ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಖಾತ್ರಿಪಡಿಸುವಂತೆ ಆಗ್ರಹಿಸಿ ಎಸ್‌ಯುಸಿಐ(ಕಮ್ಯುನಿಸ್ಟ್) ವತಿಯಿಂದ ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಆಸ್ಪತ್ರೆಗಳಿಗೆ ಭೇಟಿ ನೀಡಿ ಸಮಸ್ಯೆ ಸರಿಪಡಿಸಿ, ಬಡಜನರ ಅರೋಗ್ಯ ರಕ್ಷಣೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ ಅವರಿಗೆ ಮನವಿ ಸಲ್ಲಿಸಿದರು.
ಪಕ್ಷದ ಮುಖಂಡ ಶರಣು ಗಡ್ಡಿ ಮಾತನಾಡಿ, “ಕೊಪ್ಪಳ ಜಿಲ್ಲಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಎಚ್‌ಸಿ, ಸಿಎಚ್‌ಸಿ ಮತ್ತು ತಾಲೂಕು ಆಸ್ಪತ್ರೆಗಳಿಂದ ಹಿಡಿದು ಜಿಲ್ಲಾಸ್ಪತ್ರೆವರೆಗೂ ಸಾಕಷ್ಟು ಸಮಸ್ಯೆಗಳಿವೆ. ಅವಶ್ಯಕತೆ ಇರುವಷ್ಟು ತಜ್ಞ ವೈದ್ಯರು, ದಾದಿಯರು ಸೇರಿದಂತೆ ಇತರ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆಧುನಿಕ ಯಂತ್ರೋಪಕರಣಗಳ ಕೊರತೆಯಿದೆ” ಎಂದರು.
“ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಸ್ಕ್ಯಾನಿಂಗ್, ರಕ್ತ ಪರೀಕ್ಷೆ, ಸರ್ಜರಿ ಸೇರಿದಂತೆ ಇತರೆ ಉಚಿತ ತಪಾಸಣೆಗಳು ಸರಿಯಾದ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಸಿಟಿ ಸ್ಕ್ಯಾನ್ ಮಾಡಲು ಹಣ ಸಂಗ್ರಹ ಮಾಡಲಾಗುತ್ತಿದೆ. ಎಂಆರ್‌ಐ ಸೌಲಭ್ಯ ಇಲ್ಲವಾಗಿದೆ. ಇನ್ನೊಂದೆಡೆ ಚೀಟಿ, ಔಷಧಿ ಮತ್ತು ಹಣ ಪಾವತಿ ಕೌಂಟರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ದಿನವಿಡೀ ನೂರಾರು ರೋಗಿಗಳು ಪಾಳಿಯಲ್ಲಿ ನಿಲ್ಲುವ ಪರಿಸ್ಥಿತಿಯಿದೆ. ಬಡರೋಗಿಗಳು ತಮ್ಮ ದಿನಗೂಲಿ ಬಿಟ್ಟು ಸಣ್ಣಪುಟ್ಟ ಕಾಯಿಲೆಗಳಿಗೂ ವಾರಗಟ್ಟಲೆ ಆಸ್ಪತ್ರೆಗೆ ಆಲೆದಾಡುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ಆಸ್ಪತ್ರೆಯ ಔಷಧಾಲಯಗಳಲ್ಲಿ ಉತ್ತಮ ಗುಣಮಟ್ಟದ ಔಷಧಿ ಪೂರೈಕೆಯಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ಜನರ ಸೇವೆಗೆ ಲಭ್ಯವಾಗುತ್ತಿಲ್ಲ. ಸ್ವಚ್ಛತೆ ಇಲ್ಲದೆ ಆಸ್ಪತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಈ ಕಾರಣಗಳಿಂದ ಬೇಸತ್ತು ಅನೇಕ ಬಾರಿ ಜನರು ಅಸಹಾಯಕರಾಗಿ ದುಬಾರಿ ವೆಚ್ಚದ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಶರಣು ಪಾಟೀಲ್ ಮಾತನಾಡಿ, “ಆರೋಗ್ಯ ಒಂದು ಅವಶ್ಯಕ ಸಾರ್ವಜನಿಕ ಸೇವೆಯಾಗಿದೆ. ಆದರೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣದ(ಎಲ್‌ಪಿಜಿ) ಕಾರಣದಿಂದಾಗಿ ಇಂದು ಆರೋಗ್ಯಕ್ಷೇತ್ರ ಲಾಭದಾಹಿ ಉದ್ದಿಮೆಯಾಗಿ ಮಾರ್ಪಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆರೋಗ್ಯ ಸೇವೆಗಳಿಗೆ ನಿಗದಿಯಾಗಿರುವ ಬಜೆಟ್ ಪ್ರಮಾಣ ಕಡಿಮೆ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಆಸ್ಪತ್ರೆ ಸೌಲಭ್ಯಕ್ಕೆ ತಗಲುವ ವೆಚ್ಚವನ್ನು ಭರಿಸಲಾಗದೆ ಅದೆಷ್ಟೋ ಬಡಜೀವಗಳು ಸಾವನ್ನಪ್ಪುತ್ತಿವೆ. ಇವು ಸಹಜ ಸಾವಲ್ಲ; ಬಡವರನ್ನು ಅಸಹಾಯಕ ಸ್ಥಿತಿಗೆ ತಳ್ಳಿ ವ್ಯವಸ್ಥೆ ಮಾಡುತ್ತಿರುವ ಕ್ರೂರ ಕೊಲೆಗಳಾಗಿವೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಧರ್ಮಸ್ಥಳ ಸಂಘ ಸಂಸ್ಥೆಯ ಕಿರುಕುಳಕ್ಕೆ ಬೆಸತ್ತ ಮಹಿಳೆ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
“ಇತ್ತೀಚಿನ ಹಲವು ವರದಿಗಳನ್ವಯ ಬೆಳಗಾವಿ, ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿದಂತೆ ರಾಜ್ಯದ ಹಲವಾರು ಕಡೆ ಬಾಣಂತಿಯರು ಮತ್ತು ನೂರಾರು ಹಸುಗೂಸುಗಳು ಸಾವನ್ನಪ್ಪಿವೆ. ಪಶ್ಚಿಮ ಬಂಗಾಳದಿಂದ ಆಮದು ಮಾಡಿಕೊಂಡ ಸೋಂಕಿತ ಹಾಗೂ ಕಳಪೆ ಗುಣಮಟ್ಟದ ಔಷಧಿಗಳೇ ಈ ಬಾಣಂತಿಯರ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ. ಇದು ಸರ್ಕಾರದ ಬೇಜವಾಬ್ದಾರಿತನದ ಮಟ್ಟವನ್ನು ತೋರಿಸುತ್ತದೆ. ಬಡ ಮಹಿಳೆಯರ ಪಾಲಿಗೆ ಸರ್ಕಾರಿ ಆಸ್ಪತ್ರೆಗಳೇ ಸಾವಿನ ಕೂಪಗಳಾಗುತ್ತಿವೆ. ಕೊಪ್ಪಳ ಜಿಲ್ಲೆಯಲ್ಲಿರುವ ಎಲ್ಲ ಹಂತದ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮತ್ತು ಅರೋಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕೊಡಲೇ ಸ್ಥಳ ವೀಕ್ಷಣೆ ಮಾಡುವ ಮೂಲಕ ಸಮಸ್ಯೆ ಸರಿಪಡಿಸಿ ಬಡಜನರ ಅರೋಗ್ಯ ರಕ್ಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯ ಗಂಗರಾಜ ಅಳ್ಳಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಕ್ಷದ ಸದಸ್ಯರಾದ ಶಾರದಾ ಗಡ್ಡಿ, ಮಂಜುಳಾ ಎಂ, ಸುಭಾನ್ ನೀರಲಗಿ, ಸಾರ್ವಜನಿಕರಾದ ಮಂಗಳೇಶ್ ರಾಥೋಡ್, ದ್ಯಾಮಣ್ಣ ಡೊಳ್ಳಿನ್, ಈರಮ್ಮ, ಲಲಿತ, ಈರಣ್ಣ ತಾಳಕನಕಾಪುರ ಹಾಗೂ ಕೊಪ್ಪಳದ ವಿವಿಧ ಪ್ರದೇಶ ಮತ್ತು ಹಳ್ಳಿಗಳಿಂದ ಆಗಮಿಸಿದ 30ಕ್ಕೂ ಹೆಚ್ಚು ಜನರು ಇದ್ದರು.