ಬಳ್ಳಾರಿ ಜಿಲ್ಲೆಯಲ್ಲಿ ಆಭರಣಗಳ ಕಳವು ಪ್ರಕರಣಗಳ ತನಿಖೆಯ ನೆಪದಲ್ಲಿ ಪೊಲೀಸರೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆಂದು ಆರೋಪಿಸಿ ‘ಚಿನ್ನ-ಬೆಳ್ಳಿ ವ್ಯಾಪಾರಸ್ಥರ ಸಂಘ’ದ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಜನರು ಸೇರಿ ಎರಡು ದಿನಗಳ ಪ್ರತಿಭಟನೆ ಆರಂಭಿಸಿದರು.
ಸಂಘದ ಮುಖಂಡ ಮೊಹಮದ್ ಫಾರೂಕ್ ಮಾತನಾಡಿ, “ಮೊದಲಿನಿಂದಲೂ ನಾವು ಚಿನ್ನ, ಬೆಳ್ಳಿ ಆಭರಣ ತಯಾರಕ ಕೆಲಸವನ್ನೇ ಮಾಡಿಕೊಂಡು ಬಂದಿದ್ದೇವೆ. ಇದೇ ನಮಗೆ ಜೀವನಾಧಾರ. ಇತ್ತೀಚಿನ ದಿನಗಳಲ್ಲಿ ಕೆಲಸಗಳು ಕಡಿಮೆಯಾಗಿವೆ. ಈ ಮಧ್ಯೆ, ಕಳ್ಳತನ ಪ್ರಕರಣಗಳಲ್ಲಿ ನಮ್ಮನ್ನು ಅನುಮಾನಿಸಿ, ಅಪಮಾನಿಸಲಾಗುತ್ತಿದೆ. ಹೀಗಾಗಿ ಈ ಕೆಲಸವನ್ನೇ ತೊರೆಯುವ ಸ್ಥಿತಿಗೆ ಬಂದು ತಲುಪಿದ್ದೇವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಮ್ಮ ಕಷ್ಟವನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಲಿಸಬೇಕು. ನಮ್ಮ ಕಸುಬೇ ಚಿನ್ನದ ಆಭರಣ ತಯಾರಿಸುವುದು. ಯಾರೋ ತಮ್ಮ ಕಷ್ಟಕ್ಕೆ ಚಿನ್ನ ಮಾರಾಟ ಮಾಡಿರುತ್ತಾರೆ. ಅವರ ಕಷ್ಟಕ್ಕೆ ಹಣ ಬಳಸಿಕೊಂಡಿರುತ್ತಾರೆ. ಆದರೆ, ಪೊಲೀಸರು ನೀವು ಕಳ್ಳತನದ ಮಾಲು ಖರೀದಿ ಮಾಡಿದ್ದೀರಿ, ಠಾಣೆಗೆ ಬನ್ನಿರೆಂದು ಕರೆಯುತ್ತಾರೆ. ಹೀಗಾಗಿ ಕೆಲಸ ಮಾಡುವುದೇ ಕಷ್ಟವಾಗಿದೆ” ಎಂದರು.
ಶ್ರವಣಕುಮಾರ ಮಾರನಾಡಿ ಮಾತನಾಡಿ, “ಬದುಕಿಗೆ ಇರುವುದು ಇದು ಒಂದೇ ಕಸುಬು, ಪೊಲೀಸರ ಕಿರುಕುಳದಿಂದ ಈ ಕೆಲಸ ಬಿಟ್ಟು ವಲಸೆ ಹೋಗುತ್ತಿದ್ದೆವೆ. ಅನಾವಶ್ಯಕವಾಗಿ ನಮ್ಮ ಮೇಲೆ ಕಳ್ಳತನದ ಆರೋಪ ಮಾಡಿ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಬಟ್ಟೆ ಬಿಚ್ಚಿ ನಿಲ್ಲಸಿ ಹೇಳಿ ಅವಮಾನ ಮಾಡುತ್ತಾರೆ. ನಾವೇ ಕಳ್ಳರು ಎಂಬಂತೆ ಬಿಂಬಿಸಿ ನಮ್ಮಿಂದ ಬಂಗಾರ, ಬೆಳ್ಳಿ ವಸೂಲಿ ಮಾಡುತ್ತಾರೆ” ಎಂದರು.
ವ್ಯಾಪಾರಿ ಕುಬೇರ ಮಾತನಾಡಿ, “ನಮ್ಮನ್ನು ಠಾಣೆಗೆ ಕರೆಸುತ್ತಾರೆ ನಮ್ಮ ಅಂಗಡಿಯ ಮಾಲೀಕರು ಬಂದರೆ, ಪಿಎಸ್‌ಐ, ಪೋಲೀಸರು ಬೇರೆ ಠಾಣೆಗೆ ಕರೆದುಕೊಂಡು ಹೋಗುತ್ತಾರೆ. ಮಾಲೀಕರ ಎದುರು ‘ನಾವು ಯಾರನ್ನೂ ಕರಕೊಂಡು ಬಂದಿಲ್ಲ’ವೆಂದು ಸುಳ್ಳು ಹೇಳುತ್ತಾರೆ” ಎಂದು ಆರೋಪಿಸಿದರು.
“ಜೀವನೋಪಾಯಕ್ಕಾಗಿ ಕೆಲಸ ಮಾಡುವವರು ಕೆಜಿಗಟ್ಟಲೆ ಚಿನ್ನ ಖರೀದಿ ಮಾಡಲು ಹೇಗೆ ಸಾಧ್ಯ. ಸುಳ್ಳು ಆರೋಪ ಮಾಡಿ ನಮಗೆ ಚಿತ್ರಹಿಂಸೆ ನೀಡಲಾಗುತ್ತಿದೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರ ಬಜೆಟ್ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ
“ಜಿಲ್ಲಾಧಿಕಾರಿ ಅಥವಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದು ನಮ್ಮ ಮನವಿ ಆಲಿಸಿದರೆ ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ. ಇಲ್ಲವಾದರೆ, ಎರಡು ದಿನ ಪ್ರತಿಭಟನೆ ಮುಂದುವರಿಯಲಿದೆ” ಎಂದು ಸಂಘದ ಮುಖಂಡರು ತಿಳಿಸಿದರು.
ವಿಜಯ ಆಚಾರ್ಯ ಮಾತನಾಡಿ, “ಪೊಲೀಸರ ತನಿಖೆಗೆ ನಮ್ಮದು ಯಾವುದೇ ಆಕ್ಷೇಪವಿಲ್ಲ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ನಮ್ಮ ಸಂಘದ ಮುಖಂಡರ ಗಮನಕ್ಕೆ ತಂದರೆ ನಾವು ಅವರ ವಿಚಾರಣೆಗೆ ಸಹಕರಿಸುತ್ತೇವೆ. ಯಾವುದೇ ಮುನ್ಸೂಚನೆ ಇಲ್ಲದೆ ಬಂದು ವಿಚಾರಣೆ ನೆಪದಲ್ಲಿ ಕೆಲಸಗಾರರನ್ನು ಕರೆದುಕೊಂದು ಹೋಗುವುದು 20, 30 ಗ್ರಾಮ ಚಿನ್ನ, ಬೆಳ್ಳಿ ವಸೂಲಿ ಮಾಡಿದರೆ, ನಮ್ಮ ಕುಟುಂಬ ಸಹಿತ ವಿಷ ಸೇವಿಸುವುದೊಂದೇ ದಾರಿ ಉಳಿದಿರುವುದು” ಎಂದರು.