಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಲ್ಲ.ಇಷ್ಟೇ ಅಲ್ಲದೆ ಉನ್ನತ ಶಿಕ್ಷಣದ ಹಲವಾರು ಹಂತಗಳಲ್ಲಿ ಒತ್ತಾಯಪೂರ್ವಕವಾಗಿ ಕೆಲವು ನಿಯಮಾವಳಿಗಳನ್ನು ಹೇರಲಾಗುತ್ತಿದೆ. ಹಾಗಾಗಿ ಎಲ್ಲ ರಾಜ್ಯಗಳ ಒಕ್ಕೊರಲಿನ ಧ್ವನಿಯಾಗಿ ಕೇಂದ್ರಕ್ಕೆ ತಿಳಿಸಲು ಈ ಸಮಾವೇಶ ನಡೆಯುತ್ತಿದೆ.ಸಮಾವೇಶದಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಧೋರಣೆಯ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು. ಸಮಾವೇಶದ ನಿರ್ಣಯಗಳನ್ನು ಕೇಂದ್ರ ಸರ್ಕಾರ ಹಾಗೂ ಯು.ಜಿ.ಸಿ ಗೆ ಕಳುಹಿಸಿ ಕೊಡಲಾಗುವುದು ಎಂದು ಡಾ ಎಂ ಸಿ ಸುಧಾಕರ್ ಅವರು ತಿಳಿಸಿದ್ದಾರೆ.
ದೇಶದ ಒಕ್ಕೂಟ ವ್ಯವಸ್ಥೆಯನ್ನು ಬಲಗೊಳಿಸುವುದು ಅತಿ ಮುಖ್ಯವಾಗಿದೆ. ಭಾರತದ ಶೈಕ್ಷಣಿಕ ವ್ಯವಸ್ಥೆ ಅತ್ಯಂತ ಸುಭದ್ರವಾದಂತದ್ದು, ಅದನ್ನು ಯಾವುದೇ ರಾಜ್ಯಗಳೊಂದಿಗೆ ಸಮಾಲೋಚಿಸದೆ ಏಕಾಏಕಿ ಕೇಂದ್ರ ಸರ್ಕಾರ ತನ್ನ ನಿಲುವುಗಳನ್ನು ಬಲವಂತವಾಗಿ ಹೇರುತ್ತಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸೂಕ್ತವಲ್ಲ. ಇದೊಂದು ಸಂವಿಧಾನ ವಿರೋಧಿ ಧೋರಣೆ.ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವರ ಅಭಿಪ್ರಾಯವನ್ನು ಕ್ರೂಡೀಕರಿಸಿ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಯು.ಜಿ.ಸಿ ಮಾಡಿರುವ ಮಾರ್ಪಾಡುಗಳನ್ನು ಪುನರ್ ಪರಿಶೀಲಿಸದಿದ್ದರೆ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
