ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್ ಹಾಗೂ ವಿನಾಯಕನಗರ ಬಡಾವಣೆಯಲ್ಲಿ ಸೋಮವಾರ ತಡರಾತ್ರಿ ಕಳ್ಳರು ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹೊಸ ಬಡಾವಣೆಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ರಾತ್ರಿ ಸುಮಾರು 1.30 ರಲ್ಲಿ ಇಬ್ಬರು ಕಳ್ಳರು ಮಾರಕಾಸ್ತ್ರ ಹಿಡಿದು ರಾಜಾರೋಷವಾಗಿ ರಸ್ತೆಯಲ್ಲಿ ಓಡಾಡಿ ಕೆಲ ಮನೆಗಳಿಗೆ ಕಳ್ಳತನಕ್ಕೆ ವಿಫಲ ಯತ್ನವನ್ನು ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಿಗ್ಗೆ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ಗುಬ್ಬಿ ನಾಗರೀಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮುಖ್ಯ ರಸ್ತೆಯಲ್ಲಿ ಆರಾಮಾಗಿ ಓಡಾಡುವ ಕಳ್ಳರ ತಂಡ ಕಂಡ ಜನರು ಪೊಲೀಸರ ರಾತ್ರಿ ಪಾಳಿ ಬಗ್ಗೆ ಮಾತನಾಡುತ್ತಿದ್ದಾರೆ.
ಖಾಲಿ ಮನೆಯೊಂದಕ್ಕೆ ಬೀಗ ಮುರಿದು ಒಳಹೊಕ್ಕು ಏನೂ ಸಿಗದೆ ಹೊರ ನಡೆದಿದ್ದಾರೆ. ಮತ್ತೊಂದು ಬೀಗ ಮುರಿಯುವ ಪ್ರಯತ್ನ ಸಹ ಮಾಡಿದ್ದಾರೆ. ಕಳ್ಳತನ ಪ್ರಕರಣ ಯಾವುದೂ ದಾಖಲಾಗಿಲ್ಲ. ಆದರೆ ಜನರಲ್ಲಿ ಆತಂಕ ಮಾತ್ರ ಸೃಷ್ಟಿಯಾಗಿದೆ. ಕೂಡಲೇ ಪೊಲೀಸ್ ಬೀಟ್ ಕೆಲಸ ಚುರುಕು ಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.