ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ಔರಾದ್ ಕ್ಷೇತ್ರಕ್ಕೆ 11,217 ಮನೆ ಮಂಜೂರಾಗಿವೆ ಎಂದು ಮಾಜಿ ಸಚಿವ, ಶಾಸಕ ಪ್ರಭು.ಬಿ ಚವ್ಹಾಣ ತಿಳಿಸಿದ್ದಾರೆ.
ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳಲ್ಲಿ ಹೆಚ್ಚು ವಸತಿ ರಹಿತ ಜನರಿದ್ದಾರೆ. ಎಲ್ಲರಿಗೂ ಪಕ್ಕಾ ಮನೆ ಇರಬೇಕೆಂಬ ಉದ್ದೇಶದೊಂದಿಗೆ ಕ್ಷೇತ್ರಕ್ಕೆ ಹೆಚ್ಚು ಮನೆಗಳನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ. ಅದರಂತೆ ಮನೆಗಳ ಗುರಿಯನ್ನು ಹೆಚ್ಚಿಸಲಾಗಿದೆ. ಔರಾದ್ ತಾಲ್ಲೂಕಿಗೆ 6,776 ಹಾಗೂ ಕಮಲನಗರ ತಾಲ್ಲೂಕಿಗೆ 4,441 ಮನೆ ಮಂಜೂರಾಗಿವೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ₹1.75 ಲಕ್ಷ ಹಾಗೂ ಇತರೆ ಫಲಾನುಭವಿಗಳಿಗೆ ₹1.20 ಲಕ್ಷ ಸಹಾಯಧನ ನೀಡಲಾಗುತ್ತದೆ. ಒಟ್ಟು 3 ಕಂತುಗಳಲ್ಲಿ ಹಣ ಬಿಡುಗಡೆಯಾಗುತ್ತದೆ. ಮನೆ ಮಂಜೂರಾದ ನಂತರ ಜಿಪಿಎಸ್ ಕಳುಹಿಸಿದ ಬಳಿಕ ಕೂಡಲೇ ಮೊದಲ ಕಂತಿನ ಹಣ ಬಿಡುಗಡೆಯಾಗುತ್ತದೆ. ಮನೆ ನಿರ್ಮಾಣದ ಹಂತಗಳನ್ನು ಆಧರಿಸಿ ನಂತರದ ಕಂತುಗಳನ್ನು ಬಿಡುಗಡೆ ಮಾಡಲಾಗುತ್ತದೆ.
‘ಈ ಯೋಜನೆಗಾಗಿ ದಲ್ಲಾಳಿಗಳು ಹಣದ ಬೇಡಿಕೆ ಇಡಲಾಗುತ್ತಿದೆ ಎನ್ನುವ ಮಾಹಿತಿ ಗಮನಕ್ಕೆ ಬಂದಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಲ್ಲಿ ಸಂಚರಿಸಿ ಗುಡಿಸಲಿನಲ್ಲಿ ವಾಸಿಸುತ್ತಿರುವ ಮತ್ತು ಒಮ್ಮೆಯೂ ಯೋಜನೆಯ ಸೌಲಭ್ಯ ಪಡೆಯದ ಬಡವರಿಗೆ ಆದ್ಯತೆ ನೀಡಬೇಕು. ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು’ ಎಂದು ಹೇಳಿದರು.
‘ಈ ಬಗ್ಗೆ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಎಲ್ಲಿಯೂ ಲೋಪಗಳು ಜರುಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದು, ಎಲ್ಲಿಯಾದರೂ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸರ್ಕಾರಿ ಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ಪಾಠ ಮಾಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಸಾರ್ವಜನಿಕರು ಕೂಡ ಜಾಗೃತಿ ವಹಿಸಬೇಕು. ವಸತಿ ಯೋಜನೆಗೆ ಯಾರಿಗೂ ಹಣ ಕೊಡುವ ಅವಶ್ಯಕತೆಯಿಲ್ಲ. ಎಲ್ಲಿಯಾದರೂ ಹಣಕ್ಕೆ ಬೇಡಿಕೆಯಿಡುವುದು ಕಂಡುಬಂದಲ್ಲಿ ನೇರವಾಗಿ ನನ್ನ ಗಮನಕ್ಕೆ ತರಬೇಕು. ಯೋಜನೆ ಸಮರ್ಪಕವಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಶಾಸಕರು ಕೋರಿದ್ದಾರೆ.