ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ 2021 ಅಧಿಸೂಚನೆ ಅನ್ವಯವೇ ಬಾಕಿ ಇರುವ ಮೂರು ವರ್ಷದ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮವಹಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಸ್ವಾಗತಿಸಿ ಇಂದು ರಾಜ್ಯಾದ್ಯಂತ ವಿಜಯೋತ್ಸವ ಆಚರಿಸಲು ಕರೆನೀಡಿದ ಅಂಗವಾಗಿ ತೀರ್ಪು ಜಾರಿಗೊಳಿಸಲು ಆಗ್ರಹಿಸಿ ಕುಂದಾಪುರ ನಗರದಲ್ಲಿರುವ ಸಂಘದ ಕಚೇರಿ ಎದುರು ಆಚರಿಸಲಾಯಿತು.
ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು 2023 ರಿಂದ ಶೇ 70 ರಿಂದ ಶೇ. 80 ರಷ್ಟು ಕಡಿತ ಮಾಡಿತ್ತು. ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಸಂಘಟನೆಯು ಹೈಕೋರ್ಟ್ ಮೊರೆ ಹೋಗಿತ್ತು.
ಈ ರಿಟ್ ಅರ್ಜಿಯನ್ನು ಮಾನ್ಯಮಾಡಿದ್ದ ನ್ಯಾಯಮೂರ್ತಿ ಶ್ರೀ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿ 2023 ಏಪ್ರಿಲ್ ನಲ್ಲೇ ಮಧ್ಯಂತರ ಆದೇಶ ನೀಡಿ ಅರ್ಜಿ ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ಧನ ಸಹಾಯ ಪಾವತಿಸಲು ಆದೇಶಿಸಿತ್ತು. ಇದೀಗ ಅಂತಿಮ ತೀರ್ಪು ಹೊರ ಬಂದಿದ್ದು, ಅದರ ಅನ್ವಯ 2020 – 21, 2021 – 22 ಹಾಗೂ 2022 – 23 ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು 2021 ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ ಮಾತ್ರವಲ್ಲ ಸದರಿ ಆದೇಶವನ್ನು ಜಾರಿ ಮಾಡಲು ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಕ ನೀಡಿದೆ.ಅಲ್ಲದೆ 2023 ರ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಿ ಈ ಹಿಂದಿನ 2021 ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ವಿತರಿಸಲು ಜನವರಿ10 ರಂದು ಅಂತಿಮ ತೀರ್ಪು ನೀಡಿತ್ತು.
ಬಡ ಕಟ್ಟಡ ಕಾರ್ಮಿಕರ ಶೈಕ್ಷಣಿಕ ಬದುಕನ್ನೇ ಕಿತ್ತು ಕೊಂಡಿದ್ದ 2023 ರ ರಾಜ್ಗ ಸರ್ಕಾರದ ಅಧಿಸೂಚನೆ ಯನ್ನು ರದ್ದುಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ನೀಡಿರುವ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ರಿ) ಕಲ್ಯಾಣ ಮಂಡಳಿಯು ಕೂಡಲೇ 2021 ಅಧಿಸೂಚನೆ ಅನ್ವಯವೇ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಾಕಿ ಸಹಿತ ಶೈಕ್ಷಣಿಕ ಧನಸಹಾಯವನ್ನು ಅವರ ಖಾತೆಗೆ ವರ್ಗಾಹಿಸಲು ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿದೆ.
ವಿಜಯೋತ್ಸವದಲ್ಲಿ ಸಂಘದ ಗೌರವಾಧ್ಯಕ್ಷ ಚಿಕ್ಕ ಮೊಗವೀರ ಗಂಗೊಳ್ಳಿ, ಕೋಶಾಧಿಕಾರಿ ಚಂದ್ರಶೇಖರ ವಿ, ಕಾರ್ಯದರ್ಶಿ ಸುಧೀರ್ ಕುಮಾರ್, ರತ್ನಾಕರ ಆಚಾರ್ , ಡಿವೈಎಫ್ಐ ಮುಖಂಡ ಗಣೇಶ್ ದಾಸ್, ಎಸ್ ಎಫ್ ಐ ಸಂಚಾಲಕಿ ರಿತಿಕಾ ಮೊದಲಾದವರು ಉಪಸ್ಥಿತರಿದ್ದರು.
