ಕಾಂತರಾಜ ಆಯೋಗದ ವರದಿ ಜಾರಿಯಾಗಲೇಬೇಕು : ಶೋಷಿತ ಸಮುದಾಯಗಳ ಒಕ್ಕೂಟ

Date:

Advertisements

“ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರ್ಕಾರ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸುತ್ತದೆ ಎಂದು ಭಾವಿಸಿದ್ದೆವು. ಆದರೆ, ಸರ್ಕಾರ ಬಲಿಷ್ಠ ಜಾತಿಗಳ ಒತ್ತಡಕ್ಕೆ ಒಳಗಾಗಿದ್ದು, ಶೋಷಿತರನ್ನು ಕಡೆಗಣಿಸುತ್ತಿದೆ” ಎಂದು ದಲಿತ ಹೋರಾಟಗಾರ ಮಾವಳ್ಳಿ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಳಮೀಸಲಾತಿ ನಿಗದಿ ಮಾಡಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಿರುವ ಕಾಂತರಾಜು ಆಯೋಗದ ವರದಿಯನ್ನೂ ಸರ್ಕಾರ ಜಾರಿಗೆ ತಂದಿಲ್ಲ. ಕಾಂತರಾಜ ವರದಿಯನ್ನು ಬಿಡುಗಡೆ ಮಾಡಿ, ಜನಾಭಿಪ್ರಾಯ ಪಡೆಯಬೇಕು. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ವರದಿಗಳು ಮತ್ತು ಅವುಗಳ ಜಾರಿಯ ಬಗ್ಗೆ ಕ್ಯಾಬಿನೆಟ್‌ನಲ್ಲಿಯೂ ಚರ್ಚೆಯಾಗದಂತೆ ಬಲಿಷ್ಠ ಜಾತಿಗಳು ತಡೆಯುತ್ತಿವೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾತಿ ಜನಗಣತಿ ಜಾರಿಯ ಭರವಸೆ ನೀಡಿದೆ. ಈಗ ಅದರಂತೆ ನಡೆದುಕೊಳ್ಳಬೇಕು. ಸಮ ಸಮಾಜ ನಿರ್ಮಿಸಲು, ವಂಚಿತರ ಸ್ಥಿತಿ ತಿಳಿಯಲು, ತಳ ಸಮುದಾಯಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವ ಕಾಂತರಾಜ ವರದಿಯನ್ನ ಜನರ ಮುಂದಿಡಿ. ಕಾಂತರಾಜು ವರದಿ ಬಿಡುಗಡೆ ಮಾಡುವುದಕ್ಕೆ ಕೆಲವರು ವಿರೋಧ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

“ಜಾತ್ಯತೀತ ಸರ್ಕಾರ ಬರಬೇಕು. ಕೋಮುವಾದಿ ಸರ್ಕಾರ ತೊಲಗಬೇಕು ಎಂದು ಶೋಷಿತ ಸಮುದಾಯಗಳು ಕಾಂಗ್ರೆಸ್‌ಗೆ ಮತ ಹಾಕಿ ಗೆಲ್ಲಿಸಿದೆ. ಶೋಷಿತ ಸಮುದಾಯಗಳ ಪಾಲುದಾರಿಕೆಯಲ್ಲಿ ಬಂದಿರುವ ಕಾಂಗ್ರೆಸ್ ಸರ್ಕಾರ. ಈಗ ವರದಿಯನ್ನು ಜನರ ಮುಂದೆ ಇಡುತ್ತಿಲ್ಲ. ಈ ಹಿಂದೆ, ವರದಿಯನ್ನು ಜಾರಿ ಮಾಡುವುದಾಗಿ ಹೇಳಿದ್ದ ಸರ್ಕಾರ ಈಗ ಯಾಕೆ ಕೈಕಟ್ಟಿ ಕುಳಿತಿದೆ” ಎಂದು ಪ್ರಶ್ನಿಸಿದರು.

Advertisements

“ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೂ ಜಾತಿಗಣತಿ, ಕಾಂತರಾಜ ವರದಿ ಜಾರಿ ಬಗ್ಗೆ ಭರವಸೆ ನೀಡಿದ್ದರು. ಸರ್ಕಾರ ರಚನೆಯಾಗಿ 2 ವರ್ಷಗಳಾಗುತ್ತಿವೆ. ಆದರೂ, ವರದಿಯನ್ನು ಬಿಡುಗಡೆ ಮಾಡದೆ, ಬರೀ ಸಬೂಬು ಹೇಳುತ್ತಿದ್ದಾರೆ. ಶೋಷಿತ ಸಮುದಾಯಗಳನ್ನು ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ. ಹಲವು ಬಾರಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ, ಉಪಯೋಗವಾಗಿಲ್ಲ. ಮುಖ್ಯಮಂತ್ರಿಗಳ ಕೈಕಟ್ಟಿ ಹಾಕಿರುವುದು ಯಾರು? ಒಳಮೀಸಲಾತಿ ಮತ್ತು ಕಾಂತರಾಜ ವರದಿಯ ಅನುಷ್ಠಾನಕ್ಕಾಗಿ ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ” ಎಂದು ತಿಳಿಸಿದರು.

 ಕಾಂತರಾಜು ವರದಿ“ಸಾರ್ವಜನಿಕರ ಹಣದಿಂದ ಮಾಡಿದ ಈ ಸಮೀಕ್ಷಾ ವರದಿ ಸಾರ್ವಜನಿಕರಿಗೆ ಸೇರಬೇಕು. ಆದರೆ, ಅದು ಜನರ ಕೈ ಸೇರುತ್ತಿಲ್ಲ. ಕರ್ನಾಟಕವನ್ನು ನೋಡಿಕೊಂಡು ಬಿಹಾರ ಜಾತಿ ಸಮೀಕ್ಷೆ ನಡೆಸಿದೆ. ಮೋದಿಗೆ ಬೆಂಬಲ ನೀಡಿರುವ ಬಿಹಾರ ಸರ್ಕಾರವೇ ವರದಿಯನ್ನ ಜಾರಿಗೊಳಿಸಿದೆ. ಆದರೆ, ಕರ್ನಾಟಕದಲ್ಲಿ ವರದಿ ಜಾರಿಯಾಗಿಲ್ಲ. ರಾಜ್ಯದಲ್ಲಿ ಯಾವ ಯಾವ ಜಾತಿಗಳಿವೆ ಎಂದು ಅಧ್ಯಯನ ಮಾಡಿ, ಅವುಗಳ ಆರ್ಥಿಕ, ಶಿಕ್ಷಣ ಸ್ಥಿತಿ ಏನು ಎಂಬುದರ ಆಧಾರದ ಮೇಲೆ ಸಾಮಾಜಿಕ ಸ್ಥಾನಮಾನ ನೀಡಬೇಕು. ಜನರ ಬೇಡಿಕೆಯೇನು ಎಂಬುದನ್ನ ಅರ್ಥ ಮಾಡಿಕೊಂಡು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಬೇಕು. ಸರ್ಕಾರ ತ್ವರಿತವಾಗಿ ವರದಿಯನ್ನು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.

ಹಿರಿಯ ಹೋರಾಟಗಾರ ಎನ್ ವೆಂಕಟೇಶ್ ಮಾತನಾಡಿ, “ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವತಂತ್ರ್ಯದ ನಂತರ ಶೋಷಿತ ವರ್ಗಗಳ ಸಮಸ್ಯೆಗಳು ಏನೆಲ್ಲ ಇವೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಸರ್ಕಾರ ಮನುಧರ್ಮ ತರಬೇಕು ಎಂದು ಹವಣಿಸುತ್ತಿದೆ. ಆದರೆ, ಸಂವಿಧಾನ ಆಶಯಗಳಿಗೆ ಅನುಗುಣವಾಗಿರುವ ನ್ಯಾಯಯುತ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಇಲ್ಲ. ಈ ಬಗ್ಗೆ ಪ್ರಶ್ನಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕಾಂತರಾಜ ವರದಿಯನ್ನು ಸರ್ಕಾರ ಜಾರಿಗೆ ತರಲೇಬೇಕು” ಎಂದು ಒತ್ತಾಯಿಸಿದರು.

ಹಿರಿಯ ಹೋರಾಟಗಾರ ಅಬ್ದುಲ್ ಮನ್‌ ಸೇಠ್ ಮಾತನಾಡಿ, “ಕಾಂತರಾಜ ವರದಿ ಯಾಕೆ ಜಾರಿಯಾಗುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಾಂತರಾಜ ವರದಿ ಜಾರಿ ಮಾಡಿರಲಿಲ್ಲ. ಈ ವರದಿಯನ್ನ ಮುಚ್ಚಿ ಹಾಕಿದ್ದಾರೆ ಎಂದುಕೊಂಡಿದ್ದೆವು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವರದಿ ಜಾರಿ ಮಾಡುತ್ತದೆ ಎಂಬ ಭರವಸೆ ಇತ್ತು. ಆದರೆ, ಸರ್ಕಾರ ಈ ಬಗ್ಗೆ ಗಮನ ಕೊಡುತ್ತಿಲ್ಲ. ಕೇಂದ್ರ ಸರ್ಕಾರಕ್ಕೆ ಕಿವಿಯಿಲ್ಲ ಎಂದು ಹೇಳುತ್ತೇವೆ. ಕಾಂಗ್ರೆಸ್ ಸರ್ಕಾರಕ್ಕೂ ಕೂಡ ಕಿವಿಯಲ್ಲ. ಉಪ-ಚುನಾವಣೆ ಮುಗಿದ ತಕ್ಷಣ ಈ ಬಗ್ಗೆ ಗಮನ ಹರಿಸಲಾಗುವುದು ಎಂದಿದ್ದರು. ಆದರೆ, ಯಾವುದೇ ರೀತಿಯ ಕೆಲಸ ಮಾಡಿಲ್ಲ. ನಾವು ಗಾಂಧೀಜಿಯ ಅಸ್ತ್ರ ಹಿಡಿಯಬೇಕಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ರಾಜ್ಯ ಬಜೆಟ್ | ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅನುದಾನ ಒದಗಿಸುವಂತೆ ಎಸ್‌ಐಓ ಆಗ್ರಹ

ಡಾ. ಮನೋಹರ್ ಚಂದ್ರ ಪ್ರಸಾದ್ ಮಾತನಾಡಿ, “ಕಾಂತರಾಜ ವರದಿ ಜಾರಿಗೆ ಬರಲೇಬೇಕು. ಕಳೆದ ಬೈ ಎಲೆಕ್ಷನ್ ವರೆಗೂ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ಕೆಲಸ ಮಾಡಿದ್ದೇವೆ. ಈಗ ಎಲ್ಲ ಚುನಾವಣೆಗಳು ಮುಗಿದಿವೆ. ನಾವಿನ್ನೂ ನಿರೀಕ್ಷೆಯಲ್ಲಿದೆ. ಆದಷ್ಟು ಬೇಗ ಸರ್ಕಾರ ವರದಿಯನ್ನು ಜಾರಿಗೆ ತರಬೇಕು. ಇಲ್ಲವಾದರೇ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಕಾಣುವುದು ಕಷ್ಟವಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.

“ಕಾಂತರಾಜ ವರದಿಯನ್ನು ಜಾರಿಗೆ ತನ್ನಿ ಎಂದು ಹೇಳುತ್ತಿಲ್ಲ. ಮೊದಲು ಅದನ್ನ ಬಿಡುಗಡೆ ಮಾಡಿ, ಜನರ ಮುಂದೆ ಇಡಿ ಎನ್ನುತ್ತಿದ್ದೇವೆ. ಯಾವ ಆಧಾರದ ಮೇಲೆ ನೀವು ಮೀಸಲಾತಿ ಹಂಚುತ್ತಿದ್ದೀರಿ? ಹಲವು ವರ್ಷಗಳ ಹಿಂದೆ ಇರುವ ವರದಿಯ ಆಧಾರದ ಮೇಲೆ ಮೀಸಲಾತಿ ಹಂಚಲಾಗುತ್ತಿದೆ. ಆದರೆ, ಈ ವರದಿ 11 ವರ್ಷ ಹಳೆಯದು ಎನ್ನುತ್ತೀರಿ. ಅದಕ್ಕೂ ಹಿಂದಿನ ವರದಿಗಳ ಆಧಾರದ ಮೇಲೆ ಮೀಸಲಾತಿ ನೀಡುತ್ತಿರುವಾಗ, 11 ವರ್ಷಗಳ ಹಿಂದಿನ ವರದಿಯನ್ನು ಜಾರಿಗೆ ತರುವುದರಲ್ಲಿ ಸಮಸ್ಯೆಯಿಲ್ಲ” ಎಂದು ಕೆ.ಎಂ ರಾಮಚಂದ್ರಪ್ಪ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

Download Eedina App Android / iOS

X