ಕಲುಷಿತ ನೀರು ಕುಡಿದು ಸುಮಾರು 30ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಡೆದಿದೆ. ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳ ಬೇಜವಾಬ್ಧಾರಿಯಿಂದಲೇ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೊಮೆನೇಡ್ ರಸ್ತೆ ಮತ್ತು ಅಸ್ಸಾಯೆ ರಸ್ತೆ ಪ್ರದೇಶದಲ್ಲಿ ನಲ್ಲಿಗಳಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂದು ಕಳೆದ 2 ವಾರಗಳ ಹಿಂದೆಯೇ ಬಿಡಬ್ಲ್ಯೂಎಸ್‌ಎಸ್‌ಬಿ ಗಮನಕ್ಕೆ ತರಲಾಗಿತ್ತು. ಆದರೂ, ಕ್ರಮ ಕೈಗೊಂಡಿಲ್ಲ. ಕಲುಷಿತ ನೀರು ಮಿಶ್ರಣಗೊಂಡಿದ್ದ ನೀರನ್ನು ಸೇವಿಸಿ ಈವರೆಗೆ 30 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಸ್ವಸ್ಥಗೊಂಡಿರುವ 30 ಮಂದಿಯಲ್ಲೂ ಅತಿಸಾರ, ವಾಂತಿ ಮತ್ತು ನಿರ್ಜಲೀಕರಣ ಕಂಡುಬಂದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನೀರನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನೀರಿನಲ್ಲಿ ಇ-ಕೋಲಿ ಮತ್ತು ಕ್ಲೆಬ್ಸಿಲ್ಲಾ ನ್ಯುಮೋನಿಯಾದಂತಹ ಅಪಾಯಕಾರಿ ಬ್ಯಾಕ್ಟೀರಿಯಾಗಳು ಕಂಡುಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.
ನೀರು ಕಲುಷಿತಗೊಳ್ಳುತ್ತಿರುವ ಬಗ್ಗೆ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದಾರೆ. ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸಿರುವ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟಿಸ್ ನೀಡುವುದಾಗಿ ಆಯುಕ್ತರು ತಿಳಿಸಿದ್ದಾರೆ ಎಂದು ವರದಿಯಾಗಿದೆ.