ಟೀಂ ಇಂಡಿಯಾ ಕ್ರಿಕೆಟ್‌ನ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಕಾರಿಗೆ ಗೂಡ್ಸ್ ಅಟೋ ಗುದ್ದಿದ ಘಟನೆ ಮಂಗಳವಾರ ಸಂಜೆ(ಫೆಬ್ರವರಿ 04) ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ.
ರಾಹುಲ್ ದ್ರಾವಿಡ್ ಅವರು ಸಂಜೆ 6.30ರ ವೇಳೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಸಿಗ್ನಲ್‌ನಿಂದ ಹೈಗ್ರೌಂಡ್ಸ್ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಜಾಮ್ ಆಗಿತ್ತು. ದ್ರಾವಿಡ್ ಅವರು ಕಾರನ್ನು ನಿಲ್ಲಿಸಿದ್ದಾಗ ಹಿಂದಿನಿಂದ ಗೂಡ್ಸ್ ರಿಕ್ಷಾ ಗುದ್ದಿದೆ. ಗುದ್ದಿದ ನಂತರ ದ್ರಾವಿಡ್ ಕಾರಿನಿಂದ ಕೆಳಗಡೆ ಇಳಿದು ಪರಿಶೀಲನೆ ನಡೆಸಿದ್ದಾರೆ.
ನಂತರ ಅಟೋ ಚಾಲಕನನ್ನು ಪ್ರಶ್ನೆ ಮಾಡಿದ್ದಾರೆ. ಎದುರುಗಡೆಯಿರುವ ವಾಹನ ಹಠಾತ್ ಬ್ರೇಕ್ ಹಾಕಿದಾಗ ನಡೆದ ಘಟನೆ ಎಂದು ಚಾಲಕ ರಾಹುಲ್ ದ್ರಾವಿಡ್‌ಗೆ ಹೇಳುತ್ತಾರೆ. ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ನಂತರ ದ್ರಾವಿಡ್ ಅವರು ಗೂಡ್ಸ್ ಗಾಡಿಯ ನಂಬರ್ ಬರೆದುಕೊಂಡು ಅಲ್ಲಿಂದ ತೆರಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಟೀಂ ಇಂಡಿಯಾ ಸೋತರೂ ವರುಣ್ ಚಕ್ರವರ್ತಿಯಿಂದ ವಿನೂತನ ದಾಖಲೆ
ರಾಹುಲ್ ದ್ರಾವಿಡ್ ರಿಕ್ಷಾ ಚಾಲಕನ ಜೊತೆ ಮಾತನಾಡಿದ ವಿಡಿಯೋವನ್ನು ನಾಗರಿಕರೊಬ್ಬರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
