ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಸೋಮವಾರ ಕೋಮುವಾದಿ ಹೇಳಿಕೆ ನೀಡಿದ್ದು, ‘ಗೋ ಕಳ್ಳತನ ಮಾಡುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸುತ್ತೇವೆ’ ಎಂದಿದ್ದಾರೆ. ಅವರ ಕೋಮುವಾದಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್, ‘ವೈಯಕ್ತಿಕವಾಗಿ ಏನೋ ಹೇಳಿರುತ್ತಾರೆ’ ಎಂದು ಜಾರಿಕೊಂಡಿದ್ದಾರೆ.
ಮಂಕಾಳ್ ವೈದ್ಯ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ, ಅವರ ಹೇಳಿಕೆಯ ಬಗ್ಗೆ ಪರಮೇಶ್ವರ್ ಅವರನ್ನು ಸುದ್ದಿಗಾರರು ಪ್ರಶ್ನಿಸಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ವೈಯಕ್ತಿಕವಾಗಿ ಏನೋ ಹೇಳಿರುತ್ತಾರೆ. ಸ್ಪಾರ್ ಆಫ್ ದಿ ಮೂಮೆಂಟ್‌ನಲ್ಲಿ’ ಎಂದು ಮೌನಕ್ಕೆ ಜಾರಿದ್ದಾರೆ.
ಸೋಮವಾರ, ಕಾರವಾರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ್ದ ಮಂಕಾಳ್ ವೈದ್ಯ, “ಗೋ ಕಳ್ಳತನವನ್ನು ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಹಸುವಿನ ಮೇಲೆ ದೌರ್ಜನ್ಯ ನಡೆಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಿ. ಅವರು ಯಾರೇ ಆಗಲಿ ಕ್ರಮ ಕೈಗೊಳ್ಳಲಿ. ಇನ್ನೂ ಹೆಚ್ಚಾಗಿ ಹೇಳಬೇಕು ಅಂದ್ರೆ ಗೋ ಕಳ್ಳರ ವಿರುದ್ಧ ಅಥವಾ ಗೋವಿನ ಮೇಲೆ ದೌರ್ಜನ್ಯ ನಡೆಸುವವರನ್ನು ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ” ಎಂದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದರು.