ಬೇಸಿಗೆ ಮುಗಿದು, ಮಳೆಗಾಲ ಆರಂಭವಾಗುತ್ತಿದೆ. ಬೇಸಿಗೆಯಲ್ಲಿಯೂ ಹವಾಮಾನ ಬದಲಾವಣೆಯಿಂದ ಕೆಲವೆಡೆ ಭಾರೀ ಮಳೆಯಾಗಿದೆ. ಇದೆಲ್ಲದರ ನಡುವೆಯೂ ಕರಾವಳಿ ಪ್ರದೇಶ ಮಾತ್ರ ನೀರಿಲ್ಲದೆ ಬಳಲುತ್ತಿದೆ. ನೀರಿನ ಸಮಸ್ಯೆಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹಲವು ಕಾಲೇಜುಗಳನ್ನು ಮುಚ್ಚಲಾಗಿದೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತಿದೆ.
ಮಂಗಳೂರಿಗೆ ನೀರು ಒದಗಿಸುವ ತುಂಬೆ ಅಣೆಕಟ್ಟು ಬರಿದಾಗುತ್ತಿದೆ. ನಂದಿನಿ ನದಿ ಒಣಗಿದೆ. ಹೀಗಾಗಿ, ನಗರಕ್ಕೆ ಅಗತ್ಯವಿರುವಷ್ಟು ನೀರು ಪೂರೈಕೆ ಮಾಡಲಾಗದೆ ಮಂಗಳೂರು ಮಹಾನಗರ ಪಾಲಿಕೆ ಹೆಣಗಾಡುತ್ತಿದೆ. ಪ್ರತಿ ದಿನ ನಲ್ಲಿಗಳಲ್ಲಿ ನೀರು ಹರಿಸುತ್ತಿದ್ದ ಪಾಲಿಕೆ, ಈಗ ಎರಡು-ಮೂರು ದಿನಗಳಿಗೊಮ್ಮೆ ನೀರು ಪೂರೈಸುತ್ತಿದೆ. ಈ ವಾರದಲ್ಲಿ ನಂದಿನಿ ನದಿಯ ತಟದಲ್ಲಿ ಮಳೆಯಾಗದಿದ್ದರೆ, ನಗರಕ್ಕೆ ನೀರಿನ ಹಾಹಾಕಾರ ಎದುರಾಗುವ ಭೀತಿಯಲ್ಲಿ ನಗರವಾಸಿಗಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕರಾವಳಿ ಭಾಗದಲ್ಲಿ ನೀರಿನ ಅಭಾವ; ಹಲವು ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥನೆ
ಮಂಗಳೂರು ನಗರದಲ್ಲಿರುವ ಹಂಪನಕಟ್ಟೆ ಕಾಲೇಜು, ಕುಂಟಿಕಾನದ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ನೀರಿಗೆ ಅಭಾವ ಸೃಷ್ಟಿಯಾಗಿದೆ. ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳನ್ನು ರದ್ದು ಮಾಡಿದ್ದು, ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ.
ಜಿಲ್ಲೆಯ ನೂರಾರು ಶಾಲಾ-ಕಾಲೇಜುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿಯೂ ನೀರಿಗೆ ಹಾಹಾಕಾರ ಶುರುವಾಗಿದೆ. ಆಸ್ಪತ್ರೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.