ಅಮೆರಿಕದಿಂದ ಭಾರತದ ಅಕ್ರಮ ವಲಸಿಗರನ್ನು ಮಿಲಿಟರಿ C-17 ವಿಮಾನದ ಮೂಲಕ ವಾಪಸ್ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 205 ನಾಗರಿಕರನ್ನು ಹೊತ್ತ ವಿಮಾನ ಸಾನ್ ಅಂಟೋನಿಯೊದಿಂದ ಕೆಲವು ಗಂಟೆಗಳ ಹಿಂದೆ ಟೇಕ್ ಆಪ್ ಆಗಿದ್ದು, ಭಾರತಕ್ಕೆ ತಲುಪಲು ಸುಮಾರು 24 ಗಂಟೆಗಳಾಗುತ್ತದೆ. ವಿಮಾನವು ಪಂಜಾಬ್‌ನ ಅಮೃತ್‌ಸರ್‌ಗೆ ಬಂದಿಳಿಯಲಿದೆ.
ಟೆಕ್ಸಾಸ್‌ನ ಎಲ್ ಹಾಸೊ ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಬಂಧನಕ್ಕೊಳಗಾದ 5 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳ ಮೂಲಕ ಗಡಿಪಾರು ಮಾಡಲಾಗುತ್ತಿದೆ.
ಅಮೆರಿಕದಲ್ಲಿ ಅಕ್ರಮ ವಲಸಿಗರ ಸಂಖ್ಯೆಯಲ್ಲಿ ಭಾರತವು ಮೂರನೆ ಸ್ಥಾನದಲ್ಲಿದೆ. ಸುಮಾರು 7.25 ಲಕ್ಷ ಭಾರತೀಯರು ಅಮೆರಿಕದಲ್ಲಿ ಅಕ್ರಮ ವಲಸೆಗಾರರಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು ಪ್ರಜೆಗಳು ಗುಜರಾತ್ ಮೂಲದವರಾಗಿದ್ದಾರೆ. ಈಗಾಗಲೆ ಭಾರತ ಸರ್ಕಾರ ಅಮೆರಿಕಕ್ಕೆ ತನ್ನ 18,000 ಪ್ರಜೆಗಳನ್ನು ವಾಪಸು ಹಿಂಪಡೆಯುವುದಾಗಿ ಆಶ್ವಾಸನೆ ನೀಡಿದೆ.
ಜನವರಿ 20ಕ್ಕೆ ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಇಲ್ಲಿಯವರೆಗೂ ಪೆರು, ಹೊಂಡುರಸ್, ಕೊಲಂಬಿಯ, ಗ್ವಾಟೆಮಾಲ ಹಾಗೂ ಇನ್ನಿತರ ದಕ್ಷಿಣ ಅಮೆರಿಕದ ದೇಶಗಳಿಗೆ ಇಲ್ಲಿಯವರೆಗೂ ಸಾವಿರಾರು ಮಂದಿ ಅಕ್ರಮ ವಲಸಿಗರನ್ನು ಮಿಲಿಟರಿ ವಿಮಾನಗಳ ಮೂಲಕ ವಾಪಸು ಕಳುಹಿಸಲಾಗಿದೆ.
ವರದಿಯ ಪ್ರಕಾರ ಕಳೆದ ವಾರ ಗ್ವಾಟೆಮಾಲ ದೇಶಕ್ಕೆ ಹಿಂದಿರುಗಿಸಲು ಪ್ರತಿ ಒಬ್ಬ ಅಕ್ರಮ ವಲಸಿಗನ ಮೇಲೆ ಅಮೆರಿಕ ದೇಶವು ತಲಾ 4,675 ಡಾಲರ್ ವೆಚ್ಚ ಮಾಡಿದೆ.
ಫೆಬ್ರವರಿ 2ರಂದು ಅಮೆರಿಕದಾದ್ಯಂತ ಹಲವಾರು ನಗರಗಳಲ್ಲಿ ಅಕ್ರಮ ವಲಸಿಗರನ್ನು ಬಂಧಿಸಿ ವಾಪಸ್ ಅವರ ದೇಶಗಳಿಗೆ ಕಳುಹಿಸುವ ಟ್ರಂಪ್ ಸರ್ಕಾರದ ಕ್ರಮದ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದವು. ಈಗಾಗಲೆ ಹಣದುಬ್ಬರದಿಂದ ಹೆಚ್ಚು ಬೆಲೆ ಎದುರಿಸುತ್ತಿರುವ ಅಮೆರಿಕನ್ ಪ್ರಜೆಗಳು ಅಕ್ರಮ ವಲಸಿಗರು ಹಿಂದಿರುಗಿದರೆ ಇನ್ನೂ ಹೆಚ್ಚು ಬೆಲೆ ತೆರಬೇಕಾಗುತ್ತದೆ. ವ್ಯವಸಾಯ, ಕಟ್ಟಡ ನಿರ್ಮಾಣ, ಕೋಳಿ ಸಾಕಾಣಿಕೆ, ಕಸಾಯಿಖಾನೆ, ಮನೆಗೆಲಸ ಇತ್ಯಾದಿಗಳಿಗೆ ಕೆಲಸಗಾರರ ಕೊರತೆ ಹೆಚ್ಚಾಗುತ್ತದೆ. ಇದರ ಪರಿಣಾಮ ಆರ್ಥಿಕ ಸ್ಥಿತಿಯ ಮೇಲೂ ಉಂಟಾಗಲಿದೆ.
ಅಮೆರಿಕದಲ್ಲಿ ದಾಖಲೆ ರಹಿತವಾಗಿ ನೆಲೆಸಿರುವ ಭಾರತೀಯರನ್ನು ಕಾನೂನು ಬದ್ಧವಾಗಿ ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮುಕ್ತ ಮನಸು ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಭಾರತೀಯರ ಕೌಶಲ, ಪ್ರತಿಭೆಯನ್ನು ಜಾಗತಿಕವಾಗಿ ಬೆಳೆಸಲು ನಾವು ಬಯಸುತ್ತೇವೆ. ಇದೇ ವೇಳೆ ಅಕ್ರಮ ವಲಸೆಯನ್ನು ಸಹ ವಿರೋಧಿಸುತ್ತೇವೆ. ಒಂದು ಸರ್ಕಾರವಾಗಿ ಕಾನೂನುಬದ್ಧ ವಲಸೆ ನೀತಿಯನ್ನು ಬೆಂಬಲಿಸುತ್ತೇವೆ. ಅಮೆರಿಕ ಹೊರ ಕಳಿಸಬಹುದಾದ ಭಾರತೀಯರ ಸಂಖ್ಯೆಯನ್ನು ಗಮನಿಸಲಾಗುತ್ತಿದೆ. ಆದರೆ, ಎಷ್ಟು ಎಂಬ ಬಗ್ಗೆ ಖಚಿತ ಮಾಹಿತಿ ನಮ್ಮಲ್ಲಿ ಮಾತ್ರವಲ್ಲ ಅಮೆರಿಕದ ಅಧಿಕಾರಿಗಳ ಬಳಿಯೂ ಇಲ್ಲ. ಮಾಧ್ಯಮಗಳು ಪ್ರಕಟಿಸುತ್ತಿರುವ ಅಂಕಿ-ಅಂಶಗಳು ತಪ್ಪಾಗಿರಬಹುದು ಎಂದು ಜೈಶಂಕರ್ ತಿಳಿಸಿದ್ದರು.
ಮುಂದಿನ ವಾರ ಮೋದಿ ಅಮೆರಿಕ ಪ್ರವಾಸ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿಯನ್ನು ಅಮೆರಿಕಕ್ಕೆ ಮುಂದಿನ ವಾರ ಆಗಮಿಸುವಂತೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಶ್ವೇತ ಭವನದ ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿಯೊಂದಿಗೆ ಜನವರಿ 27ರಂದು ಮಾತನಾಡಿದ ಟ್ರಂಪ್, ಅಮೆರಿಕದಲ್ಲಿ ತಯಾರಿಸುವ ಉತ್ಪನ್ನಗಳನ್ನು ಭಾರತ ಖರೀದಿಸಿ ದ್ವಿಪಕ್ಷೀಯ ವಹಿವಾಟಿಗೆ ಹೆಚ್ಚಿನ ಮಹತ್ವ ನೀಡಬೇಕೆಂದು ಒತ್ತಿ ಹೇಳಿದರು.
ಅಮೆರಿಕದೊಂದಿಗೆ ವ್ಯಾಪಾರ ಸಂಬಂಧಗಳನ್ನು ವೃದ್ಧಿಸಲು ಕೌಶಲ್ಯಭರಿತ ನಾಗರಿಕರಿಗೆ ತ್ವರಿತವಾಗಿ ವಿಸಾ ನೀಡಲು ಅಮೆರಿಕ ಸಿದ್ಧವಾಗಿದೆ. ಚೀನಾವನ್ನು ಎದುರಿಸುವ ಪ್ರಯತ್ನಗಳಲ್ಲಿ ಅಮೆರಿವು ಭಾರತವನ್ನು ನೆಚ್ಚಿನ ಪಾಲುದಾರ ಎಂದು ಪರಿಗಣಿಸಿದೆ. ಇದರೊಂದಿಗೆ ಮೋದಿ ಅಮೆರಿಕ ಭೇಟಿಯು ವ್ಯಾಪಾರ ಸುಂಕಗಳ ಬಗ್ಗೆಯೂ ಒಳಗೊಂಡಿದೆ. ಅಮೆರಿಕದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಬಗ್ಗೆ ಅಮೆರಿಕ ಅಧ್ಯಕ್ಷರು ಬೆದರಿಕೆ ಹಾಕಿದ್ದರು.
ಈ ಸುದ್ದಿ ಓದಿದ್ದೀರಾ ? ಈ ದಿನ ಸಂಪಾದಕೀಯ | ಅಯೋಧ್ಯೆ ಅತ್ಯಾಚಾರ ಪ್ರಕರಣ; ಶೋಷಿತ ಸಮುದಾಯಕ್ಕೆ ಸಿಗದ ರಕ್ಷಣೆ
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಹಿಡಿಯುವಲ್ಲಿ ಭಾರತದ ವಲಸಿಗ ಮತದಾರರು ನಿರ್ಣಾಯಕ ಪಾತ್ರವಹಿಸಿದ್ದರು. ರಿಪಬ್ಲಿಕನ್ ಪಕ್ಷಕ್ಕೆ ಮತ ಹಾಕಿದವರಲ್ಲಿ ಅಮೆರಿಕದಲ್ಲಿ ನಿವಾಸಿಗಳಾಗಿರುವ ಭಾರತದ ಬಲಪಂಥೀಯ ಸಮುದಾಯದವರೆ ಹೆಚ್ಚಾಗಿದ್ದರು. ಟ್ರಂಪ್ ಗೆಲುವಿಗೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರು ಭಾರತದಲ್ಲಿ ಪೂಜೆ ಹವನ ಮುಂತಾದವುಗಳನ್ನು ಕೈಗೊಂಡಿದ್ದರು.
ಪ್ರಧಾನಿ ಮೋದಿ ಅಮೆರಿಕ ಭೇಟಿಯ ನಿರ್ದಿಷ್ಟ ದಿನಾಂಕಗಳನ್ನು ಸೂಕ್ತ ಸಮಯದಲ್ಲಿ ಪ್ರಕಟಿಸಲಾಗುವುದು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ. ವರದಿಗಳ ಪ್ರಕಾರ ಅಮೆರಿಕವು ಭಾರತದೊಂದಿಗೆ ಅತಿ ದೊಡ್ಡ ವ್ಯಾಪಾರ ಪಾಲುದಾರಿಕೆಯನ್ನು ಹೊಂದಿದೆ. ಉಭಯ ದೇಶಗಳ ನಡುವಿನ ವ್ಯಾಪಾರವು 2023 – 24ರಲ್ಲಿ 118 ಶತಕೋಟಿ ಡಾಲರ್ ದಾಟಿದೆ. ಭಾರತ ಇದೇ ವರ್ಷದಲ್ಲಿ ಅಮೆರಿಕದಿಂದ 32 ಶತಕೋಟಿ ಡಾಲರ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು.
